ಸಾಂಸ್ಕೃತಿಕ ಶ್ರೀಮಂತಿಕೆಗೆ ಯಾವುದೂ ಸರಿಸಮವಲ್ಲ. ಆಧುನಿಕ ಕಾಲದಲ್ಲಿ ಶ್ರೀಮಂತಿಕೆಯ ಹೊಸ ಮಾನದಂಡವನ್ನು ನಾವು ತಿಳಿಯಬೇಕಾಗಿದೆ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ತಿಪಟೂರು ನಗರದ ಬಯಲು ರಂಗಮಂದಿರದಲ್ಲಿ ಕಲಾಕೃತಿ , ತಿಪಟೂರು ಧಾತ್ರಿ ರಂಗ ಸಂಸ್ಥೆ ಸಿರಿಗೇರಿ ಪ್ರಸ್ತುತ ಪಡಿಸಿರುವ ” ಕಲಾಕೃತಿ ವಸಂತೋತ್ಸವ ” 2024-25 ನೇ ಸಾಲಿನ ಧಾತ್ರಿ ತಿರುಗಾಟದ 3 ನಾಟಕಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು, ಹಾಡುಗಾರಿಕೆ, ಚಿತ್ರಕಲೆ,ಸಂಗೀತ, ನಾಟಕ ನೋಡುವ ಅಭಿರುಚಿ ಉಳ್ಳವರು,ರಾಸಾಯನಿಕ ಮುಕ್ತ ಆಹಾರ ಸೇವಿಸುವವರು ಶ್ರೀಮಂತರು ಎನ್ನಬಹುದು. ಕಾಲೇಜು ರಂಗಭೂಮಿ,ಶಾಲಾ ರಂಗಭೂಮಿ ಬೆಳೆಯದೆ ಪ್ರೇಕ್ಷಕರು ಹುಟ್ಟುವುದಿಲ್ಲ. ಪ್ರೀತಿ ತತ್ವವನ್ನು ಅಲ್ಲಿಯೇ ಹೇಳಿಕೊಡಬೇಕು. ಸಮುದಾಯ, ಸಮಾಜವನ್ನು ಆ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕಲಾತ್ಮಕವಾಗಿ ತಿಳಿಸಿಕೊಡಬೇಕು. ಎಲ್ಲಾ ವೃತ್ತಿಯನ್ನು ಅವರವರು ಒಂದು ಕಲೆಯಾಗಿ ಸ್ವೀಕರಿಸಿ ಆನಂದಿಸಬೇಕು.ಶಿಕ್ಷಕರು, ಉಪನ್ಯಾಸಕರು ಈ ಕಾಲಕ್ಕೆ ಬೇಕಾದ ದೊಡ್ಡ ಶಕ್ತಿಯನ್ನು ಕಟ್ಟಬೇಕು ಎಂದು ಹೇಳಿದರು.
ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜನರಿಗೆ ರಂಗಭೂಮಿಯ ಆಸಕ್ತಿ ಕ್ಷೀಣಿಸುತ್ತಿದೆ.ರಂಗಭೂಮಿ ಕಲಾವಿದರ ಅಭಿನಯವು ಬಹಳ ನೈಜವಾಗಿದ್ದು,ಖ್ಯಾತ ಚಲನಚಿತ್ರ ಕಲಾವಿದರು ರಂಗಭೂಮಿಯಿಂದಲೇ ಬಂದವರು.ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಿಸುವುದರಿಂದ ಅವರಿಗೆ ಹೆಚ್ಚಿನ ಗೌರವ ನೀಡಿದಂತಾಗುತ್ತದೆ.ನಾವೆಲ್ಲರೂ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನಗರಸಭಾ ಸದಸ್ಯ ಯೋಗೀಶ್ ಎಂ.ಎಸ್. ಮಾತನಾಡಿ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಬೀದಿ ನಾಟಕಗಳ ಮೂಲಕ ಜನರಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಇದೇ ರೀತಿ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಬೀದಿ ನಾಟಕದ ಮುಖಾಂತರ ಜನರಿಗೆ ತಿಳಿಸಬೇಕು ಎಂದು ಹೇಳಿದರು.
ದೇಶೀಯ ಪುರೋಹಿತಶಾಹಿಯ ಹಿಡಿತದಲ್ಲಿ ಭಾರತೀಯ ಸಮಾಜ ನಲುಗುತ್ತಿರುವಾಗ ಉದಯಿಸಿದ ದಿವ್ಯ ಜ್ಯೋತಿಗಳೇ ಸಾವಿತ್ರಿಬಾಯಿ ಫುಲೆ ದಂಪತಿಗಳು. ಅಂದಿನ ಮೌಢ್ಯ, ಅನಕ್ಷರತೆ, ಆಹಾರದ ಅಲಭ್ಯತೆ,ಆರೋಗ್ಯದ ಕಡೆಗಣನೆ ಹೀಗೆ ಎಲ್ಲಾ ಸಾಮಾಜಿಕ ಪಿಡುಗುಗಳ ವಿರುದ್ಧ ಸೆಟೆದು ನಿಂತು ಹೋರಾಡಿದ ವೀರ ಮಹಿಳೆ ಸಾವಿತ್ರಿಬಾಯಿ ಪುಲೆಯ ಜೀವನಾಧಾರಿತ ಘಟನೆಗಳನ್ನು ಬೆಂಬಲಿಸುವ ನಾಟಕ “ಸರಸತಿಯಾಗಲೊಲ್ಲೆ” ನಾಟಕ ದರ್ಶನವಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜೀನ ಪ್ರಾಂಶುಪಾಲ ಕುಮಾರಸ್ವಾಮಿ, ಕಲಾಕೃತಿ ಸಂಸ್ಥೆಯ ಪದಾಧಿಕಾರಿಗಳಾದ ತಿಪಟೂರು ಕೃಷ್ಣ,ಎಸ್.ಎಸ್. ಗಂಗಾಧರ್, ಸೋಭಾ ಜಯದೇವ್ ಮತ್ತಿತರರು ಭಾಗವಹಿಸಿದ್ದರು.