ಇತ್ತೀಚೆಗೆ ತುಮಕೂರಿನ ತಿಪಟೂರು ತಾಲೂಕು ಕಸಬಾ ಹೋಬಳಿಯ ರಂಗಾಪುರದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಗೆದ್ದವರ ವಿರುದ್ಧ ಅಪಪ್ರಚಾರ ಮಾಡಿ ವರ್ಚಸ್ಸು ಹಾಳು ಮಾಡುವ ಪಿತೂರಿ ಮಾಡುತ್ತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಹೊಸಳ್ಳಿ ವಿಶ್ವನಾಥ್ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, “ರಂಗಾಪುರ ಗ್ರಾಮ ಪಂಚಾಯತಿ ಮುಂದೆ ಕೆಲವರು ಪ್ರಚಾರ ಪಡೆಯುವ ಉದ್ದೇಶದಿಂದ ಕುಡಿಯುವ ನೀರಿನ ಮೋಟಾರ್ ಪಂಪ್ ಸೆಟ್ ಕಳ್ಳತನವಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ. ಸೊಸೈಟಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸಹಕರಿಸಿದೆ ಎಂದು, ಸೋತ ಅಭ್ಯರ್ಥಿಗಳು, ಅಭಿವೃದ್ಧಿ ಸಹಿಸದ ಕೆಲ ಪಂಚಾಯತಿ ಸದಸ್ಯರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮತ್ತು ಪಿಡಿಒ ಮೇಲೆ ಕುಡಿಯುವ ನೀರಿನ ಪಂಪ್ ಸೆಟ್ ಕಳ್ಳತನವಾಗಿದೆ ಎಂಬ ಆರೋಪ ಹೊರಿಸಿದ್ದಾರೆ. ಇದನ್ನೇ ಕಾರಣವಾಗಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿರುವುದು ಇವರ ಮನಸ್ಥಿತಿ ಯಾವ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಭಿವೃದ್ಧಿಗೆ ಅಡ್ಡಗಾಲು ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹೊಸಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ವರ್ಷದಿಂದ ನಿಷ್ಕ್ರಿಯವಾಗಿದ್ದ ಕುಡಿಯುವ ನೀರಿನ ಕೊಳವೆ ಬಾವಿಯ ಪಂಪ್ ಸೆಟ್ ತೆಗೆದು, ಉಪಯೋಗಕ್ಕೆ ಬರುವ ಕೊಳವೆ ಬಾವಿಗೆ ಬಿಡಲೆಂದು ತಿಳಿಸಿದ್ದು, ಯಾವುದೇ ಕಾರಣಕ್ಕೂ ಅದು ಕಳ್ಳತನ ಅಥವಾ ಮಾರಾಟಕ್ಕೆ ಯತ್ನಿಸಿಲ್ಲ. ಇದರಲ್ಲಿ ಯಾವುದೇ ಅನುಮಾನ ಬಂದರೆ ಸಂಬಂಧಪಟ್ಟ ಪಿಡಿಓ ಮತ್ತು ತಾಲೂಕು ಪಂಚಾಯತಿ ಇಒರನ್ನು ಸಂಪರ್ಕಿಸಿ ಅವರೇ ಸ್ಪಷ್ಟವಾದ ಉತ್ತರ ನೀಡುತ್ತಾರೆ. ನನ್ನ ಹೆಸರಿಗೆ ಕಳಂಕ ತರಲೆಂದು, ಹೀಗೆ ಮುಂದುವರೆದರೆ ಅವರುಗಳ ಮೇಲೆ ಕಾನೂನು ಹೋರಾಟದ ಅಸ್ತ್ರ ಉಪಯೋಗಿಸುತ್ತೇನೆ” ಎಂದು ತಿಳಿಸಿದರು.
ಬಿಜೆಪಿ ಮುಖಂಡ ಸುಗುಣೇಂದ್ರ ಪಾಟೀಲ್ ಮಾತನಾಡಿ, “ರಂಗಾಪುರ ಸೊಸೈಟಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹತಾಶೆಯಲ್ಲಿ ಈ ರೀತಿ ಹೇಳಿಕೆಗಳನ್ನು ನೀಡುತ್ತಾ, ಪ್ರತಿಭಟನೆಗೆ ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಪಂಚಾಯ್ತಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಮತ್ತು ಅಧಿಕಾರ ಸಿಗಲಿಲ್ಲ ಎಂಬ ದುರುದ್ದೇಶದಿಂದ ಪಂಚಾಯತಿಯಲ್ಲಿ ಯಾವುದೇ ಹಣ ದುರುಪಯೋಗವಾಗಿರುವುದಿಲ್ಲ. ಸತ್ಯಾಸತ್ಯತೆ ಅರಿತು ಮಾತನಾಡಿದರೆ ಒಳ್ಳೆಯ ಬೆಳವಣಿಗೆ. ಇವರದ್ದು ಕೀಳುಮಟ್ಟದ ರಾಜಕೀಯ ಪ್ರಜ್ಞೆಯಾಗಿದ್ದು, ಯಾವುದೋ ದುರುದ್ದೇಶ ಇಟ್ಟುಕೊಂಡು ಈ ರೀತಿ ಮಾಡುತ್ತಿರುವುದು ಗ್ರಾಮ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ಬಿಜೆಪಿ ಪಕ್ಷದ ಹೆಸರಿಗೆ ಕಳಂಕ ತರಲೆಂದು ಯತ್ನಿಸುತ್ತಿರುವ ಅವಿವೇಕಿಗಳಿಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸುತ್ತೇನೆ” ಎಂದು ಆಗ್ರಹಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಹರೀಶ್ ಮಾತನಾಡಿ, “ನಮ್ಮ ಅವಧಿಯಲ್ಲಿ ಈ ರೀತಿ ಪ್ರತಿಭಟನೆ ಮತ್ತು ಸುಳ್ಳು ಆರೋಪಗಳು ನಡೆದಿರುವುದಿಲ್ಲ. ಆದರೆ ಈಗ ಅಧ್ಯಕ್ಷರಾಗಿ ವಿಶ್ವನಾಥ್ ಆಯ್ಕೆ ಆದ ಮೇಲೆ ಅವರ ಮತ್ತು ಪಿಡಿಒ ರವರ ಮೇಲೆ ಇಲ್ಲಸಲ್ಲದ ದುರುದ್ದೇಶದ ಹೇಳಿಕೆ ನೀಡುತ್ತಾ ಪ್ರತಿಭಟನೆಗೆ ಮುಂದಾಗಿರುವುದು ಸಮಂಜಸವಲ್ಲ. ಸೊಸೈಟಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ನಕಲಿ ಬಿಲ್ ಮಾಡಿಕೊಡುವಂತೆ ಒತ್ತಾಯಿಸಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಅಧ್ಯಕ್ಷರು ಒಪ್ಪದೇ ಇದ್ದಾಗ ಈ ಪ್ರತಿಭಟನೆ ಮಾಡಿರಬಹುದು ಎಂಬುದು ಗೊತ್ತಾಗುತ್ತದೆ. ಇದು ದುರುದ್ದೇಶದ ಪ್ರತಿಭಟನೆ. ನಮ್ಮ ಪಂಚಾಯಿತಿಗೆ ತಾಲೂಕಿನಲ್ಲಿ ಒಳ್ಳೆ ಹೆಸರಿದ್ದು, ಆ ಹೆಸರಿಗೆ ಯಾರೇ ಆಗಲಿ ಕೆಟ್ಟ ಹೆಸರನ್ನು ತರಲು ಯತ್ನಿಸಿದರೆ, ನಾವುಗಳು ಕಾನೂನಿನ ರುಚಿ ತೋರಿಸುತ್ತೇವೆ” ಎಂದರು.
ಇದನ್ನೂ ಓದಿ: ತಿಪಟೂರು | ತಾಯಿ ಮಗಳ ಮೇಲೆ ಹರಿದ ಬಸ್; ಮೃತದೇಹ ಎತ್ತದಂತೆ ಗ್ರಾಮಸ್ಥರ ಧರಣಿ
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬಿಂದುಶ್ರೀ, ಮಾಜಿ ಅಧ್ಯಕ್ಷೆ ಮಮತ, ಮಾಜಿ ಉಪಾಧ್ಯಕ್ಷೆ ಇಂದ್ರಾಣಿ, ಸದಸ್ಯ ಆನಂದ್ ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜು ಕೆರಗೋಡಿ, ನಿರ್ದೇಶಕ ವಿಜಯಕುಮಾರ್, ವಿಶ್ವನಾಥ್, ಪರಮಶಿವಯ್ಯ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಧ್ರುವ ಕುಮಾರ್, ಮುಖಂಡರಾದ ವಸಂತಕುಮಾರ್, ಆಲದಹಳ್ಳಿ ಹರೀಶ್ ಮತ್ತು ದಲಿತ ಮುಖಂಡ ಪುನೀತ್ ರಂಗಾಪುರ ಸೇರಿದಂತೆ ಸದಸ್ಯರು ಮತ್ತು ಮುಖಂಡರು ಹಾಜರಿದ್ದರು.