ತೀರ್ಥಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಥ್ ಗೌಡ ಅವರು ಪತ್ರಕರ್ತರೊಂದಿಗೆ ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ತೀರ್ಥಹಳ್ಳಿಯ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ನಿರಂಜನ್ ರಥಬೀದಿಯಲ್ಲಿ ವರದಿಗಾಗಿ ತೆರಳಿದ ಸಂದರ್ಭ ವಿಡಿಯೊ ಚಿತ್ರೀಕರಿಸುವಾಗ ಅಶ್ವಥ್ ಗೌಡ ಸಿಬ್ಬಂದಿಗೆ ಸೂಚನೆ ನೀಡಿ, ಬಲವಂತವಾಗಿ ಮೊಬೈಲ್ ಫೋನ್ ಕಿತ್ತುಕೊಂಡು ಠಾಣೆಗೆ ಹೋಗಿದ್ದಾರೆ. ಮೊಬೈಲ್ ಫೋನ್ ಪಡೆಯಲು ಠಾಣೆಗೆ ಹೋದಾಗ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದ ಇತರ ಪತ್ರಕರ್ತರ ಜೊತೆಗೂ ದರ್ಪದಿಂದ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
“ತೀರ್ಥಹಳ್ಳಿ ಠಾಣೆಯಲ್ಲಿ ಅಳವಡಿಸಲಾದ ಸಿ.ಸಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ವರದಿ ನೀಡುವಂತೆ ಡಿವೈಎಸ್‌ಪಿಗೆ ಸೂಚಿಸಿದ್ದೇನೆ. ನಂತರ ಸತ್ಯಾಸತ್ಯತೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್‌ಪಿ ಮಿಥುನ್‌ಕುಮಾರ್ ಪತ್ರಕರ್ತರಿಗೆ ಭರವಸೆ ನೀಡಿದರು.

ಈ ವೇಳೆ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಪತ್ರಕರ್ತರಾದ ಎನ್. ರವಿಕುಮಾರ್, ವಿ.ಟಿ.ಅರುಣ್. ನಾಗರಾಜ ನೇರಿಗೆ, ಜೇಸುದಾಸ್, ರವಿಕುಮಾರ್ ಟೆಲೆಕ್ಸ್, ಚಂದ್ರಶೇಖರ್ ಶೃಂಗೇರಿ, ವೈದ್ಯನಾಥ, ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ಅಶ್ವಿನಿ ನಾಯಕ್, ಶಿವಾನಂದ ಕರ್ಕಿ, ಹುಚ್ಚರಾಯಪ್ಪ ಹಾಜರಿದ್ದರು.
ಆಗಿದ್ದೇನು?
ತೀರ್ಥಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರರಾದ ವಿ.ನಿರಂಜನ್ ಪೊಲೀಸರ ವರ್ತನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಸಾರ್ವಜನಿಕರೊಂದಿಗೆ ಬಹಿರಂಗವಾಗಿ ಅಸಭ್ಯವಾಗಿ ವರ್ತಿಸಿ, ಅವಾಚ್ಯವಾಗಿ ನಿಂದಿಸಿದ್ದನ್ನು ಸೆರೆ ಹಿಡಿದ ಪತ್ರಕರ್ತ ನಿರಂಜನ್ ಮೇಲೆ ಇನ್ಸ್‌ಪೆಕ್ಟರ್ ಅಶ್ವತ್ಥಗೌಡರಿಂದ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಲ್ಲದೇ, ಹಲ್ಲೆಗೂ ಮುಂದಾಗಿದ್ದಾರೆ.
ಪೊಲೀಸರ ವರ್ತನೆಯನ್ನು ಖಂಡಿಸಿದರೂ ಇದನ್ನು ಪರಿಗಣಿಸದೇ ವಿಡಿಯೋ ಡಿಲೀಟ್ ಮಾಡುವಂತೆ ಇನ್ಸ್‌ಪೆಕ್ಟರ್ ಮತ್ತು ಅವರ ಜೀಪು ಚಾಲಕ ಸಿಬ್ಬಂದಿಯಿಂದ ಬೆದರಿಕೆ ಬಂದಿದೆ. ಅಷ್ಟೇ ಅಲ್ಲದೆ, ಪತ್ರಕರ್ತ ವಿ ನಿರಂಜನ್ ಅವರ ಮೊಬೈಲ್ ಕಸಿದುಕೊಂಡು ಮೊಬೈಲ್ ನಿಂದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ.
ಅಷ್ಟೇ ಅಲ್ಲದೆ, ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವುದಾಗಿ ಇನ್ಸ್‌ಪೆಕ್ಟರ್ ಅಶ್ವತ್ಥಗೌಡ ಬೆದರಿಕೆ ಕೂಡ ಹಾಕಲಾಗಿದೆ. ಈ ದೌರ್ಜನ್ಯ ಖಂಡಿಸಿದ ಪತ್ರಕರ್ತರ ಮೇಲೂ ದೈಹಿಕ ಹಲ್ಲೆಗೂ ಇನ್ಸ್‌ಪೆಕ್ಟರ್ ಅಶ್ವತ್ಥಗೌಡ ಮುಂದಾಗಿದ್ದಾರೆ.
