ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಹುಂಡಿಯಲ್ಲಿನ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಚಾಣಾಕ್ಷತನದ ಈ ತ್ವರಿತ ಕಾರ್ಯವೈಖರಿಗೆ ಧಾರ್ಮಿಕ ದತ್ತಿ ಮತ್ತು ಧರ್ಮದಾಯ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮೀ ಪ್ರಕಾಶ್ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದವರನ್ನು ಅಭಿನಂದಿಸಿದ್ದಾರೆ.
ದೇವಸ್ಥಾನದಲ್ಲಿ ಆಗಸ್ಟ್ 11ರ ರಾತ್ರಿ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಿ ನಡೆಸಿದ್ದ ಕಳ್ಳತನ ಪ್ರಕರಣ 12ರ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್‍ಪಿ ಅರವಿಂದ್ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಇಬ್ರಾನ್ ಬೇಗ್, ಸಬ್ ಇನ್ಸ್‍ಪೆಕ್ಟರ್ ಸುಷ್ಮಾ ನೇತೃತ್ವದಲ್ಲಿ ಹೆಡ್ ಕಾನ್‍ಸ್ಟೇಬಲ್ ಲಿಂಗೇಗೌಡ, ಕಾನ್ಸ್‍ಟೇಬಲ್‍ಗಳಾದ ಮಂಜುನಾಥ, ಸುರೇಶ್ ನಾಯ್ಕ, ವಿಜಯ ಕುಮಾರ್ ಕಾರ್ಯ ಪ್ರವೃತ್ತರಾಗಿ ದಾವಣಗೆರೆ ಜಿಲ್ಲೆಯ ಸೈಯದ್ ಉಮರ್‍ನನ್ನು (30 ) ಬಂಧಿಸಿರುವುದು ಶ್ಲಾಘನೀಯ ಎಂದರು.
ಅಂತೆಯೇ ತೀರ್ಥಹಳ್ಳಿ ಠಾಣಾ ಪೊಲೀಸರು ನ್ಯಾಮತಿಯ ಗಣೇಶ್ (34 ) ಎಂಬ ಆರೋಪಿಯನ್ನು ಬಂಧಿಸುವ ಮೂಲಕ ಕೋಣಂದೂರಿನಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ಕು ಕಳವು ಪ್ರಕರಣ ಬೇಧಿಸಿದ್ದಾರೆ.
ಕೋಣಂದೂರಿನ ಸುಣ್ಣಗಾರ್ ಕೇರಿಯ ಎರಡು ಮನೆಗಳವು, ಕೆನರಾ ಬ್ಯಾಂಕ್‍ನ ಎಟಿಎಂ ಒಡೆದು ಹಣ ಕಳವಿಗೆ ಯತ್ನ, ಕುವೆಂಪು ಬಡಾವಣೆಯ ಮುರಿಗೆಪ್ಪ ಅವರ ಬೈಕ್ ಕಳವು ಪ್ರಕರಣವನ್ನು ಪತ್ತೆ ಮಾಡಿದ್ದಾರೆ.