ತಂಬಾಕು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಮತ್ತು ಹಾಸನ ಜಿಲ್ಲೆಯ ತಂಬಾಕು ಬೆಳೆಗಾರರ ಅರಕಲಗೂಡು ತಾಲೂಕು ಘಟಕದ ವತಿಯಿಂದ ತಂಬಾಕು ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಅರಕಲಗೂಡು ರಾಮನಾಥಪುರದ ಬಸವೇಶ್ವರ ಸರ್ಕಲ್‌ನಿಂದ ತಂಬಾಕು ಹರಾಜು ಮಾರುಕಟ್ಟೆವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಂಬಾಕು ಮಂಡಳಿಯ ವಿರುದ್ಧ ಘೋಷಣೆ ಕೂಗಿದರು.
40 ವರ್ಷಗಳಿಂದ ತಂಬಾಕು ಬೆಳೆಯುತ್ತ ಬಂದಿರುವ ರೈತರಿಗೆ ಭದ್ರತೆ ಇಲ್ಲದಾಗಿದೆ. ಬೆಲೆಯ ಸ್ಥಿರತೆಯಿಲ್ಲ. ಬೆಳೆಗಾರ ಮೂಕ ಪ್ರೇಕ್ಷಕನಂತಾಗಿದ್ದಾನೆ. ಸರ್ಕಾರಕ್ಕೆ ₹45 ಸಾವಿರ ಕೋಟಿ ವಿದೇಶಿ ವಿನಿಮಯ ತಂದುಕೊಡುವ ತಂಬಾಕು ಬೆಳೆಯುವ ರೈತನಿಗೆ ಕನಿಷ್ಠ ದರವನ್ನು ದಕ್ಕಿಸಿಕೊಳ್ಳಲಾಗಿಲ್ಲ ಎಂದು ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ದೂರಿದರು.
ಕಡಿಮೆ ದರ್ಜೆಯ ತಂಬಾಕನ್ನೂ ಖರೀದಿ ಮಾಡಬೇಕು. ಹೊಗೆಸೊಪ್ಪು ಮಾರಾಟಕ್ಕೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು. ಮರಣ ಹೊಂದಿದ ತಂಬಾಕು ಬೆಳೆಗಾರರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಹೊಗೆಸೊಪ್ಪು ಬೆಳೆಯನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಗೆ ತರಬೇಕು, ರೈತರು ಉತ್ಪಾದಿಸುವ ತಂಬಾಕಿನ ಎಲ್ಲ ಗ್ರೇಡ್‌ಗಳ ಸೊಪ್ಪನ್ನು ಏಕಕಾಲದಲ್ಲಿ ಮಾರಾಟಕ್ಕೆ ಅವಕಾಶ ನೀಡಬೇಕು. ಅನಧಿಕೃತ ತಂಬಾಕು ಬೆಳೆಗಾರರನ್ನು ಅಧಿಕೃತ ಬೆಳೆಗಾರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ನೆರೆಯ ಆಂಧ್ರಪ್ರದೇಶದಲ್ಲಿ ಪ್ರತಿ ಕೆ.ಜಿ. ತಂಬಾಕಿನ ಬೆಲೆ ಸರಾಸರಿ ₹310 ಇದ್ದು, ಕರ್ನಾಟಕದ ತಂಬಾಕಿಗೆ ₹250 ದಾಟುತ್ತಿಲ್ಲ. ಮರಣ ಹೊಂದಿದ ತಂಬಾಕು ಬೆಳೆಗಾರನಿಗೆ ₹50 ಸಾವಿರ ಪರಿಹಾರ ನೀಡಿ ಅವಮಾನ ಮಾಡಲಾಗುತ್ತಿದೆ. ರಾಜ್ಯದ ಮತ್ತು ಆಂಧ್ರಪ್ರದೇಶದ ರೈತರ ನಡುವೆ ತಂಬಾಕು ಮಂಡಳಿಯು ದರದ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಹಾಸನ ಸಂಸದ ಶ್ರೇಯಸ್ ಪಟೇಲ್ ಮನವಿ ಸ್ವೀಕರಿಸಿ ಮಾತನಾಡುತ್ತಾ, ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದ್ದೇನೆ. ಎಲ್ಲ ಸಮಸ್ಯೆಗಳು ಕೇಂದ್ರ, ರಾಜ್ಯ ಸರ್ಕಾರ ಮತ್ತು ವಾಣಿಜ್ಯ ಮಂತ್ರಿಗಳ ಹಂತದಲ್ಲಿ ಬಗೆಹರಿಯಬೇಕಿದ್ದು, ನಾನು ಸರ್ಕಾರಗಳ ಸಂಪರ್ಕ ಸಾಧಿಸಿ ಹಂತಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕಡಿಮೆ ದರ್ಜೆಯ ಹೊಗೆಸೊಪ್ಪನ್ನು ಕಂಪನಿಗಳು ಬಿಡ್ ಮಾಡದೇ, ಮಾರಿದರೂ ಸೂಕ್ತ ಬೆಲೆ ನೀಡುತ್ತಿಲ್ಲ ಎಂಬ ದೂರುಗಳಿದ್ದು, ಇನ್ನೆರಡು ದಿನಗಳಲ್ಲಿ ನಡೆಯಲಿರುವ ತಂಬಾಕು ಮಂಡಳಿಯ ಉನ್ನತಾ- ಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದು. ಕಡಿಮೆ ದರ್ಜೆಯ ತಂಬಾಕಿನ 4 ದಿನಗಳಿಂದ ಸ್ವಲ್ಪ ಮಟ್ಟಿಗೆ ಏರಿಕೆಯಾಗುತ್ತಿದೆ. ಮನವಿಯಲ್ಲಿರುವ ಅಂಶಗಳನ್ನು ಮಂಡಳಿಯ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಮನವಿ ಸ್ವೀಕರಿಸಿ ತಂಬಾಕು ಮಂಡಳಿಯ ಪ್ರಾದೇಶಿಕ ನಿರ್ದೇಶಕ ಲಕ್ಷ್ಮಣರಾವ್ ಮಾತನಾಡಿದರು.
ಇದನ್ನೂ ಓದಿದ್ದೀರಾ?ಹಾಸನ l ಪಿಡಿಒ ರಘುನಾಥ್ ವಿರುದ್ಧ ಗೋಣಿಸೋಮನಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಶಾಲು, ಸರ್ಕಲ್ ಇನ್‌ಸ್ಪೆಕ್ಟರ್ ವಸಂತ್, ಇನ್‌ಸ್ಪೆಕ್ಟರ್ new, ಮಾರುಕಟ್ಟೆ ಹರಾಜು ಅಧೀಕ್ಷಕರಾದ ಧನರಾಜ್, ಸವಿತಾ, ರೈತ ಸಂಘದ ಮುಗಳೂರು ಕೃಷ್ಣಗೌಡ, ಹರಳಳ್ಳಿ ತಮ್ಮೇಗೌಡ, ಸಿದ್ದಾಪುರ ಮಂಜೇಗೌಡ, ಹೊನಗಾನಹಳ್ಳಿ ಜಗದೀಶ್, ಹೊನ್ನಳ್ಳಿ ಭುವನೇಶ್, ಅಣ್ಣಾಜಪ್ಪ, ರವಿ, ಮಲ್ಲೇಶ್, ವೇದಾನಂದ, ಬಿಳಗುಲಿ ಪುಟ್ಟರಾಜು ಮತ್ತಿತರರಿದ್ದರು.
