ಶಿವಮೊಗ್ಗದ ಶಾಲೆಯೊಂದರಲ್ಲಿ ಎರಡು ವರ್ಷದ ಪುಟ್ಟ ಮಗುವಿಗೆ ಶಿಕ್ಷಕಿಯೊಬ್ಬರು ಹಲ್ಲೆ ನಡೆಸಿದ ಘಟನೆ ಸಂಬಂಧ ಮೇಲಧಿಕಾರಿಗಳಿಂದ ಸ್ಪಂದನೆ ಸಿಕ್ಕಿದ್ದು, ಮಗುವನ್ನು ಹಾಗೂ ಪೋಷಕರನ್ನು ಭೇಟಿ ಮಾಡಿರುವ ಬಿಇಒ ರಮೇಶ್ ನಾಯ್ಕ್ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಘಟನೆ ಕುರಿತು ಈ ದಿನ ಡಾಟ್ ಕಾಂ “ಶಿವಮೊಗ್ಗ | ಶಿಕ್ಷಣ ಸಚಿವರ ತವರಲ್ಲೇ ಪುಟ್ಟ ಕಂದನ ಮೇಲೆ ಹಲ್ಲೆ; ಶಾಲೆ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವರೇ?” ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಯಾದ ಕೆಲವೇ ಗಂಟೆಗಳಲ್ಲಿ ಎಚ್ಚೆತ್ತ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಹೇಮಂತ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಗುವಿನ ಮನೆಗೆ ಭೇಟಿ ಮಾಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಅದರಂತೆ ಇಂದು ಬಿಇಒ ರಮೇಶ್ ನಾಯ್ಕ್ ಮಗುವಿನ ಪೋಷಕರನ್ನು ಭೇಟಿ ಮಾಡಿ ಘಟನೆಯ ಮಾಹಿತಿ ಪಡೆದುಕೊಂಡು, ಶಾಲೆಗೆ ನೊಟೀಸ್ ನೀಡಿ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹಾಗೂ ವರದಿ ಪ್ರಕಟಿಸಿದ ಈದಿನ ಮಾಧ್ಯಮಕ್ಕೆ ಯಾವುದೇ ರೀತಿಯ ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದಾರೆ.


ವರದಿ ಪ್ರಕಟವಾದ ಬೆನ್ನಲ್ಲೇ ಮಗುವಿನ ಪೋಷಕರು ಈದಿನಗೆ ಕರೆ ಮಾಡಿ, “ಬೆದರಿಕೆ ಬರುತ್ತಿದೆ, ಶಾಲೆಯವರು ಕ್ಷಮೆ ಕೇಳುತ್ತಾರೆ ಜೊತೆಗೆ ತೊಂದರೆ ಆಗಲಿದೆ ಎನ್ನುತ್ತಾರೆ ಹೀಗಾಗಿ ಸುದ್ದಿ ಡಿಲೀಟ್ ಮಾಡಿ” ಎಂದು ಮನವಿ ಮಾಡಿಕೊಂಡಿದ್ದರು.
ಈ ಕುರಿತು ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಸಚಿವರು ಸಂತ್ರಸ್ತ ಮಗು ಹಾಗೂ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನಿಯಮ ರೂಪಿಸಬೇಕಾಗಿದೆ.
ಇದನ್ನೂ ಓದಿ: ಬೀದರ್ | ಈದಿನ ವರದಿ ಫಲಶೃತಿ : ತೊಗರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭ

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.