ನಗರದ ಟ್ರ್ಯಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ನಿಯಮಗಳ ಪಾಲನೆ, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಅದಕ್ಕಿಂತಲೂ ಹೆಚ್ಚಾಗಿ ಜನರ ಮನೋಭಾವದಲ್ಲಿ ಬದಲಾವಣೆ ಅಗತ್ಯವಿದೆ.
ಸಿಲಿಕಾನ್ ವ್ಯಾಲಿ ಎಂದೇ ವಿಶ್ವಾದ್ಯಂತ ಖ್ಯಾತಿ ಪಡೆದುಕೊಂಡಿರುವ ರಾಜಧಾನಿ ಬೆಂಗಳೂರು ಗಾರ್ಡನ್ ಸಿಟಿ ಎಂಬ ಹಿರಿಮೆಯನ್ನೂ ಹೊಂದಿವೆ. ಆದರೆ ಟ್ರ್ಯಾಫಿಕ್ ಸಮಸ್ಯೆಯಿಂದ ಅಷ್ಟೇ ಅಪಖ್ಯಾತಿಗೆ ಒಳಗಾಗಿದ್ದು, ಟ್ರೋಲ್ ಆಗುತ್ತಿದೆ. ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಉದ್ಯಮಿಗಳು, ಉದ್ಯೋಗ ಸೇರಿದಂತೆ ಪ್ರವಾಸಕ್ಕೆ ಆಗಮಿಸುವ ಮಂದಿ ಬೆಂಗಳೂರಿನ ಈ ಸಮಸ್ಯೆಯನ್ನು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
ಬೆಂಗಳೂರು 1 ಕೋಟಿಗೂ ಹೆಚ್ಚು ಜನಸಂಖ್ಯೆ ಮತ್ತು ಸುಮಾರು 1 ಕೋಟಿ ವಾಹನಗಳನ್ನು ಒಳಗೊಂಡಿದ್ದು, ನಗರದ ರಸ್ತೆಗಳು ದಿನನಿತ್ಯ ದಟ್ಟಣೆಯಿಂದ ಕೂಡಿರುತ್ತವೆ. ಇದರಿಂದ ಪ್ರಯಾಣದ ಸಮಯ ವ್ಯರ್ಥವಾಗುವುದಲ್ಲದೆ, ವಾಯುಮಾಲಿನ್ಯ, ಒತ್ತಡ ಮತ್ತು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.
ಶೇ.70ರಷ್ಟು ದ್ವಿಚಕ್ರ ವಾಹನಗಳು ಮತ್ತು ಶೇ.19ರಷ್ಟು ಕಾರುಗಳು ಈಗಾಗಲೇ ಓಡಾಡುತ್ತಿದ್ದು, ಏಪ್ರಿಲ್ 2023ರಿಂದ ಮಾರ್ಚ್ 2024ರವರೆಗೆ, 6.37 ಲಕ್ಷ ಹೊಸ ಖಾಸಗಿ ವಾಹನಗಳು ನೋಂದಾಯಿಸಲ್ಪಟ್ಟಿವೆ. ಇದರಿಂದ ಹಿಂದಿನ ವರ್ಷಕ್ಕಿಂತ ಈ ಬಾರಿ ಗಮನಾರ್ಹ ಹೆಚ್ಚಳವಾಗಿರುವುದು ಕಂಡುಬಂದಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರ್ಯಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಕುರಿತು ಜನರ ಅಸಮಾಧಾನವೂ ಹೆಚ್ಚಾಗುತ್ತಿದೆ. ಕೆಲವು ಕಡೆ ಕೇವಲ 10 ಕಿಲೋ ಮೀಟರ್ ಪ್ರಯಾಣ ಮಾಡಲು 2-3 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಬೆಂಗಳೂರಿಗರು ಆಯಾಸಗೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಸರಾಸರಿ 243 ಗಂಟೆಗಳನ್ನು ಸಂಚಾರ ದಟ್ಟಣೆಯಲ್ಲಿಯೇ ಕಳೆಯುತ್ತಿದ್ದಾರೆ. ಇದರಿಂದ ಬೆಂಗಳೂರು ನಗರಕ್ಕೆ 47,743 ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ. ಇದರ ಪರಿಹಾರಕ್ಕೆ ಸಾರ್ವಜನಿಕ ಸಾರಿಗೆ, ತಂತ್ರಜ್ಞಾನ, ರಸ್ತೆ ವಿನ್ಯಾಸ, ನೀತಿಗಳು ಮತ್ತು ಬದಲಾವಣೆಗಳು ಅಗತ್ಯವಾಗಿ ಆಗಬೇಕಿದೆ.
ಬೆಂಗಳೂರಿನ ಟ್ರ್ಯಾಫಿಕ್ ಸಮಸ್ಯೆಯ ಮೂಲ ಕಾರಣಗಳು
ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ವಾಹನಗಳು ಸರಾಗವಾಗಿ ಸಂಚರಿಸುವಂತಹ ರಸ್ತೆ ಸಂಪರ್ಕಗಳು ನಿರ್ಮಾಣವಾಗಿಲ್ಲ. ಅಲ್ಲದೆ ಒನ್‌ವೇ, ಫ್ಲೈಓವರ್‌ಗಳು ಮತ್ತು ಮೆಟ್ರೋ ರೈಲು ವ್ಯವಸ್ಥೆಯಂತಹ ಯೋಜನೆಗಳೂ ಕೂಡ ತೀವ್ರ ವಿಳಂಬವಾಗುತ್ತಿದ್ದು, ಸಾರಿಗೆಯಂತಹ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಬಿಎಂಟಿಸಿ ಬಸ್‌ಗಳು ಮತ್ತು ನಮ್ಮ ಮೆಟ್ರೋ ಸೇವೆಗಳು ವಿರಳವಾಗಿವೆ. ಅಲ್ಲದೆ ಶೇ.30ರಷ್ಟು ರಸ್ತೆ ಭಾಗವನ್ನು ಪಾರ್ಕಿಂಗ್ ಮತ್ತು ಒತ್ತುವರಿಗಳಿಂದ ಆಕ್ರಮಿಸಲಾಗಿದೆ. ಐಟಿ ಕಾರಿಡಾರ್‌ಗಳಾದ ಔಟರ್ ರಿಂಗ್ ರೋಡ್, ವೈಟ್‌ಫೀಲ್ಡ್, ಹೆಬ್ಬಾಳ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರದೇಶಗಳಲ್ಲಿ ಸಾಕಷ್ಟು ಸಮಾನಾಂತರ ರಸ್ತೆ ಸಂಪರ್ಕಗಳನ್ನು ಹೊಂದಿಲ್ಲದ ಕಾರಣ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.
ಆಗಸ್ಟ್ 2024ರ ವೇಳೆಗೆ ಸರಾಸರಿ ದೈನಂದಿನ ದಟ್ಟಣೆಯ ಉದ್ದ 1,638 ಕಿಮೀಗೆ ತಲುಪಿತ್ತು. ಇದು ಜನವರಿ 2024ಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಮಳೆಗಾಲದ ವೇಳೆ ರಸ್ತೆಯಲ್ಲಿ ನೀರು ಸಂಗ್ರಹವಾಗುವುದು, ಗುಂಡಿಗಳು ಮತ್ತು ಮೆಟ್ರೋ ನಿರ್ಮಾಣದಿಂದ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆಗಾಗಿ ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ವಿಐಪಿಗಳ ಚಲನೆಯ ಸಮಯದಲ್ಲಿ ಸೈರನ್‌ಗಳ ಬಳಕೆಯನ್ನು ನಿರ್ಬಂಧಿಸುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಮ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಐಪಿ ಸಂಚಾರದ ಸಂದರ್ಭದಲ್ಲಿ ಸೈರನ್‌ಗಳ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೆ ಇದರಿಂದ ವಾಹನ ಚಾಲಕರಲ್ಲಿ ಗೊಂದಲ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗಬಹುದು. ಇದರಿಂದ ವಿಐಪಿಯ ಮಾರ್ಗದ ಮಾಹಿತಿ ತಪ್ಪಾಗಿ ಬಹಿರಂಗವಾಗಿ, ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆಯೂ ಇದೆ. ಸೈರನ್‌ಗೆ ಬದಲಾಗಿ, ವಿಐಪಿ ಸಂಚಾರವನ್ನು ಸುಗಮಗೊಳಿಸಲು ವೈರ್‌ಲೆಸ್ ಸಂವಹನ ವ್ಯವಸ್ಥೆಯಂತಹ ದೂರ ಸಂವಹನಗಳನ್ನು ಬಳಸಲು ಸಲೀಮ್ ಸೂಚಿಸಿದ್ದಾರೆ.
ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ವಾಹನಗಳಂತಹ ತುರ್ತು ಸೇವಾ ವಾಹನಗಳಿಗೆ ಮಾತ್ರ ಅನಿವಾರ್ಯ ಸಂದರ್ಭಗಳಲ್ಲಿ ಸೈರನ್ ಬಳಕೆಗೆ ಅವಕಾಶವಿದೆ. ರಸ್ತೆ ಖಾಲಿಯಿದ್ದಾಗ ಸೈರನ್ ಬಳಸುವ ಅಗತ್ಯವಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಆದೇಶವನ್ನು ಎಲ್ಲ ಪೊಲೀಸ್ ಘಟಕಗಳಿಗೆ ತಿಳಿಸಲಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಆಸ್ಪತ್ರೆಗಳು, ಶಾಲೆಗಳು ಮತ್ತು ವಸತಿ ಪ್ರದೇಶಗಳ ಸಮೀಪ, ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.
“ಕೆಲವು ಪೊಲೀಸ್ ಮತ್ತು ವೈದ್ಯಕೀಯ ಇಲಾಖೆಯ ವಾಹನಗಳು ಅನಗತ್ಯವಾಗಿ ಸೈರನ್ ಬಳಸುವುದರಿಂದ ಶಬ್ದ ಮಾಲಿನ್ಯ ಮತ್ತು ಚಾಲಕರಲ್ಲಿ ಆತಂಕ ಉಂಟಾಗುತ್ತದೆ. ಈ ಆದೇಶದ ಮೂಲಕ ಸೈರನ್‌ನ ಸಮಂಜಸ ಬಳಕೆಯನ್ನು ಖಾತ್ರಿಪಡಿಸಲಾಗುವುದು. ಈ ಆದೇಶವು ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಮತ್ತು ಸಂಚಾರ ಸುಗಮತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮೊದಲಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಆದರೂ ಆದೇಶ ಉಲ್ಲಂಘನೆಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇನ್ನೂ ಕೆಲವು ಪರಿಹಾರಗಳು
ಬೆಂಗಳೂರಿನ ಟ್ರ್ಯಾಫಿಕ್ ಸಮಸ್ಯೆಗೆ ಕೇವಲ ಒಂದೇ ಒಂದು ಪರಿಹಾರದಿಂದ ಸಾಧ್ಯವಿಲ್ಲ; ಇದಕ್ಕೆ ಬಹುಮುಖಿ ವಿಧಾನದ ಅಗತ್ಯವಿದೆ. ಅಂತಹ ತಂತ್ರಗಳನ್ನು ಸಮಗ್ರವಾಗಿ ಜಾರಿಗೆ ತಂದರೆ, ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವೃದ್ಧಿಗೊಳಿಸುವುದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಮುಖ ಅಂಶವಾಗಿದೆ. ಹಾಗಾಗಿ ಈಗಿರುವ 6,500-7,000 BMTC ಬಸ್‌ಗಳ ಸಂಖ್ಯೆಯನ್ನು 15,000ಕ್ಕೆ ಏರಿಸಬೇಕು. ಇದರ ಜತೆಗೆ, ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಬೇಕು. ಇದರಿಂದ ವಾಯುಮಾಲಿನ್ಯವನ್ನು ಕಡಿಮೆ ಮಾಡಬಹುದು. ಮೆಟ್ರೋ ರೈಲು ಸಂಪರ್ಕವನ್ನು ತ್ವರಿತಗತಿಯಲ್ಲಿ ವಿಸ್ತರಿಸಬೇಕು. 2007ರಲ್ಲಿ ಆರಂಭವಾದ ಮೊದಲ ಹಂತದ 42 ಕಿಮೀ ರೈಲು ಮಾರ್ಗವು ಇನ್ನೂ ಪೂರ್ಣಗೊಂಡಿಲ್ಲ. ಎರಡನೇ ಹಂತದ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಮೆಟ್ರೋ ಮತ್ತು ಬಸ್ ನಿಲ್ದಾಣಗಳಿಂದ ಕೊನೆಯ ಮೈಲಿ ಸಂಪರ್ಕಕ್ಕಾಗಿ ಶೇರ್-ಆಟೋ, ಸೈಕಲ್ ಶೇರಿಂಗ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳಂತಹ ಆಯ್ಕೆಗಳನ್ನು ಒದಗಿಸಬೇಕು. ಉದಾಹರಣೆಗೆ ಲಂಡನ್ ಅಥವಾ ಸಿಂಗಪುರ್‌ನಂತಹ ಏಕೀಕೃತ ಸಾರಿಗೆ ಪ್ರಾಧಿಕಾರವನ್ನು ಸ್ಥಾಪಿಸಿ, BMTC, BMRCL ಮತ್ತು ಇತರ ಸಾರಿಗೆ ಇಲಾಖೆಗಳನ್ನು ಒಗ್ಗೂಡಿಸಬೇಕು. ಇಂತಹ ಯೋಜನೆಗಳಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು.
ತಂತ್ರಜ್ಞಾನಗಳ ಅಳವಡಿಕೆಯಿಂದ ಸಂಚಾರದ ಹರಿವನ್ನು ಉತ್ತಮಗೊಳಿಸಬಹುದು. ಬೆಂಗಳೂರು ಸಂಚಾರ ಪೊಲೀಸರಿಂದ ಜಾರಿಗೊಂಡ ASTraM(Adaptive Signal Traffic Management) ವ್ಯವಸ್ಥೆಯು ರಿಯಲ್-ಟೈಮ್ ಟ್ರ್ಯಾಫಿಕ್ ಡೇಟಾವನ್ನು ವಿಶ್ಲೇಷಿಸಿ, ಸಿಗ್ನಲ್‌ಗಳನ್ನು ಸಿಂಕ್ರೊನೈಸ್(ಏಕಕಾಲದಲ್ಲಿ) ಮಾಡುತ್ತದೆ. ಈ ವ್ಯವಸ್ಥೆಯನ್ನು ಎಲ್ಲ ಪ್ರಮುಖ ಜಂಕ್ಷನ್‌ಗಳಿಗೂ ವಿಸ್ತರಿಸಬೇಕು. ಟ್ರ್ಯಾಫಿಕ್ ಸಿಗ್ನಲ್‌ಗಳು, ವಾಹನಗಳು ಮತ್ತು ರಸ್ತೆಗಳನ್ನು ಸಂಪರ್ಕಿಸುವ ಸ್ಮಾರ್ಟ್ ಮೊಬಿಲಿಟಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಉದಾಹರಣೆಗೆ, ಗ್ಲಾಸ್ಗೋ ನಗರದಲ್ಲಿ ಬಸ್‌ಗಳ ಸ್ಥಳ, ಆಸನ ಲಭ್ಯತೆ ಮತ್ತು ಆಗಮನ ಸಮಯವನ್ನು ರಿಯಲ್-ಟೈಮ್‌ನಲ್ಲಿ ಅಂದರೆ ಏಕಕಾಲದಲ್ಲಿ ಒದಗಿಸಲಾಗುತ್ತದೆ. ಬೆಂಗಳೂರು ಟ್ರ್ಯಾಫಿಕ್ ಪೊಲೀಸ್ ತಂಡ 10 ಡ್ರೋನ್‌ಗಳನ್ನು ಬಳಸಿಕೊಂಡು ರಿಯಲ್-ಟೈಮ್ ಟ್ರ್ಯಾಫಿಕ್ ಮೇಲ್ವಿಚಾರಣೆಯನ್ನು ಆರಂಭಿಸಿದೆ. ಇದನ್ನು ಎಲ್ಲ ಪ್ರಮುಖ ಕಾರಿಡಾರ್‌ಗಳಿಗೂ ವಿಸ್ತರಿಸಬೇಕು. ಟ್ರ್ಯಾಫಿಕ್‌ನಲ್ಲಿ ಸಿಲುಕಿಕೊಂಡ ಆ್ಯಂಬುಲೆನ್ಸ್‌ಗಳಿಗೆ ತ್ವರಿತ ಮಾರ್ಗ ಮತ್ತು ಸಿಗ್ನಲ್ ಕ್ಲಿಯರೆನ್ಸ್ ಒದಗಿಸಲು ಈ ಆ್ಯಪ್‌ನ ಬಳಕೆಯನ್ನು ವಿಸ್ತರಿಸಬೇಕು.
ರಸ್ತೆಗಳ ನವೀಕರಣ ಮತ್ತು ವಿನ್ಯಾಸಗೊಳಿಸುವುದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖವಾಗಿದೆ. ದ್ವಿಚಕ್ರ ಮತ್ತು ಭಾರೀ ವಾಹನಗಳಿಗೆ ಪ್ರತ್ಯೇಕ ಮಾರ್ಗಗಳನ್ನು ರಚಿಸಬೇಕು. ಇದು ದ್ವಿಚಕ್ರ ವಾಹನಗಳ ತ್ವರಿತ ಚಲನೆಯನ್ನು ಸುಗಮಗೊಳಿಸುತ್ತದೆ. ಪಾದಚಾರಿಗಳಿಗೆ ಸಾಕಷ್ಟು ಅಗಲದ ಫುಟ್‌ಪಾತ್‌ಗಳನ್ನು ಒದಗಿಸಿ, ಒತ್ತುವರಿಗಳನ್ನು ತೆರವುಗೊಳಿಸಬೇಕು. ಜಯನಗರ 4ನೇ ಬ್ಲಾಕ್‌ನಂತಹ ಪ್ರದೇಶಗಳಲ್ಲಿ ಈ ಮಾದರಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ರಸ್ತೆಯ ಮೇಲಿನ ಅನಧಿಕೃತ ಪಾರ್ಕಿಂಗ್‌ಗೆ ಕಠಿಣ ದಂಡ ವಿಧಿಸಿ, ಬಹುಮಟ್ಟದ ಪಾರ್ಕಿಂಗ್ ಸೌಲಭ್ಯಗಳನ್ನು ನಿರ್ಮಿಸಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ನಾಯಕರು ಪ್ರಸ್ತಾಪಿಸಿರುವ ಸುರಂಗ ಮಾರ್ಗಗಳು, ಔಟರ್ ರಿಂಗ್ ರೋಡ್ ಮತ್ತು ಸಿಲ್ಕ್ ಬೋರ್ಡ್‌ನಂತಹ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿದ್ದೀರಾ? ನುಡಿ ನಮನ | ಅಚ್ಯುತಾನಂದನ್ – ಕುಟ್ಟನಾಡಿನ ಕೃಷಿ ಕಾರ್ಮಿಕರ ನಡುವೆ ಉದಯಿಸಿದ ನಾಯಕ
ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಸಂಚಾರ ದಟ್ಟಣೆ ನಿರ್ವಹಣೆಗೆ ಅನುಕೂಲವಾಗಬಹುದು. ಲಂಡನ್‌ನಂತಹ ನಗರಗಳಲ್ಲಿ ಯಶಸ್ವಿಯಾಗಿರುವ ಎಲೆಕ್ಟ್ರಾನಿಕ್ ರೋಡ್ ಪ್ರೈಸಿಂಗ್ ರೀತಿಯ ತೆರಿಗೆಯನ್ನು CBD ಪ್ರದೇಶಗಳಲ್ಲಿ ಜಾರಿಗೊಳಿಸಬಹುದು. ವಾಹನಗಳ ಬಳಕೆಯನ್ನು ದಿನದಿಂದ ದಿನಕ್ಕೆ ಸೀಮಿತಗೊಳಿಸುವ ರೋಡ್-ಸ್ಪೇಸ್ ರೇಷನಿಂಗ್ ವಿಧಾನವನ್ನು ಪರಿಚಯಿಸಬಹುದು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಸಮಯವನ್ನು ವಿಭಿನ್ನಗೊಳಿಸುವುದರಿಂದ ಪೀಕ್ ಹವರ್ಸ್(ಹೆಚ್ಚು ಜನದಟ್ಟಣೆ)ನಂತಹ ಒತ್ತಡವನ್ನು ಕಡಿಮೆ ಮಾಡಬಹುದು. ಮಾಲಿನ್ಯ ಪರೀಕ್ಷೆ ವರದಿಗಳನ್ನು ಒದಗಿಸದವರಿಗೆ ಮತ್ತು ಟ್ರ್ಯಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಕಠಿಣ ದಂಡ ವಿಧಿಸಬೇಕು.
ನಗರದ ಟ್ರ್ಯಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಜನರ ಮನೋಭಾವದಲ್ಲಿ ಬದಲಾವಣೆ ಅಗತ್ಯವಾಗಿದೆ. ಸೈಕಲ್ ಮಾರ್ಗಗಳನ್ನು ಒದಗಿಸಿ, ಸೈಕಲ್ ಶೇರಿಂಗ್ ಯೋಜನೆಗಳನ್ನು ಜಾರಿಗೊಳಿಸಬೇಕು. ಐಟಿ ಕಂಪನಿಗಳು ಕಾರ್‌ಪೂಲಿಂಗ್‌ಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಒಂದೇ ಕಾರಿನಲ್ಲಿ ಹಲವರು ಪ್ರಯಾಣಿಸಬಹುದು. ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವಂತಹ ವ್ಯವಸ್ಥೆಗಳಿಗೆ ಪ್ರೋತ್ಸಾಹಿಸಿದರೆ, ಶೇ.50ರಷ್ಟು ಟ್ರ್ಯಾಫಿಕ್ ಕಡಿಮೆಯಾಗಬಹುದು. ಅಲ್ಲದೆ ಟ್ರ್ಯಾಫಿಕ್ ನಿಯಮಗಳ ಪಾಲನೆ, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಅಲ್ಲದೆ ನಿರ್ದಿಷ್ಟವಾಗಿ ವಾಹನಗಳ ನೋಂದಣಿಗೆ ಅವಕಾಶ ನೀಡಬೇಕು. ಒಬ್ಬರ ಹೆಸರಿಗೆ ಒಂದು ದ್ವಿಚಕ್ರ ವಾಹನ ಮತ್ತು ಮೂರು ಚಕ್ರದ ವಾಹನ ಅಥವಾ ನಾಲ್ಕು ಚಕ್ರದ ವಾಹನ ಸೇರಿದಂತೆ ಒಬ್ಬರು ಎರಡು ವಾಹನಗಳನ್ನು ಮಾತ್ರ ನೋಂದಾಯಿಸಿಕೊಳ್ಳುವಂತೆ ನಿಗದಿ ಮಾಡಬೇಕು. ಇಂತಹ ಕೆಲವು ನಿರ್ಧಾರಗಳಿಂದ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು.
ಟ್ರ್ಯಾಫಿಕ್
TRAFFIC CONTROL
GO FOR PARKING CONTROL AT IMPORTANT LOCATION
PARKING FOR MORE THAN ONE HOUR at a particular place tobe checked and fined ..SHOP OWNERS. NO parking in front of shop it’s only for customer…strict lane and speed control at particular ….