ಕಳೆದ ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಉಂಟಾದ ಸ್ಥಳದಲ್ಲಿ ಡ್ರಜ್ಜಿಂಗ್ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ನಡೆಸಿದ ಕಾರ್ಯಾಚರಣೆಯ ವೇಳೆ ಮೂಳೆಯೊಂದು ಪತ್ತೆಯಾಗಿದೆ.
ಅಂಕೋಲಾದ ಗಂಗಾವಳಿ ನದಿಯಲ್ಲಿ ಬಿದ್ದಿರುವ ಅವಶೇಷಗಳ ಪತ್ತೆ ಕಾರ್ಯ ಸೋಮವಾರ ಕೂಡ ಮುಂದುವರಿಸಲಾಗಿದೆ. ಭಾನುವಾರ ನಡೆಸಿದ ಕಾರ್ಯಾಚರಣೆಯ ವೇಳೆ ನೀರಿನಾಳದಲ್ಲಿ ಲಾರಿಯ ಇಂಜಿನ್, ಸ್ಕೂಟಿ ಮತ್ತು ಮೂಳೆಯೊಂದು ಸಿಕ್ಕಿದೆ. ಸಿಕ್ಕಿರುವ ಮೂಳೆಯು ಮನುಷ್ಯರದ್ದೋ ಅಥವಾ ಬೇರೆಲ್ಲಿಂದಾದರೂ ನದಿಯಲ್ಲಿ ತೇಲಿ ಬಂದದ್ದೋ ಎನ್ನುವುದನ್ನು ತಿಳಿಯಲು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ.
ಮೂರನೇ ದಿನದ ಡ್ರೆಜ್ಜರ್ ಕಾರ್ಯಾಚರಣೆಯಲ್ಲಿ ಮೂಳೆ ದೊರೆತಿದ್ದು, ಇದು ನಾಪತ್ತೆಯಾದ ಮೂವರಲ್ಲಿ ಯಾರದ್ದೆಂದು ತಿಳಿಯಲು ಡಿಎನ್‌ಎ ಟೆಸ್ಟ್ಗೆ ಕಳುಹಿಸಲಾಗಿದೆ. ಈ ಮೂಳೆ ಕಾಣೆಯಾದವರ ಕುಟುಂಬದ ಡಿಎನ್‌ಎಗೆ ತಾಳೆ ಆಗಲಿದೆಯಾ ಎಂಬುದರ ಪರೀಕ್ಷೆ ಸಹ ನಡೆಯಲಿದೆ. ಈಗಾಗಲೇ ನಾಪತ್ತೆಯಾದವರ ಕುಟುಂಬದವರ ಡಿಎನ್‌ಎಯನ್ನು ಜಿಲ್ಲಾಡಳಿತ ಸಂಗ್ರಹಿಸಿಟ್ಟಿದೆ.

ಕಾರ್ಯಾಚರಣೆ ವೇಳೆ ಪತ್ತೆಯಾದ ಲಾರಿಯ ಇಂಜಿನ್ ಬೆಂಜ್ ಲಾರಿಯದ್ದೋ ಅಥವಾ ಕೊಚ್ಚಿ ಹೋದ ಟ್ಯಾಂಕರ್‌ನದ್ದೋ ಎಂಬುದು ಖಚಿತವಾಗಿಲ್ಲ. ಶನಿವಾರದ ಕಾರ್ಯಾಚರಣೆಯಲ್ಲಿ ಟ್ಯಾಂಕರ್‌ನ ಕ್ಯಾಬಿನ್‌ನ ಭಾಗ ಹಾಗೂ ಟ್ಯಾಂಕರ್‌ನ ಎದುರಿನ ಎರಡು ಟಯರ್‌ಗಳು ಕಂಡುಬಂದಿದ್ದವು.
ಗೋವಾದಿಂದ ತರಿಸಲಾದ ಬಾರ್ಜ್ ನಿಧಾನವಾಗಿ ಕಾರ್ಯಾಚರಿಸುತ್ತಿದೆ. ದಿನಕ್ಕೆ ಒಂದೆರಡು ಬಾರ್ಜ್ ಮಾತ್ರ ಹೂಳು ತೆಗೆದು ಹಾಕಲು ಸಾಧ್ಯವಾಗುತ್ತಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ತಂಡ ಭಾನುವಾರ ಬೆಂಜ್ ಲಾರಿಯೊಳಗಿದೆ ಎನ್ನಲಾದ ಅಕೇಶಿಯಾ ಮರದ ತುಂಡುಗಳನ್ನು ನೀರಿನಾಳದಿಂದ ದಡಕ್ಕೆ ತಂದಿತ್ತು. ಅಲ್ಲದೇ, ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದ ನೀರಿನಾಳದಲ್ಲಿ ಸ್ಕೂಟಿ ಒಂದನ್ನು ಪತ್ತೆ ಮಾಡಿದ್ದು, ನದಿಯಿಂದ ಮೇಲಕ್ಕೆತ್ತಲಾಗಿದೆ.
ಭಾನುವಾರ ಕಾರ್ಯಾಚರಣೆ ಪರಿಶೀಲಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, “ಗಂಗಾವಳಿ ನದಿಯಲ್ಲಿ ಮೃತದೇಹ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಯತ್ನ ಮಾಡಲಾಗುತ್ತಿದೆ. ಈಗ 10 ದಿನಗಳ ಕಾಲ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಕೆಲವು ವಸ್ತುಗಳು ಸಿಗುತ್ತಿವೆ. ಇದಕ್ಕಿಂತ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಲಾರಿ, ನಾಪತ್ತೆಯಾದವರ ಕುರುಹು ಸಿಗಬಹುದು ಎಂಬ ನಿರೀಕ್ಷೆ ಇದೆ. ಇಲ್ಲದಿದ್ದರೆ ಕಾರ್ಯಾಚರಣೆಯನ್ನು ಬಂದ್ ಮಾಡುವ ಯೋಚನೆ ಇದೆ” ಎಂದು ತಿಳಿಸಿದ್ದಾರೆ.

ಅಲ್ಲದೇ, ಡ್ರೆಜ್ಜಿಂಗ್ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕಾರವಾರ ಶಾಸಕ ಸತೀಶ್ ಸೈಲ್ ಮಾತನಾಡಿ, ಈಗ ಗಂಗಾವಳಿ ನದಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಟ್ರಕ್ ಬಿಡಿಭಾಗಗಳು, ಸ್ಕೂಟಿ ಪತ್ತೆಯಾಗಿವೆ. ಕಾರ್ಯಾಚರಣೆ 80 ತಾಸು ,ಅಂದರೆ ಹತ್ತು ದಿವಸ ನಡೆಯಲಿದೆ. ಈ ಬಗ್ಗೆ ಸಂಶಯ ಬೇಡ ಎಂದು ಹೇಳಿದ್ದಾರೆ.
ಶವಗಳ ಹುಡುಕಾಟ ಇನ್ನೂ ಎರಡು ದಿನ ನಡೆಯಲಿದೆ. ನಂತರ ನದಿಯ ಆಳಕ್ಕೆ ಹಾಗೂ ಇತರೆಡೆಗೆ ನದಿಗೆ ಬಿದ್ದ ಕಲ್ಲು ಮಣ್ಣು ತೆಗೆಯಲಾಗುವುದು. ಅಗತ್ಯ ಬಿದ್ದರೆ ಕಾರ್ಯಾಚರಣೆ ಸಮಯ ಹೆಚ್ಚಿಸಲಾಗುವುದು. ಕೇರಳದ ಅರ್ಜುನ್ ಸಹೋದರಿ ಹೇಳಿದ ಕಡೆ ಕಾರ್ಯಾಚರಣೆ ನಡೆಯಲಿದೆ ಎಂದರು.
ಕೇರಳದ ಲಾರಿ ಚಾಲಕ ಅರ್ಜುನ್‌ನ ಕುಟುಂಬದ ಸದಸ್ಯರು, ಅರ್ಜುನ್ ಚಲಾಯಿಸುತ್ತಿದ್ದ ಲಾರಿಯ ಮಾಲೀಕ ಮುನಾಫ್ ಹಾಗೂ ಕೇರಳದ ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳ ಪ್ರತಿನಿಧಿಗಳು ಶಿರೂರಿನಲ್ಲೇ ಬೀಡುಬಿಟ್ಟಿದ್ದಾರೆ.
ಮೃತದೇಹ ಅಥವಾ ಅರ್ಜುನ್ ಲಾರಿ ಸಿಗುವವರೆಗೂ ಶಿರೂರಿನಲ್ಲೇ ನೆಲೆಸುವುದಾಗಿ ಲಾರಿಯ ಮಾಲೀಕ ಮುನಾಫ್ ಹಾಗೂ ಲಾರಿ ಚಾಲಕ ಅರ್ಜುನ್‌ನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಬೇರೆ ಲಾರಿಯೂ ಮುಳುಗಿತ್ತೇ?
ದುರಂತದಲ್ಲಿ ನದಿಯಲ್ಲಿ ಮುಳುಗಿದ ಭಾರತ್ ಬೆಂಜ್ ಲಾರಿ ಮತ್ತು ಟಾಟಾ ಕಂಪನಿಯ ಗ್ಯಾಸ್ ಟ್ಯಾಂಕರ್ ಇದೆ ಎಂದು ಗೊತ್ತಾಗಿತ್ತು. ಆದರೆ ರವಿವಾರದ ಕಾರ್ಯಚರಣೆಯಲ್ಲಿ ಲಾರಿ ಇಂಜಿನ್ ಒಂದರ ಪ್ಲೇಟ್ ಪತ್ತೆಯಾಗಿದ್ದು , ಸಿಕ್ಕ ಎಂಜಿನ್ ಪ್ಲೇಟ್ ನಲ್ಲಿ ಹಿಂದೂಜಾ ಗ್ರೂಪ್‌ನ ಅಶೋಕ ಲೈಲ್ಯಾಂಡ್ ಲಾರಿ ಎಂಜಿನ್ ಪ್ಲೇಟ್ ಸಿಕ್ಕಿದೆ. ಇದು ಹಿಂದೂಜಾ ಗ್ರೂಪಿಗೆ ಸೇರಿದ್ದಾಗಿದೆ. ಗಂಗಾವಳಿ ನದಿಯಲ್ಲಿ ಮತ್ತೊಂದು ಲಾರಿ ಮುಳುಗಿತ್ತೇ ಎನ್ನುವ ಚರ್ಚೆ ಕೂಡ ನಡೆದಿದೆ.

ಶಿರೂರು ಹೆದ್ದಾರಿಯಲ್ಲಿ ಮಣ್ಣು ಕುಸಿತದ ಘಟನೆ ಕಳೆದ ಜುಲೈ 16 ರಂದು ಸಂಭವಿಸಿತ್ತು. 11 ಜನ ನಾಪತ್ತೆಯಾಗಿದ್ದರು. 8 ಜನರ ಶವ ದೊರೆತಿದ್ದವು. 3 ಜನರಿಗಾಗಿ ಹುಡುಕಾಟ ನಡೆದಿತ್ತು. ಜೊತೆಗೆ ಕೇರಳ ಮೂಲದ ಟಿಂಬರ್ ತುಂಬಿದ ಲಾರಿ ಹಾಗೂ ಒಂದು ಟ್ಯಾಂಕರ್ ಕಾಣೆಯಾಗಿದ್ದವು. ಈಗ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಲಾರಿಯ ಬಿಡಿಭಾಗಗಳು, ಸ್ಕೂಟಿ ಲಭ್ಯವಾಗಿವೆ.
