ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ವಿಹಂಗಮ ಹಾಲಿಡೇ ರಿಟ್ರೀಟ್ ಎಂಬ ಖಾಸಗಿ ರೆಸಾರ್ಟ್‌ನ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಲೋಕೇಶ್ ಅವರನ್ನು ಎರಡು ದಿನಗಳಲ್ಲಿಯೇ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಗೆ ತಡೆ ನೀಡುವಂತೆ ಅಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ತಾಲೂಕಿನ ಭಾರತೀಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಬಫರ್ ಝೋನ್ ಒಳಗೆ ಕಾರ್ಯಾಚರಿಸುತ್ತಿದ್ದು, ಕೃಷಿ ಚಟುವಟಿಕೆಗಳ ಒಳಗೊಂಡಿರುವ ರೆಸಾರ್ಟ್ ಜೊತೆಗೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಅನುಮತಿ ನೀಡಿದವರು ಯಾರೆಂದು ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಶಿವಮೊಗ್ಗ ಜಿಲ್ಲಾಡಳಿತವನ್ನು ಪ್ರಶ್ನಿಸಿ, ಪತ್ರ ಬರೆದಿದ್ದರು. ಅಲ್ಲದೇ, ಈ ಬಗ್ಗೆ ಈ ದಿನ.ಕಾಮ್ ಕೂಡ ವರದಿ ಪ್ರಕಟಿಸಿತ್ತು.
ಜಿಲ್ಲಾಡಳಿತದಿಂದ ಪತ್ರ ಬಂದಿದ್ದರಿಂದ ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಡಾ. ಲೋಕೇಶ್ ಸ್ಥಳಕ್ಕೆ ತೆರಳಿ, ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅರಣ್ಯ ಕಾಯ್ದೆ ಉಲ್ಲಂಘಿಸಿದ್ದಾರೆ. ಅದನ್ನು ಕೂಡಲೇ ತೆರವುಗೊಳಿಸಲು ವರದಿ ನೀಡಿದ್ದರು.

ಈ ವರದಿ ನೀಡಿದ ಎರಡೇ ದಿನದಲ್ಲಿ ಡಾ. ಲೋಕೇಶ್ ಎಸ್. ಎಲ್. ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಲೋಕೇಶ್ ಅವರು ತೀರ್ಥಹಳ್ಳಿಗೆ ಬಂದು, ಕೇವಲ ಒಂದು ವರ್ಷ 9 ತಿಂಗಳು ಮಾತ್ರ ಆಗಿದ್ದು, 2 ವರ್ಷ ಕೂಡ ಪೂರ್ಣ ಆಗಿಲ್ಲ. ಆ ಮೊದಲೇ ವರ್ಗಾವಣೆ ಮಾಡಲಾಗಿದೆ. ಹೀಗಾಗಿ, ಈ ವರ್ಗಾವಣೆಗೆ ತಡೆ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ ಡಾ.ಲೋಕೇಶ್, “ನಾನು ಪ್ರಾಮಾಣಿಕವಾಗಿ ಬಹಳಷ್ಟು ಕಡೆ ಹೊಸ ಒತ್ತುವರಿ ತಡೆಯುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ತೀರ್ಥಹಳ್ಳಿ ತಾಲೂಕಿನ ವಲಯ ಅರಣ್ಯ ಅಧಿಕಾರಿಯಾಗಿ ಬಂದು ಕೇವಲ 1 ವರ್ಷ 9 ತಿಂಗಳು ಆಗಿದ್ದು, 2 ವರ್ಷ ಕೂಡ ಪೂರ್ಣ ಆಗಿಲ್ಲ. ಅವಧಿಗೂ ಮೊದಲೇ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಹಾಗಾಗಿ, ಇದನ್ನು ಪ್ರಶ್ನಿಸಿ ಎರಡು ದಿನದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ” ಎಂದು ತಿಳಿಸಿದರು.

ವಿಹಂಗಮ ರೆಸಾರ್ಟ್ ವಿರುದ್ಧ ಬಂದಿದ್ದ ದೂರನ್ನು ಆಧರಿಸಿ, ವರದಿ ನೀಡಿದ್ದೇನೆ. ಎಫ್ ಐ ಆರ್ ಮಾಡಿ ಕ್ರಮ ಜರುಗಿಸಲು ತಿಳಿಸಿದ್ದೇನೆ. ವರದಿ ಕೊಟ್ಟ ಮಾರನೇ ದಿನಕ್ಕೆ ವರ್ಗಾವಣೆ ಆದೇಶ ಬಂದಿದೆ. ಹಾಗಾಗಿ, ನನ್ನ ಮೇಲೆ ವರ್ಗಾವಣೆ ಅಸ್ತ್ರ ಪ್ರಯೋಗ ಆಗಿರಬಹುದು ಎಂದು ಡಾ.ಲೋಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ಆರೋಪ; ವಿಹಂಗಮ ಹಾಲಿಡೇ ರಿಟ್ರೀಟ್ ವಿರುದ್ಧ ಕ್ರಮ
ವರದಿ ಕೊಟ್ಟ ಎರಡೇ ದಿನದಲ್ಲಿ ವರ್ಗಾವಣೆ ಮಾಡಿರುವುದು ಸಾರ್ವಜನಿಕರಲ್ಲೂ ಕೂಡ ಅನುಮಾನ ಮೂಡಿಸಿದೆ. ಅಕ್ರಮದ ಬಗ್ಗೆ ಪ್ರಾಮಾಣಿಕವಾಗಿ ವರದಿ ಕೊಟ್ಟ ಬೆನ್ನಲ್ಲೇ ಈ ಅಧಿಕಾರಿಯ ವರ್ಗಾವಣೆ ಹಿಂದೆ ಇರುವ ಕಾಣದ ಶಕ್ತಿ ಯಾರು ಎಂಬ ಪ್ರಶ್ನೆ ಕೂಡ ಮೂಡಿದೆ. ಈ ವರ್ಗಾವಣೆಗೆ ನ್ಯಾಯಾಲಯವು ತಡೆ ನೀಡುತ್ತಾ, ಕಾದು ನೋಡಬೇಕಿದೆ.
