ಓದು ಅಧ್ಯಯನಗಳೇ ಬದುಕಿನ ಭವಿಷ್ಯದ ನಿಜವಾದ ಮಾರ್ಗವಾಗಿದೆ. ದುಶ್ಚಟಗಳು ಮನಸ್ಸಿನಲ್ಲಿ ಖಿನ್ನತೆ ಉಂಟುಮಾಡಿ ಅಪರಾಧ ಮನೋಭಾವ ಹುಟ್ಟಲು ಕಾರಣವಾಗಿವೆ ಎಂದು ಬಸವಕಲ್ಯಾಣ ನಗರ ಠಾಣೆ ಪಿಎಸ್ಐ ಅಂಬರೀಶ ವಾಗ್ಮೋಡೆ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಮಾದಕ ವಸ್ತುಗಳ ಜಾಲದಲ್ಲಿ ಸಿಲುಕಿದರೆ ಅದರಿಂದ ಹೊರ ಬರಲು ಸಾಧ್ಯವಿಲ್ಲ. ಮಾದಕ ವಸ್ತು ಸೇವನೆ ಮತ್ತು ಮಾರಾಟ ಎರಡೂ ಅಪರಾಧಗಳಾಗಿವೆ’ ಎಂದರು.
‘ಭಾರತದ ಒಟ್ಟು ಜನಸಂಖ್ಯೆಯಲ್ಲಿ ಏಳುವರೆ ಕೋಟಿ ಯುವ ಸಮುದಾಯ ಮಾದಕ ವ್ಯಸನಿಗಳಾಗಿದ್ದಾರೆ. ಮಾದಕ ವ್ಯಸನಿಗಳು ಎಲ್ಲ ವಯೋಮಾನದವರು ಇದ್ದಾರೆ. ಅದರಲ್ಲಿ ತರುಣರ ಪ್ರಮಾಣ ಹೆಚ್ಚಾಗಿದೆ. ಮಾದಕ ವಸ್ತು ಸೇವಿಸಿದ ನಂತರದಲ್ಲಿಯೇ ಹೆಚ್ಚು ಅಪರಾಧದಲ್ಲಿ ತೊಡಗಿದ್ದಾರೆ. ಓದು, ಬರಹ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿ ಬದುಕು ಹಸನು ಮಾಡಿಕೊಳ್ಳು ಪ್ರಯತ್ನ ಎಲ್ಲರೂ ಮಾಡಬೇಕು’ ಎಂದು ಸಲಹೆ ನೀಡಿದರು.
‘ನಮ್ಮ ಅಧ್ಯಯನಕ್ಕೆ ಯೋಗ್ಯವಾದ ಹಲವು ಬಗೆಯ ಸಾಮಗ್ರಿಗಳು ಮೊಬೈಲ್ ಮತ್ತು ಜಾಲತಾಣಗಳಲ್ಲಿ ಲಭ್ಯವಿದೆ. ಜಾಲತಾಣವನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ, ಅಧ್ಯಯನಕ್ಕೆ ಉಪಯೋಗಿಸಿಕೊಳ್ಳಿ. ಅನಗತ್ಯ ಸಂಗತಿಗಳನ್ನು ನಿರ್ಲಕ್ಷಿಸಿ. ಸಾಮಾಜಿಕ ಜಾಲತಾಣಗಳು ವ್ಯಾಸಂಗಕ್ಕೆಂದೇ ಬಳಸಿಕೊಳ್ಳಿ. ಅವುಗಳ ದುರುಪಯೋಗವು ಕಾನೂನು ಬಾಹಿರವಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ‘ಗಂಭೀರ ಅಧ್ಯಯನ, ಸಾಹಿತ್ಯ, ಸಂಗೀತ, ವೈಜ್ಞಾನಿಕ ಅನ್ವೇಷಣೆಗಳ ಅರಿವು, ದೇಶದ ಆರ್ಥಿಕ ವ್ಯವಸ್ಥೆ, ಸಾಂಸ್ಕೃತಿಕ ಸಂಗತಿಗಳನ್ನು ತಿಳಿದುಕೊಳ್ಳುವ ವ್ಯಸನವಿರಬೇಕೇ ಹೊರತು ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಮಾದಕ ವ್ಯಸನಗಳು ಬದುಕು ಕೆಡಿಸುವ ಹಾದಿಯಾಗಿದೆ. ಯುವ ಸಮುದಾಯ ಸದಾ ಕ್ರಿಯಾಶೀಲತೆ, ಚೈತನ್ಯದ ಜೀವನಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಬೇಕು’ ಎಂದರು.
‘ಮಾದಕ ವಸ್ತುಗಳ ಅ್ಯಡಿಕ್ಷನ್ ಕೂಡ ಒಂದು ಮನೋರೋಗವೆಂದು ಮನೋವಿಜ್ಞಾನಿಗಳು ಪರಿಗಣಿಸಿದ್ದಾರೆ. ಮೆದುಳು, ಮೈ ಮನಗಳ ಕ್ರಿಯೆ ಸಂಬಂಧ ಹಾಗೂ ಪ್ರಜ್ಞೆಯ ಸಂಬಂಧ ಕಳೆದುಕೊಳ್ಳುವಂತೆ ಮಾದಕ ವ್ಯಸನಿಗಳು ವರ್ತಿಸುತ್ತಾರೆ. ಕ್ರೌರ್ಯ, ವಿಕೃತತೆ, ಹಿಂಸೆಗೆ ಪ್ರಚೋದಿಸುವ ಮತ್ತು ದಾರಿಮಾಡಿಕೊಡುವ ಗುಣ ಮಾದಕ ವಸ್ತುಗಳಿಗಿದೆ’ ಎಂದರು.
‘ಯುವಕರು ತಮ್ಮೊಳಗಿನ ಶಕ್ತಿ, ಸಾಮರ್ಥ್ಯವನ್ನು ಸೃಜನಶೀಲತೆಗಾಗಿ, ರಚನಾತ್ಮಕ ಕೆಲಸಗಳಿಗಾಗಿ, ಲೋಕೋಪಯೋಗಕ್ಕಾಗಿ, ಶೈಕ್ಷಣಿಕ-ಕೃಷಿ ಸಂಶೋಧನೆಗಳಿಗಾಗಿ, ವ್ಯಯಿಸುವ ಅಗತ್ಯವಿದೆ. ತಮಗೆ ದಕ್ಕಿದ ಕಾಲ, ಶಾರೀರಿಕ ಮತ್ತು ಮಾನಸಿಕ ಸಂಪತ್ತನ್ನು ಸಮಾಜದ ಏಳಿಗೆಗೆ ಬಳಸಲು ಆದ್ಯತೆ ಕೊಡಲಿ. ಮಾದಕ ವಸ್ತುಗಳ ಸಹವಾಸಕ್ಕಲ್ಲ. ಜಗತ್ತಿನ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಬಹುತೇಕ ಸಾಧಕರು ತಮ್ಮ ತಾರುಣ್ಯದಲ್ಲಿಯೇ ಹೊಸ ಆವಿಷ್ಕಾರ, ಸಂಶೋಧನೆಗಳು ಮಾಡಿದ್ದಾರೆ. ಅವರನ್ನೆಲ್ಲ ನಮ್ಮ ವಿದ್ಯಾರ್ಥಿಗಳು ಮಾದರಿಯಾಗಿ ಪರಿಗಣಿಸಿ, ಅವರ ಬದುಕು ಮತ್ತು ಸಾಧನೆಯ ಬಗ್ಗೆ ಅನುಸಂಧಾನ ಮಾಡಬೇಕು’ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪಿಎಸ್ಐ ಅಂಬರೀಶ ವಾಗ್ಮೋಡೆ ಅವರು ಶುಭ ಕೋರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೋಗಿ ಸಾವು; ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ; ಪ್ರಕರಣ ದಾಖಲು
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ವಿವೇಕಾನಂದ ಶಿಂಧೆ, ಡಾ. ಗಂಗಾಧರ ಸಾಲಿಮಠ, ರೋಶನ್ ಬೀ, ಶ್ರೀನಿವಾಸ ಉಮಾಪುರೆ, ಸಚಿನ ಬಿಡವೆ, ಸಂಗೀತಾ ಮಹಾಗಾಂವೆ, ಜಗದೇವಿ ಜಾವಳಗೆ , ಪ್ರವೀಣ್ ಬಿರಾದಾರ, ಗುರುದೇವಿ ಕಿಚಡೆ, ಸೌಮ್ಯ ಕರಿ ಗೌಡ, ಗಣೇಶ ಮೇತ್ರೆ, ನೀಲಮ್ಮ ಮೇತ್ರೆ, ಕೃಷ್ಣಪ್ಪ ಸದಲಾಪೂರೆ, ಖದೀಜಾ ತಬಸ್ಸುಮ್, ಬಸವರಾಜ ಗುಂಗೆ, ಸುಧೀರ ಗೋದೆ, ಪವನ ಪಾಟೀಲ, ಭಾಗ್ಯಶ್ರೀ ಶೀಲವಂತ, ಸುಜಾವುದ್ದಿನ್, ಶಶಿಧರ ಪಾಟೀಲ, ಪ್ರಭಾಕರ ನವಗಿರೆ, ಜಬಿ, ಮಯೂರಿ ಪಾಟೀಲ ಮೊದಲಾದವರಿದ್ದರು.
ಚನ್ನಬಸಪ್ಪ ಗೌರ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಪ್ರಶಾಂತ ಬುಡಗೆ ವಂದಿಸಿದರು