ತುಮಕೂರು | ಅಂಬೇಡ್ಕರ್ ಅರಿವು ಸಂವಿಧಾನಕ್ಕಿಂತ ಬಹಳ ವಿಸ್ತಾರವಾದದ್ದು: ಎ ನಾರಾಯಣ

Date:

Advertisements

ಅರಿವು ಮತ್ತು ಅಂಬೇಡ್ಕರ್ ಎಂಬೆರಡು ಪದಗಳು ಜೊತೆ ಜೊತೆಯಾಗಿ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಕುರಿತು ನಮಗಿರುವ ಅರಿವು ಎಂಥದ್ದೆಂದು ಕೇಳಿಕೊಳ್ಳುವ ಸಂದರ್ಭವಿದು. ಮುಖ್ಯವಾಗಿ, ಕಳೆದ 70 -75 ವರ್ಷಗಳಿಂದ ಅಂಬೇಡ್ಕರ್ ಮತ್ತು ಅವರ ಬರಹಗಳು ಮತ್ತೆ ಚರ್ಚೆಗೆ ಬರುತ್ತಲೇ ಇವೆ. ಅಂಬೇಡ್ಕರ್ ಅವರನ್ನು ನಾವು ಏಕೆ ಇಷ್ಟೊಂದು ನೆನಪಿಸಿಕೊಳ್ಳುತ್ತಿದ್ದೇವೆ? ಇದರ ಉದ್ದೇಶವೇನು? ಎಂಬುದನ್ನು ನಾವೆಲ್ಲರೂ ತಿಳಿಯಲೇಬೇಕು ಎಂದು ಎ ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ. ಬಿ ಆರ್ ಅಂಬೇಡ್ಕ‌ರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಹಾಗೂ ಈ ದಿನ ಡಾಟ್ ಕಾಮ್ ಸಹಯೋಗದಲ್ಲಿ ನಡೆದ ‘ಅರಿವೇ ಅಂಬೇಡ್ಕರ’ ಬಾಬಾ ಸಾಹೇಬರ ಬರಹಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನವನ್ನು ಬರೆಯುವ ಪ್ರಕ್ರಿಯೆ ಅತ್ಯಂತ ದೀರ್ಘವಾದ ಪ್ರಕ್ರಿಯೆಯಾಗಿತ್ತು. ಸಂವಿಧಾನ ಸಭೆಯಲ್ಲಿ ಸಂವಿಧಾನದ ಪ್ರಸ್ತಾವನೆಯ ಪ್ರಾರಂಭದ ಸಾಲನ್ನು ಕುರಿತು ನಡೆದ ಒಂದು ಚರ್ಚೆಯನ್ನು ನಿಮಗೆ ಹೇಳಬಯಸುತ್ತೇನೆ. ‘ಭಾರತದ ಜನಗಳಾದ ನಾವು’ ಎಂದು ನಮ್ಮ ಸಂವಿಧಾನದ ಪ್ರಸ್ತಾವನೆ ಪ್ರಾರಂಭವಾಗುತ್ತದೆ. ಇದನ್ನು ಬದಲಾಯಿಸಿ ದೇವರ ಹೆಸರಿನಲ್ಲಿ ಹೇಳುವುದಾಗಿ ತಿದ್ದೋಣವೆಂದು ಸಂವಿಧಾನ ಸಭೆಯ ಸದಸ್ಯರೊಬ್ಬರು ಸಲಹೆ ಕೊಡುತ್ತಾರೆ. ಇದಕ್ಕೆ ಸಂವಿಧಾನ ಸಭೆಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಅವರು ದೇವರು ನಮ್ಮ ಮನಸ್ಸಿನಲ್ಲಿರಲಿ ಇಲ್ಲಿ ಬೇಡವೆಂದು ಹೇಳುತ್ತಾರೆ. ಮುಂದೆ, ತಿದ್ದುಪಡಿ ಮತಕ್ಕೆ ಹಾಕಲ್ಪಟ್ಟು ‘ಭಾರತದ ಜನರಾದ ನಾವು’ ಎನ್ನುವುದೇ ಬಹುಮತದಿಂದ ಗೆಲ್ಲುತ್ತದೆ ಎಂದು ಹೇಳಿದರು.

Advertisements
ಅಂಬೇಡ್ಕರ್ ಅರಿವು

ಈ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಮತ್ತು ಅದರ ರಚನೆಗೆ ಸಂಬಂಧಿಸಿದಂತೆ ನೂರಾರು ಕತೆಗಳಿವೆ. ಅವನ್ನೆಲ್ಲ ಸಂಗ್ರಹಿಸುವ ಕೆಲಸವು ಇನ್ನೂ ಆಗಬೇಕಿದೆ. ನಾವು ಸಂವಿಧಾನ ಎಂದರೆ ಅಂಬೇಡ್ಕರ್, ಅಂಬೇಡ್ಕರ್ ಎಂದರೆ ಸಂವಿಧಾನವೆಂದು ನೋಡುತ್ತೇವೆ. ಆದರೆ, ಅಂಬೇಡ್ಕರ್ ಅವರ ಅರಿವು ಸಂವಿಧಾನಕ್ಕಿಂತ ಬಹಳ ವಿಸ್ತಾರವಾದದ್ದು.

ಬ್ರಿಟಿಷರ ಕೈಯಿಂದ ಭಾರತ ಸ್ವಾತಂತ್ರ್ಯವಾದ ಮೇಲೆ ಅಧಿಕಾರ ಯಾರ ಕೈಗೆ ಹೋಗಬೇಕೆಂಬ ಪ್ರಶ್ನೆ ಹುಟ್ಟುತ್ತದೆ. ಇದಕ್ಕೆ ‘ಭಾರತದ ಜನಗಳಾದ ನಾವು ಎನ್ನುವುದೇ ಸರಿಯಾದದ್ದು’ ಎಂದು ಜನರೇ ಉತ್ತರಿಸುತ್ತಾರೆ. ಹೀಗೆ ಭಾರತದ ಜನಗಳಾದ ನಾವು ಎನ್ನುವುದು ಬಹುಮತದಿಂದ ಗೆಲ್ಲುವುದಕ್ಕೆ ಕಾರಣವಾಗುತ್ತದೆ.

“ಈವರೆಗೆ ಸಂವಿಧಾನ ಸಭೆಯಲ್ಲಿ ಹಲವು ಚರ್ಚೆಗಳು ನಡೆದಿದ್ದವು. ಈ ಚರ್ಚೆಗಳ ದಿಕ್ಕು ದೆಸೆಯನ್ನು ತೋರಿದವರು ಅಂಬೇಡ್ಕರ್. ಇವರ ಅರಿವಿನ ಹಿಂದಿನ ಶಕ್ತಿ ಅಂಬೇಡ್ಕರ್. ದೇಶದಲ್ಲಿ ಎಷ್ಟೋ ಧರ್ಮಗಳು ಧಾರ್ಮಿಕ ಮುಖಂಡರು ದೇವರುಗಳು, ಸಮಾಜಸುಧಾರಕರು ಇದ್ದರು. ಇಷ್ಟೆಲ್ಲ ಇದ್ದರೂ ಅಸ್ಪೃಶ್ಯತೆ ಎಂಬ ಅಮಾನವೀಯವಾದ ಒಂದೇ ಒಂದು ಆಚರಣೆಯನ್ನು ನಿಷೇಧಿಸಲು ಆಗಿರಲಿಲ್ಲ. ಅದಕ್ಕಾಗಿ ಅಂಬೇಡ್ಕರ್ ಸಂವಿಧಾನವನ್ನು ಬರೆಯಬೇಕಾಯಿತು. ಇದರ ಬಗ್ಗೆ ನಾವು ಆಲೋಚಿಸಬೇಕು. ಹೀಗಾಗಿ ಒಂದು ಕಡೆ ಅಂಬೇಡ್ಕರ್ ಅವರನ್ನು, ಇನ್ನೊಂದು ಕಡೆ ಅಲ್ಲಿವರೆಗೆ ಭಾರತದಲ್ಲಿ ಆಗಿದ್ದ ಬೌದ್ಧಿಕ ಚಿಂತನೆಗಳನ್ನು ಇನ್ನೊಂದು ಕಡೆ ಇರಿಸಿ ತುಲಾತ್ಮಕವಾಗಿ ನೋಡಬೇಕೆನಿಸುತ್ತದೆ” ಎಂದು ತಿಳಿಸಿದರು.

ಅಂಬೇಡ್ಕರ್ ಅರಿವು 1

“ಇದು ನಾವು ಸಂವಿಧಾನಕ್ಕೆ ಧರ್ಮದ ವಿಚಾರದಲ್ಲಿ ಮುಖಾಮುಖಿಯಾಗುವ ಒಂದು ದಾರಿ. ಇಂದು ಸಂವಿಧಾನವನ್ನು ಕುರಿತು ಆಗುತ್ತಿರುವ ಅಪಪ್ರಚಾರಗಳಲ್ಲಿ ಬಹಳ ಮುಖ್ಯವಾದ ಎರಡನ್ನು ಪ್ರಸ್ತಾವಿಸುವುದಾದರೆ, ಸಂವಿಧಾನದಲ್ಲಿರುವ ಸೆಕ್ಯುಲರ್(ಜಾತ್ಯತೀತ) ಎಂಬ ಪದ ಮತ್ತು ಮೀಸಲಾತಿ. ನಮಗೆ ಸೆಕ್ಯುಲರ್ ಪದದ ಅರ್ಥ, ಅದರ ಅನ್ವಯತೆ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ನಿಲ್ಲಿಸಿ, ಅದಕ್ಕೆ ಪ್ರತಿಯಾಗಿ ಯಾವುದೇ ಚಿಂತನೆಯೂ ಬರಲಿಲ್ಲ. ಮೀಸಲಾತಿ ಎಂಬುದು ಭಾರತದಲ್ಲಿ ಅಲ್ಲದೆ ಬೇರೆ ಎಲ್ಲ ದೇಶಗಳಲ್ಲೂ ಬೇರೆ ಬೇರೆ ಹೆಸರುಗಳಲ್ಲಿ‌ ಇದೆ. ಇದನ್ನು ಕುರಿತು ಇಷ್ಟೊಂದು ತಪ್ಪು ಅಭಿಪ್ರಾಯ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಯಾಗಿ ಮೀಸಲಾತಿಯ ಮಹತ್ವವನ್ನು ಜಾರಿಗೆ ತಂದವರು ಉದ್ದೇಶಗಳನ್ನು ಸಮರ್ಥವಾಗಿ ಮತ್ತು ಧೈರ್ಯವಾಗಿ ವಿವರಿಸುವವರು ಯಾರೂ ಇಲ್ಲ. ಇದು ಏಕೆ ಎನ್ನುವ ಪ್ರಶ್ನೆ ನನ್ನದು. ಇದಕ್ಕೆ ಉತ್ತರ, ನಾವು ಸಂವಿಧಾನವನ್ನು ಜಾರಿಗೆ ತಂದ ನಂತರ ನಮ್ಮ ಬೌದ್ಧಿಕ ಪ್ರೇರಣೆಗಳಿಗೆ ನಾವು ಸಂವಿಧಾನವನ್ನು ಆಶ್ರಯಿಸಬೇಕಿತ್ತು” ಎಂದರು.

ಅಂಬೇಡ್ಕರ್ ಅರಿವು 2

“ಸಂವಿಧಾನ ಸಭೆಯ ಚರ್ಚೆಗಳನ್ನು, ಅದಕ್ಕೆ ಪೂರಕವಾಗಿ ಹಿಂದೆ ನೂರು ವರ್ಷಗಳಲ್ಲಿ ನಡೆದ ಸ್ವಾತಂತ್ರ ಹೋರಾಟವನ್ನು ಆಶ್ರಯಿಸಬೇಕಿತ್ತು. ಆದರೆ ನಾವು ನಮ್ಮ ಭೌದ್ಧಿಕ ಮತ್ತು ಸಾಂಸ್ಕೃತಿಕ ಪ್ರೇರಣೆಗಳಿಗಾಗಿ ಯಾವ ಗ್ರಂಥಗಳು ಒಂದು ಅಸ್ಪೃಶ್ಯತೆಯಂತಹ ಆಚರಣೆಯನ್ನು ತೊಲಗಿಸಲಿಕ್ಕಾಗಲಿಲ್ಲವೋ ಅವುಗಳಿಂದಲೇ ಪಡೆಯುತ್ತಿದ್ದೇವೆ” ಎಂದರು.

“ಸಂವಿಧಾನ ಜಾರಿಯಾದ ಮೇಲೂ ನಾವು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ, ಸಂವಿಧಾನದ ಚರ್ಚೆ ಸಂವಿಧಾನ ಸಭೆ ಚರ್ಚೆಗಳು ಮುಂತಾದವನ್ನು ನಾವು ನಿರ್ಲಕ್ಷಿಸಿರುವುದೇ ಇದಕ್ಕೆ ಕಾರಣ. ನಾನು ವಿದ್ಯಾರ್ಥಿಗಳಿಗೆ ಹೇಳುವುದೇನೆಂದರೆ, ಈ ದೇಶದ ಸಾಂಸ್ಕೃತಿಕ ಪ್ರೇರಣೆಗಳಿಗೆ ಭೌದ್ಧಿಕ ಪ್ರೇರಣೆಗಳಿಗೆ ನಾವು ಬಾಬಾ ಸಾಹೇಬರ ಬರಹಗಳನ್ನು ಆಶ್ರಯಿಸಬೇಕಾಗಿದೆ. ನಾವು ನಮ್ಮ ಬೌದ್ಧಿಕ ಪ್ರೇರಣೆಗೆ ಈ ದೇಶದ ಸತ್ವ ಈ ದೇಶದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಂಬೇಡ್ಕರ್ ಅವರನ್ನು ಮತ್ತು ಈ ದೇಶದ ಸಂವಿಧಾನವನ್ನೇ ಆಶ್ರಯಿಸಬೇಕಾಗಿದೆ” ಎಂದು ಕರೆ ನೀಡಿದರು.

ಅಂಬೇಡ್ಕರ್ ಅರಿವು 7

“ವಿದ್ಯಾರ್ಥಿಗಳು ಈ ದೇಶವನ್ನು ನಿಜವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಾವು ಸಂವಿಧಾನ ಸಭೆ ಚರ್ಚೆಗಳು, ಸ್ವಾತಂತ್ರ್ಯ ಸಂಗ್ರಾಮವನ್ನು ಆಶ್ರಯಿಸಬೇಕು. ಅಂಬೇಡ್ಕರ್ ಅವರ ಕೃತಿಗಳು ಇಂದಿಗೂ ಪ್ರಕಟವಾಗುತ್ತಲೇ ಇವೆ. ಅಂಬೇಡ್ಕರ್ ಕಾಲವಾದ ನಂತರವೂ ಕಾಲದ ಜೊತೆಗೆ ಬೆಳೆಯುತ್ತಲೇ ಇರುವ ಮಹಾ ಚಿಂತಕರು ಅಂಬೇಡ್ಕರ್. ಅಂಬೇಡ್ಕರ್ ಅವರನ್ನು ಕುರಿತು ಬಂದ ಕೃತಿಗಳೇ ಒಂದು ದೊಡ್ಡ ಗ್ರಂಥಾಲಯದಷ್ಟು ಇವೆ. ಅಂಬೇಡ್ಕರ್ ಅವರಂಥಹ ಒಬ್ಬ ಚಿಂತಕ, ರಾಜಕೀಯ ನಾಯಕ ಯಾವ ದೇಶದಲ್ಲಿಯೂ ಹುಟ್ಟಿಲ್ಲ. ಅಂಬೇಡ್ಕರ್ ರಾಜಕೀಯ ಹೋರಾಟವನ್ನು ಮಾಡುತ್ತಲೇ ಎರಡು ಮಹತ್ವದ ಪಿಎಚ್‌ಡಿಗಳನ್ನು ಪಡೆದವರು. ಅಂಬೇಡ್ಕರ್ ಒಬ್ಬ ಬಹುಶಿಸ್ತೀಯ ಚಿಂತಕ ಮತ್ತು ಜ್ಞಾನಿ” ಎಂದು ಹೇಳಿದರು.

ಅಂಬೇಡ್ಕರ್ ಅರಿವು 3

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ತಾಯಿ ಇಲ್ಲದ ಮನೆ ಅನಾಥವಾಗುತ್ತದೆ. ಹಾಗೆಯೇ ಅಂಬೇಡ್ಕರ್ ಅವರ ಚಿಂತನೆಗಳಿಲ್ಲದೆ ನಮ್ಮ ದೇಶವೂ ಅನಾಥವೇ. ಯಾರು ಭಯವಿಲ್ಲದೆ ನಿರ್ಭೀತಿಯಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೋ ಅವರೇ ನಿಜವಾದ ಅಂಬೇಡ್ಕರ್ ಅನುಯಾಯಿಗಳು. ಅಂಬೇಡ್ಕರ್ ನಿಜವಾಗಿ ಬದುಕಿರುವುದು ಇಂತಹ ದಿಟ್ಟ ಯುವಕರಿಂದಲೇ. ಸ್ವಾತಂತ್ರ್ಯ ಭಾರತದಲ್ಲಿ ನಾವು ಎಲ್ಲಿಗೆ ಬಂದಿದ್ದೇವೆ? ಎಂದು ಆಲೋಚಿಸಬೇಕು” ಎಂದು ಹೇಳಿದರು.

“ಇಂದು ದುಡ್ಡು ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ನಾವು ಎಚ್ಚೆತ್ತುಕೊಳ್ಳದಿದ್ದರೆ ಈ ಸಮಾಜವನ್ನು ಭ್ರಷ್ಟಾಚಾರ ರಹಿತ‌, ಶೋಷಣೆ ರಹಿತ, ಸಮಾನತೆಯ ಸಮಾಜವಾಗಿ ರೂಪುಗೊಳಿಸುವುದು ಸಾಧ್ಯವಿಲ್ಲ. ಇದಕ್ಕೆ ನಾವೆಲ್ಲರೂ ಒಂದಾಗಬೇಕು, ಹೋರಾಡಬೇಕು. ಯುವ ಸಮುದಾಯ ಇಂದು ಎಚ್ಚರ ತಪ್ಪಿದರೆ ಖಂಡಿತ ಸಾಧ್ಯವಿಲ್ಲ. ನಮ್ಮೆಲ್ಲ ಮೂಲಭೂತ ಹಕ್ಕುಗಳನ್ನು ಪಡೆಯುವುದಕ್ಕೆ ಪ್ರಶ್ನೆ ಮಾಡುವುದು ಬಹಳ ಮುಖ್ಯ. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಮುಖ್ಯ. ನಮಗೆ ಕಾನೂನಿನ ಅರಿವಿರಬೇಕು. ಇದು ನಮ್ಮ ಹಕ್ಕು. ನಾವು ಅಂಬೇಡ್ಕರ್ ಅವರ ಕಾರ್ಯಕ್ರಮ ಮಾಡುವುದರಿಂದ ಅಂಬೇಡ್ಕರ್ ಬದುಕುವುದಿಲ್ಲ, ನಮ್ಮ ಹೋರಾಟದಲ್ಲಿ, ನಮ್ಮ ಅರಿವಿನಲ್ಲಿ ನಿಜವಾದ ಅಂಬೇಡ್ಕರ್ ಬದುಕಿರುತ್ತಾರೆ” ಎಂದು ತಿಳಿಸಿದರು.

ಅಂಬೇಡ್ಕರ್ ಅರಿವು 4

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ದೇಶದ ಬೆನ್ನೆಲುಬು ಈ ದೇಶದ ಯುವಕರು. ನಾವು ಅಸಮಾನತೆ ಬದುಕನ್ನು ಬದುಕಬಾರದು. ನಿಜವಾದ ಅಂಬೇಡ್ಕರ್ ಅವರ ಆಚರಣೆ, ಶಿಕ್ಷಣ, ಅರಿವು, ಜಾಗೃತಿ ಮತ್ತು ಹೋರಾಟದಲ್ಲಿದೆ. ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿ ತನ್ನ ಜನರಿಗೆ ಏನನ್ನಾದರೂ ಮಾಡಬೇಕು. ತಿಳುವಳಿಕೆ ಕೊಡಬೇಕು. ಇಲ್ಲದೇ ಹೋದರೆ ಆ ವ್ಯಕ್ತಿ ಇದ್ದೂ ಸತ್ತಂತೆ” ಎಂದರು.

“ಕಾನೂನು ತಿಳಿಯದವರಿಗೆ ನ್ಯಾಯ ಸಿಗುವುದು ಕಷ್ಟ. ಯುವ ಸಮುದಾಯ ಈ ಅರಿವನ್ನು ಪಡೆದರೆ, ಹೋರಾಟದಲ್ಲಿ ಭಾಗವಹಿಸಿದರೆ, ಅನ್ಯಾಯದ ವಿರುದ್ಧ ಹೋರಾಡಿದರೆ ಮಾತ್ರ ಅಂಬೇಡ್ಕರ್ ಕನಸಿನ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಂದು ನಮ್ಮನ್ನು ದಿಕ್ಕು ತಪ್ಪಿಸುವ ನೂರಾರು ಶಕ್ತಿಗಳು ಇವೆ. ನಾವು ಅವುಗಳನ್ನು ಕುರಿತು ಎಚ್ಚರ ವಹಿಸಬೇಕು. ಇವತ್ತು ಮಾತೆತ್ತಿದರೆ ನಮ್ಮನ್ನು ಜಾತಿ ಧರ್ಮಗಳ ಹೆಸರಿನಲ್ಲಿ ವಿಭಾಗಿಸಲಾಗುತ್ತಿದೆ. ಇದನ್ನು ಕುರಿತು ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಅಂಬೇಡ್ಕರ್ ನಿಜವಾಗಿ ಬದುಕಿರುವುದು ಒಗ್ಗಟ್ಟಿನಲ್ಲಿ. ನಾವೆಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರ ಅಂಬೇಡ್ಕರ್ ನಿಜವಾಗಿ ಬದುಕುವುದು ಸಾಧ್ಯ. ಸಂವಿಧಾನ ಇಲ್ಲವೆಂದರೆ ನಮ್ಮ ದೇಶ ಇಲ್ಲ. ನಾವೆಲ್ಲ ಇಷ್ಟು ಸುರಕ್ಷಿತವಾಗಿ ಆನಂದವಾಗಿರುವುದಕ್ಕೆ ಅಣ್ಣತಮ್ಮಂದಿರಂತೆ ಬದುಕುವುದಕ್ಕೆ ಕಾರಣವೇ ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನ” ಎಂದು ಮನದಟ್ಟು ಮಾಡಿದರು.

ಅಂಬೇಡ್ಕರ್ ಅರಿವು 5

ಹೆ”ಣ್ಣು ಮಕ್ಕಳು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಒಂದು ಸಮಾಜದ ಮಹಿಳೆಯರೆಲ್ಲ ಆನಂದವಾಗಿ, ಸುಖವಾಗಿ ಬದುಕಬೇಕು. ಆಗ ಮಾತ್ರ ಆ ದೇಶ, ಆ ಸಮಾಜ ಸಮೃದ್ಧವಾಗಿದೆ ಎಂದರ್ಥ” ಎಂದರು.

ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, “ಅಂಬೇಡ್ಕರ್ ಅವರು ಬರೆದು ಇಷ್ಟು ವರ್ಷಗಳಾದರೂ ಅವರು ನಮಗೆ ಸಂಬಂಧಿತವಾಗಿರುವುದೇಕೆ? ನಮ್ಮ ಕರ್ನಾಟಕವೇ ಹೆಮ್ಮೆಪಡುವ ವಿಷಯ ಭಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರೆತಿರುವುದು. ಇದರ ಹಿಂದೆಯೂ ಅಂಬೇಡ್ಕರ್ ಅವರ ಸಂವಿಧಾನವಿದೆ. ಈ ಸಂವಿಧಾನದಿಂದಲೇ ಒಬ್ಬ ಮಹಿಳೆ ಈ ಮಟ್ಟಕ್ಕೆ ಬಂದದ್ದು. ಆದರೆ ಇವತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ತಪ್ಪಾಗಿ ವಿವರಿಸಲಾಗುತ್ತಿದೆ. ಅಂಬೇಡ್ಕರ್ ಎಲ್ಲರಿಗೂ ಸಿಗಬಾರದು ಎಂಬುದು ಕೆಲವರ ಉದ್ದೇಶ. ಹಾಗೆಯೇ ಅಂಬೇಡ್ಕರ್ ಅವರನ್ನು ದೇವಮಾನವ ಎಂದು ಕರೆಯಲಾಗುತ್ತಿದೆ. ಆದರೆ, ಅಂಬೇಡ್ಕರ್ ದೇವಮಾನವ ಅಲ್ಲ. ಅವರೊಬ್ಬ ನಿಜವಾದ ಮಾನವ, ಮಾನವ ಪ್ರಜ್ಞೆಯ ಚಿಂತಕ, ನಿಜವಾದ ಮಾನವತಾವಾದಿ” ಎಂದು ಹೇಳಿದರು.

ಅಂಬೇಡ್ಕರ್ ಅರಿವು 6

“ಮಾನವನನ್ನು ದೇವರಾಗಿಸಿದಾಗ ಅವರ ಚಿಂತನೆಗಳು ನಮಗೆ ಸಿಗದೇ ಹೋಗುತ್ತವೆ. ಅಂಬೇಡ್ಕರ್ ಪ್ರಶ್ನೆ ಕೇಳಬೇಕು ಎಂಬ ಅರಿವನ್ನು ಮನುಷ್ಯನಲ್ಲಿ ಹುಟ್ಟಿ ಹಾಕಿದವರು, ಇಂದು ನಾವು ಅಂತಹ ಅಂಬೇಡ್ಕರ್ ಅವರನ್ನೇ ದೇವರಾಗಿಸುವ ಮೂಲಕ ಪ್ರಶ್ನೆ ಕೇಳುವ ಅರಿವನ್ನು ಇಲ್ಲವಾಗಿಸಿಕೊಳ್ಳುತ್ತಿದ್ದೇವೆ. ಇಂತಹ ಕೆಟ್ಟ ಕೆಲಸವನ್ನು ನಾವು ಬಸವಣ್ಣನ ವಿಚಾರದಲ್ಲಿ ಈಗಾಗಲೇ ಮಾಡಿದ್ದೇವೆ. ಬಸವಣ್ಣ ಹೇಳಿದ್ದನ್ನೆಲ್ಲ ಮುಚ್ಚಿಟ್ಟು ಬಸವಣ್ಣನನ್ನು ದೇವರಾಗಿಸಲಾಯಿತು. ಯಾರು ಜಾತಿ ಬೇಡವೆಂದು ಹೇಳಿದರೋ ಅವರ ಹೆಸರಿನಲ್ಲಿ ಒಂದು ಹೊಸ ಜಾತಿ ಹುಟ್ಟಿಕೊಂಡಿದೆ. ಬಸವಣ್ಣನ ಹೆಸರಿನಲ್ಲಿ ಬಂದವರು ಮಠಗಳು ಸ್ವಾಮಿಗಳು ಇದನ್ನು ಪೋಷಿಸುತ್ತಿದ್ದಾರೆ.

“ಜಾತಿ ವಿನಾಶ ಸಮಾನತೆ ಎನ್ನುವುದು ಒಂದೇ ಸಲಕ್ಕೆ ಬರುವುದಲ್ಲ. ಅದಕ್ಕೆ ದೊಡ್ಡ ಚಳವಳಿ ಬೇಕಾಗಿದೆ. ಇಂದು ಸಂವಿಧಾನ ಬದಲಾವಣೆ ಚರ್ಚೆ ಹೆಚ್ಚು ಮುನ್ನಲೆಯಲ್ಲಿದೆ. ಸಂವಿಧಾನದ ಬದಲಾವಣೆ ಎಂದರೆ ಇಂದು ನಮಗೆ ಸಿಕ್ಕಿರುವ ಎಲ್ಲ ಅವಕಾಶಗಳನ್ನು ಕಸಿದುಕೊಳ್ಳುವುದು ಮತ್ತು ಮನಸ್ಮೃತಿಯನ್ನು ಮತ್ತೊಮ್ಮೆ ಜಾರಿಗೆ ತರುವುದು. ನಮ್ಮ ದೇಶದಲ್ಲಿ ಮಹಿಳೆಯರ ಸ್ಥಾನ ಬಹಳ ಕೆಳಮಟ್ಟದಲ್ಲಿತ್ತು. ಅಂಬೇಡ್ಕರ್ ಇದನ್ನು ಅರಿತು ಹೆಣ್ಣು ಮಕ್ಕಳ ವಿಮೋಚನೆಗಾಗಿ ಸಾಕಷ್ಟು ದುಡಿದರು. ಹೆಣ್ಣು ಮಕ್ಕಳಿಗೆ ಆಸ್ತಿ ಸಮಾನತೆ, ಮತದಾನದ ಹಕ್ಕು, ವಿಚ್ಛೇದನದ ಹಕ್ಕು, ದತ್ತು ಪಡೆಯುವ ಹಕ್ಕು ಮುಂತಾದವು ಇರಲಿಲ್ಲ. ಇವನ್ನೆಲ್ಲವನ್ನೂ ಜಾರಿಗೆ ತಂದವರು ಅಂಬೇಡ್ಕರ್” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಸಹೋದ್ಯೋಗಿ ವರದಿಗಾರನಿಗೆ ಜಾತಿನಿಂದನೆ, ಹಲ್ಲೆ ಪಬ್ಲಿಕ್ ಟಿ.ವಿ ವರದಿಗಾರನ ವಿರುದ್ಧ ಎಫ್‌ಐಆರ್

“ನಮ್ಮದು ಮೂಲತಃ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ. ಆದರೆ ಬರಬರುತ್ತ ಹೆಣ್ಣು ಪುರುಷನ ಆಸ್ತಿ ಎಂಬಂತಾಯಿತು. ಇದು ಇಂದಿಗೂ ನಮ್ಮೊಳಗೆ ನಮಗೆ ಅರವಿಲ್ಲದಂತೆ ಬದುಕಿದೆ. ಅಂಬೇಡ್ಕರ್ ಹೆಣ್ಣು ಮಕ್ಕಳ ಬಿಡುಗಡೆಗಾಗಿ ದುಡಿದವರು. ಸಾಕಷ್ಟು ಟೀಕೆ ವಿರುದ್ಧಗಳನ್ನು ಎದುರಿಸಿ ಅದಕ್ಕೆ ಬೇಕಾದ ಸೂಕ್ತ ಕಾನೂನುಗಳನ್ನು ತಂದಿದ್ದಾರೆ. ಇಂದು ಹೆಣ್ಣು ಮಕ್ಕಳು ಪಡೆದ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾದಾಗ ಆ ಹೆಣ್ಣಿನದ್ದೇ ತಪ್ಪು ಎಂಬಂತೆ ಮಾತನಾಡಲಾಗುತ್ತದೆ. ನಮ್ಮ ಹಕ್ಕುಗಳ ಕುರಿತು ನಮಗೆ ಅರಿವಿರಬೇಕು. ನಾವು ನಮ್ಮ ಹಕ್ಕುಗಳಿಗಾಗಿ ದನಿ ಎತ್ತಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯ. ಇಲ್ಲಿ ಸಾಕಷ್ಟು ಜನ ಶಿಕ್ಷಿತರು ಇದ್ದೇವೆ. ಆದರೆ, ಎಷ್ಟು ಜನ ಎಂಪವರ್ ಆಗಿದ್ದೇವೆ? ರಿಯಲ್ ಎಂಪವರ್ಮೆಂಟ್ ಎಂದರೆ ಏನು? ಇದರ ಕುರಿತು ನಮಗೆ ಅರಿವಿರಬೇಕು. ಆಗ ಮಾತ್ರ ಅಂಬೇಡ್ಕರ್ ವಿಚಾರಗಳು ಸಾರ್ಥಕವಾಗುತ್ತವೆ” ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರಸನ್ನ ಕುಮಾರ್, ಅಂಬೇಡ್ಕರ್ ಅಧ್ಯಯನ ಕೆಂದ್ರದ ನಿರ್ದೇಶಕ ಪ್ರೊ. ಕೇಶವ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X