ತುಮಕೂರು ನಗರದ ಹೊರವಲಯದ ದಿಬ್ಬೂರು ಪ್ರದೇಶದಿಂದ ಹೊರರಾಜ್ಯಕ್ಕೆ ಮಾರಾಟವಾಗಿದ್ದ 11 ವರ್ಷದ ಬಾಲಕಿಯೊಬ್ಬಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ದಿಬ್ಬೂರು ವಾಸಿಗಳಾದ ಚೌಡಯ್ಯ ದಂಪತಿ 11 ವರ್ಷದ ಹೆಣ್ಣು ಮಗುವನ್ನು ಆಂಧ್ರ ಪ್ರದೇಶದ ಬಾತುಕೋಳಿ ವ್ಯಾಪಾರಿಯೋರ್ವನಿಗೆ ಬಾಲಕಿಯ ಚಿಕ್ಕಮ್ಮನ ಮನೆಯವರು ಮಾರಾಟ ಮಾಡಿದ್ದರು. ವಿಷಯ ತಿಳಿದ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಭೇದಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. 35,000 ರೂ.ಗಳಿಗೆ ಬಾಲಕಿಯನ್ನು ಮಾರಾಟ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಕಾರ್ಮಿಕ ಕಚೇರಿಗೆ ಬಂದಿದ್ದ ದೂರು ಆಧರಿಸಿ ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಮಗುವಿನ ರಕ್ಷಣೆಗಾಗಿ ಕೋರಲಾಗಿತ್ತು.
ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ತುಮಕೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮಗುವನ್ನು ರಕ್ಷಿಸಿ ಬಾಲಮಂದಿರಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಾಚರಣೆಗೆ ಸಹಕರಿಸಿದ ಎಸ್ಪಿ, ಎಎಸ್ಪಿ, ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಅಭಿನಂದಿಸಿದ್ದಾರೆ.