ಕೀಲು ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಕೀಲು ಮತ್ತು ಮೂಳೆ ತಜ್ಞರೂ ಆಗಿರುವ ಶಾಸಕ ಡಾ. ರಂಗನಾಥ್ ತಮ್ಮ ವೈದ್ಯ ಮಿತ್ರರೊಂದಿಗೆ ಸೇರಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ (42) ಎಂಬುವರಿಗೆ ಮಂಡಿಕೀಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪತಿ ಅನಾರೋಗ್ಯ ಪೀಡಿತರಾಗಿರುವ ಕಾರಣ ತಮ್ಮ ಇಬ್ಬರು ಮಕ್ಕಳ ಪೋಷಣೆಯ ಹೊಣೆ ಆಶಾ ಅವರ ಮೇಲಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಅವರು, ಹತ್ತು ವರ್ಷದ ಹಿಂದೆ ಮಂಡಿಕೀಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದೀಗ ಮತ್ತೆ ತೀವ್ರ ನೋವು ಕಾಣಿಸಿಕೊಂಡಿತ್ತು.
ಕೀಲು ತಪ್ಪಿದ (ಡಿಸ್‌ಲೊಕೇಟ್) ಕಾರಣ ಮತ್ತೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಶಸ್ತ್ರಚಿಕಿತ್ಸೆಗೆ ₹3 ಲಕ್ಷ ವೆಚ್ಚವಾಗುತ್ತದೆಂದು ವೈದ್ಯರು ಹೇಳಿದ್ದರು. ಹಣ ಹೊಂದಿಸಲಾಗದ ಕಾರಣ ಆಶಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ.ಈ ವಿಷಯವನ್ನು ಕುಂದೂರು ಗ್ರಾಮದ ಮುಖಂಡ ವಸಂತ್ ಕುಮಾರ್ ಎಂಬುವರು ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ರಂಗನಾಥ್ ಅವರು ಕೀಲು ಮತ್ತು ಮೂಳೆ ರೋಗ ತಜ್ಞರಾಗಿರುವ ಕಾರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.
“ವಿಶೇಷ ಪ್ರಕರಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಸಹಕಾರೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಮನೋಜ್ ಅವರ ಸಲಹೆ ಮೇರೆಗೆ ಡಾ. ದೀಪಕ್ ಜೊತೆಗೂಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ” ಎಂದು ಡಾ.ರಂಗನಾಥ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ₹1 ಲಕ್ಷ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಸಿಬ್ಬಂದಿ
“ಕುಣಿಗಲ್ ತಾಲೂಕಿನಲ್ಲಿ 50ಕ್ಕೂ ಹೆಚ್ಚು ಮಂದಿಗೆ ಕೀಲು ಸಂಬಂಧಿತ ಎರಡನೇ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಸರ್ಕಾರದ ಉಚಿತ ಚಿಕಿತ್ಸಾ ಯೋಜನೆಯಲ್ಲಿ ಮೊದಲ ಬಾರಿಗೆ ಮಾತ್ರ ಶಸ್ತ್ರಚಿಕಿತ್ಸೆಗೆ ಅವಕಾಶವಿದೆ. ಎರಡನೇ ಶಸ್ತ್ರಚಿಕಿತ್ಸೆಗಾಗಿ ರಾಜ್ಯದಲ್ಲಿ 50 ಸಾವಿರ ರೋಗಿಗಳಿದ್ದಾರೆ. ಸರ್ಕಾರ ಈ ನಿಯಮಗಳನ್ನು ಮರು ಪರಿಶೀಲನೆ ಮಾಡಬೇಕಿದೆ. ಈ ಬಗ್ಗೆ ಸದನದಲ್ಲಿ ದನಿ ಎತ್ತಲಾಗುವುದು” ಎಂದು ಹೇಳಿದ್ದಾರೆ.