ಇಡೀ ಪ್ರಪಂಚದಲ್ಲಿ ಶಿಕ್ಷಣಕ್ಕೆ ಮಾತ್ರವೇ ವ್ಯಕ್ತಿಯನ್ನು ಶ್ರೀಮಂತ ಹಾಗೂ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಇದೆ. ಅದನ್ನು ಶ್ರದ್ಧೆಯಿಂದ ಪಡೆಯಬೇಕು ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬಿ ನಂಜುಂಡಪ್ಪ ಪ್ರತಿಪಾದಿಸಿದರು.
ತುಮಕೂರು ನಗರದ ಸರಸ್ವತಿಪುರಂನಲ್ಲಿರುವ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಒಬ್ಬ ಸಾಮಾನ್ಯ, ಕಡುಬಡವನ ಮಗನೂ ಮೆಚ್ಚುಗೆ ಗಳಿಸಿ, ಧನಸಹಾಯ ಪಡೆಯುವ ಹಂತಕ್ಕೆ, ವಿದೇಶದಲ್ಲಿ ವ್ಯಾಸಂಗ ಮಾಡುವ ಸ್ಥಾನಕ್ಕೆ ಬೆಳೆದನೆಂದರೆ ಅದಕ್ಕೆ ಆತ ಪಡೆದ ಶಿಕ್ಷಣ, ಅದರಲ್ಲಿ ಮಾಡಿದ ಸಾಧನೆಯೇ ಕಾರಣ” ಎಂದರು.
“ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿದ್ದಾರೆ. ಬಿಇಡಿ ಶಿಕ್ಷಣ ಮಹಾವಿದ್ಯಾಲಯಗಳಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದು ಸಕಾಲ ಕೂಡ. ತಾಯಿ ಮಕ್ಕಳಿಗೆ ಕಲಿಸುವಂತೆ ಎಲ್ಲ ಮಹಿಳಾ ಶಿಕ್ಷಕರು ಮಕ್ಕಳಿಗೆ ಕಲಿಸಬೇಕು” ಎಂದು ಬಿ ನಂಜುಂಡಪ್ಪ ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ದೇಸು ಗೇಮು ಚವ್ಹಾಣ ಕಾಂಗ್ರೆಸ್‌ಗೆ ಮರು ಸೇರ್ಪಡೆ
ರ‍್ಯಾಂಕ್ ಪಡೆದ ವಿಧ್ಯಾರ್ಥಿಗಳಾದ ರಂಜಿತಾ ಎನ್ ಆರ್ ಮತ್ತು ನಂದಿತಾ ಜಿ ಡಿ ಅವರನ್ನು ಅಭಿನಂದಿಸಿದರು. ನಿವೃತ್ತಿ ಹೊಂದಿದ ಗ್ರಂಥಪಾಲಕ ಜಯಪ್ಪ ಅವರನ್ನೂ ಇದೇ ವೇಳೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ ಕೆ ಎಸ್ ಸಿದ್ದರಾಜು, ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷಾ, ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ ಲತಾ ಬಿ ಎಸ್, ಹೇಮಲತಾ, ಡಾ. ಮಾರುತಿ ಎನ್ ಎನ್, ಲಲಿತಾ ಕೆ ಆರ್, ಕನ್ಯಾಕುಮಾರಿ, ಡಾ ಅಶ್ವತ್ಥ ಕೆ ಮತ್ತು ವಿಧ್ಯಾರ್ಥಿಗಳು ಇದ್ದರು.