ಅಂಬೇಡ್ಕರ್ ಅವರು ರಚಿಸಿರುವುದು ಜೀವ ಕೇಂದ್ರಿತವಾದ ಸಂವಿಧಾನ. ಅಲ್ಲಿ ಎಲ್ಲ ಜೀವಿಗಳ ಕುರಿತೂ ಕಾಳಜಿ ಇದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ತಿಪಟೂರಿನ ಜನಸ್ಪಂದನ ಟ್ರಸ್ಟ್ ಹಾಗೂ ತುಮಕೂರು ವಿವಿ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ “ಸಂವಿಧಾನ ಅರಿವು” ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಜಾತಿವಾರು ಸಮೀಕ್ಷೆ, ಒಳಮೀಸಲಾತಿ, ಸರ್ಕಾರದ ಭಾಗ್ಯಗಳು ಇತ್ಯಾದಿಗಳು ಇಂದು ಬಹು ಚರ್ಚೆಯಲ್ಲಿವೆ. ಇವೆಲ್ಲಕ್ಕೂ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಸಂವಿಧಾನವನ್ನು ವ್ಯಾಖ್ಯಾನಿಸುವುದರಲ್ಲಿ ನಾವು ಹೆಜ್ಜೆ ತಪ್ಪುತ್ತಿದ್ದೇವೆ. ಅಸಮಾನರನ್ನ, ಶೋಷಿತರನ್ನ ಮುನ್ನೆಲೆಗೆ ತರಲು ನೂರಾರು ಕಾಯ್ದೆಗಳು ನಮ್ಮ ಕಾನೂನಿನಲ್ಲಿವೆ. ಅಂಬೇಡ್ಕರ್ ಕೇವಲ ರಾಜಕೀಯ ಪ್ರಜಾಪ್ರಭುತ್ವದ ಬಗ್ಗೆ ಅಷ್ಟೇ ಅಲ್ಲದೇ, ಸಾಮಾಜಿಕ ಪ್ರಜಾಪ್ರಭುತ್ವ, ಆರ್ಥಿಕ ಪ್ರಜಾಪ್ರಭುತ್ವ, ಸಾಂಸ್ಕೃತಿಕ ಪ್ರಜಾಪ್ರಭುತ್ವ, ಮತ್ತು ರಾಜಕೀಯ ಪ್ರಜಾಪ್ರಭುತ್ವ ಗಳನ್ನು ಪ್ರತಿಪಾದಿಸಿದ್ದಾರೆ” ಎಂದರು
“ಭಾರತದ ಮೊತ್ತಮೊದಲ ಮತ್ತು ಶ್ರೇಷ್ಠ ಸ್ತ್ರೀವಾದಿ ಬಾಬಾ ಸಾಹೇಬ್ ಅಂಬೇಡ್ಕರ್. ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಡಿಸಿದವರು ಇವರು. ಭಾರತದ ಮಹಿಳೆಯರ ವಿಮೋಚನೆಗಾಗಿ ಮೊದಲು ದನಿ ಎತ್ತಿದವರು ಅಂಬೇಡ್ಕರ್. ಬ್ರಿಟನ್ ಮಹಿಳೆಯರು ಓಟಿನ ಹಕ್ಕು ಪಡೆಯುವಲ್ಲಿಯೂ ಅಂಬೇಡ್ಕರರ ಪಾತ್ರ ಇದೆ. ಅಂಬೇಡ್ಕರ್ ಒಬ್ಬ ಶ್ರೇಷ್ಠ ಮಾನವತಾವಾದಿ ಮತ್ತು ಶ್ರೇಷ್ಠ ತತ್ವಜ್ಞಾನಿ. ನಮ್ಮ ಸಂವಿಧಾನದ ಬೇರೆ ಬೇರೆ ಆರ್ಟಿಕಲ್ ಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರಿಗೆ ನಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ” ಎಂದು ತಿಳಿಸಿದರು.

ಅಧ್ಯಾಪಕ ಸಿ ಜಿ ಲಕ್ಷ್ಮೀಪತಿ ಮಾತನಾಡಿ, “ಭಾರತದ ನಾಗರಿಕತೆ ಬಹು ಸಂಕೀರ್ಣವಾದ ನಾಗರಿಕತೆ. ಈ ಸಂಕೀರ್ಣವಾದ ನಾಗರಿಕತೆಯನ್ನು ಯಾವ ತತ್ವದ ಮೇಲೆ ಕಟ್ಟಲಾಗಿದೆ? ರಾಹುಕಾಲ, ಗುಳಿಕಾಲ, ಜಾತಿ ಆಚರಣೆ, ವಿಧವಾ ಪದ್ಧತಿ, ಆಹಾರದ ಶ್ರೇಷ್ಠತೆ ಕನಿಷ್ಠತೆ, ಯಾರು ಶ್ರೇಷ್ಠ ಯಾರು ಕನಿಷ್ಠ ಇದನ್ನೆಲ್ಲ ನಮಗೆ ಕಲಿಸಿದವರು ಯಾರು? ಇವೆಲ್ಲವೂ ಮನುಸ್ಮೃತಿಯಲ್ಲಿ ದಾಖಲಾಗಿದೆ. ಇದನ್ನೆಲ್ಲ ನಮಗೆ ಕಲಿಸಿದ್ದೇ ಮನುಸ್ಮೃತಿ. ಹಾಗಾಗಿಯೇ ಇದನ್ನು ಅಂಬೇಡ್ಕರ್ ಬಹಿರಂಗವಾಗಿ ದಹಿಸಿದ್ದು.
ಮನುಸ್ಮೃತಿ ದಲಿತರಿಗೆ, ಮಹಿಳೆಯರಿಗೆ ಅವಕಾಶಗಳನ್ನು ವಂಚಿಸಿ ಅಸಮಾನತೆಯನ್ನು ಭೋಧಿಸಿದ್ದರಿಂದಲೇ ಅಂಬೇಡ್ಕರ್ ಇದನ್ನು ವಿರೋಧಿಸಿದ್ದು. ನಮ್ಮ ಭಾರತದ ಸಂವಿಧಾನ ಜಾರಿ ಆಗುವ ವರೆಗೂ ನಾವು ಮನುಸ್ಮೃತಿಯನ್ನೇ ಅನುಸರಿಸುತ್ತಿದ್ದೆವು. ವಿಪರ್ಯಾಸ ವೇನೆಂದರೆ, ಇಂದಿಗೂ ನಮಗೆ ಅರಿವಿಲ್ಲದೇ ನಾವು ಮನುಸ್ಮೃತಿಯನ್ನೇ ಅನುಸರಿಸುತ್ತಿದ್ದೇವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಮನುಸ್ಮೃತಿಯಲ್ಲಿ ಇದನ್ನು ಹಿಂದೂ ಸಂಸ್ಕೃತಿಯ ಸಾರ ಎಂದೂ ಕರೆಯಲಾಗಿದೆ. ಯಾರಾದರೂ ಹಿಂದೂ ಧರ್ಮ, ಹಿಂದೂ ರಾಷ್ಟ್ರ ಎಂದು ಮಾತನಾಡುವರೋ ಅವರೆಲ್ಲರೂ ಮಾತನಾಡುತ್ತಿರುವುದು ಮನುಸ್ಮೃತಿಯ ಆಚರಣೆಯ ಕುರಿತೇ. ಹಾಗಾಗಿಯೇ ನಾವು ಮನುಸ್ಮೃತಿಗೆ ಬದಲಾಗಿ ಸಂವಿಧಾನವನ್ನು ನಮ್ಮ ಎದೆಗಳಿಗೆ ಇಳಿಸಿಕೊಳ್ಳಬೇಕು. ಇಂದು ಸಂವಿಧಾನ ನನ್ನಂತವರು ಎಲ್ಲರೊಂದಿಗೆ ವೇದಿಕೆ ಹಂಚಿಕೊಳ್ಳುವ ಹಕ್ಕನ್ನು, ಸಮಾನ ಅವಕಾಶಗಳನ್ನು, ಧೈರ್ಯವಾಗಿ ಮಾತನಾಡುವ ಅವಕಾಶವನ್ನೂ ನೀಡಿದೆ. ಹೀಗಾಗಿಯೇ ನಾವು ಸಂವಿಧಾನವನ್ನ ನಮ್ಮೊಳಗೆ ಇಳಿಸಿಕೊಳ್ಳಬೇಕು ಮತ್ತು ಮನುಸ್ಮೃತಿಯಂತಹ ಕಸವನ್ನು ವಿಸರ್ಜಿಸಬೇಕು” ಎಂದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡ ಶಶಿಧರ್ ಮಾತನಾಡಿ, “ಭಾರತ ದೇಶದ ಸಂವಿಧಾನದ ತಳಹದಿ ಗ್ರಹಿಸಲು ಪ್ರಯತ್ನಿಸಿದರೆ ಸಮಾನತೆಯ ಸತ್ಯ ಗಮನಕ್ಕೆ ಬರುತ್ತದೆ. ಇದಕ್ಕೆ ನೆಲದ ಅಧ್ಯಾತ್ಮ ಫಿಲಾಸಫಿ, ಅನುಭಾವ ಜಗತ್ತಿನ ಕೊಡುಗೆ ದಟ್ಟವಾಗಿ ಕಾಣಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಗ್ರಹಿಸುವುದಾದರೆ ಬುದ್ದ ಬಿತ್ತಿದ ಸಮತ್ವ ಬೀಜಕ್ಕೆ ಬಸವ ಅರಿವಿನ ನೀರೆರೆದು ಬೆಳೆಸಿ ಹೆಮ್ಮರವಾಗಿಸಿದರು. ಅದರ ಫಸಲು ತೆಗೆಯುವ ಸೂತ್ರ ನೀಡಿದ್ದು ಡಾ. ಅಂಬೇಡ್ಕರ್. ಅದರಿಂದಲೇ ಕುವೆಂಪು ಅವರ ಮನುಜ ಮತ ವಿಶ್ವಪಥ ಕಲ್ಪನೆಗೆ ಜೀವಸೆಲೆ ದಕ್ಕಿರುವುದು. ಇದರ ಒಟ್ಟು ಸಾರವೇ ನಮ್ಮ ಸಂವಿಧಾನ ಎನ್ನುವುದು ಸ್ಪಷ್ಟವಾಗುತ್ತದೆ. ಈಗ ಸಂವಿಧಾನದ ಅಳಿವು ಉಳಿವಿನ ಆತಂಕ ಸೃಷ್ಟಿಯಾಗುತ್ತಿರುವುದು ವಿಪರ್ಯಾಸ. ಈ ನೆಲೆಯಲ್ಲಿ ಸಂವಿಧಾನ ಕಳೆದುಕೊಳ್ಳುವುದೆಂದರೆ ಬುದ್ಧನ ಜ್ಞಾನ, ಬಸವನ ಅರಿವು, ಅಂಬೇಡ್ಕರ್ ಶ್ರಮ ಮತ್ತು ಕುವೆಂಪು ಆಶಯ ಕಳೆದುಕೊಂಡಂತೆ ಇಂಡಿಯಾ ಒಂದು ದೇಶವಲ್ಲ ಜಗದ ಜ್ಯೋತಿ. ಬುದ್ಧ ಬಸವರು ಬೆಳಕು. ಅಂಬೇಡ್ಕರ್ ಈ ಬೆಳಕು ಹಬ್ಬಿಸಿದ ಆಧುನಿಕ ಪ್ರತಿಭೆ. ಸಂವಿಧಾನ ಉಳಿಸಿಕೊಳ್ಳೋಣ, ಜಗವ ಕತ್ತಲಿಂದ ಉಳಿಸೋಣ” ಎಂದು ಹೇಳಿದರು.
“ತುಮಕೂರು ಜಿಲ್ಲೆಯಾದ್ಯಂತ ಟ್ರಸ್ಟ್ ಹರವು ಹಬ್ಬಿಸುವ ಸಂಕಲ್ಪ ನಮ್ಮದು. ಇಂದಿನ ಈ ಕಾರ್ಯಕ್ರಮ ಒಂದು ಮಹತ್ವದ ಮೈಲಿಗಲ್ಲು. ಶಿಕ್ಷಣರಂಗ ಟ್ರಸ್ಟ್ ನ ಬಹುಮುಖ್ಯ ಕಾಳಜಿ. ಹೀಗಾಗಿ ವಿದ್ಯಾರ್ಥಿ ಸಮುದಾಯದ ಬಗ್ಗೆ ತುಂಬ ಪ್ರೀತಿ.
ಪ್ರಸ್ತುತ ನಮ್ಮ ಮುಂದಿರುವ ದೊಡ್ಡ ಸವಾಲು ಸಮಾಜೊ-ರಾಜಕೀಯ ವ್ಯವಸ್ಥೆಯಲ್ಲಿನ ಅಸಹಿಷ್ಣು ಭಾವಕ್ಕೆ ಸಂಬಂಧಿಸಿದ್ದು ಮತ್ತು ಸಮ ಸಮಾಜ ನಿರ್ಮಾಣಕ್ಕೆ ಎದುರಾಗುತ್ತಿರುವ ತೊಡಕುಗಳು. ಇದೆಲ್ಲದರ ಸುಲಭ ನಿವಾರಣೆಗೆ ಸಂವಿಧಾನವೇ ಪ್ರಮುಖ ಅಸ್ತ್ರ. ಹೀಗಾಗಿ ಸಂವಿಧಾನದ ಅರಿವು ಇಂದು ಅತ್ಯಂತ ಮುಖ್ಯ. ಈಗ ತಮ್ಮ ಮನದಲ್ಲಿ ಮೂಡಿರಬಹುದಾದ ಕಾಳಜಿಪೂರ್ಣ ಪ್ರಶ್ನೆ,
ಯಾಕೆ ಈ “ಸಂವಿಧಾನ ಅರಿವು” ಕಾರ್ಯಾಗಾರ? ಇಂದಿನ ದಿನಗಳಲ್ಲಿ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನಗಳು ಹೆಚ್ಚು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂದಿನ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸಂವಿಧಾನದ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ” ಎಂದು ವಿವವರಿಸಿದರು.
“ಸಂವಿಧಾನದ ಬಗ್ಗೆ ನಮ್ಮ ದೇಶದ ವಿದ್ಯಾವಂತ, ಬುದ್ಧಿವಂತ ಜನರಿಗೆ ಅರಿವಿನ ಕೊರತೆ ಇದೆ. ಅವರಿಗೆ ಸಂವಿಧಾನದ ಪರಿಕಲ್ಪನೆ ಮತ್ತು ಅದರ ಮಹತ್ವವನ್ನು ಮನದಟ್ಟು ಮಾಡಿ ಕೊಡುವ ಜರೂರತ್ತು ಇರುವುದರಿಂದ ಸಂವಿಧಾನ ಅರಿವು ಕಾರ್ಯಾಗಾರದ ಅಗತ್ಯವಿದೆ ಎನ್ನುವ ಅಂಶ ನಮ್ಮ ಗಮನಕ್ಕೆ ಬಂದಿತು. ಇದೊಂದು ಅಭಿಯಾನದ ರೀತಿಯಲ್ಲಿ ಎಲ್ಲೆಡೆ ನಡೆಸಬೇಕು ಎನ್ನುವ ಸಂಕಲ್ಪವೂ ಮೂಡಿತು. ವಿದ್ಯಾರ್ಥಿಗಳ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲು ಮತ್ತು ಆ ಮೂಲಕ ತಮ್ಮನ್ನು ರಾಜ್ಯದ ಮೊದಲ “ಸಂವಿಧಾನ ಚಾಂಪಿಯನ್ಸ್” ಟೀಂ ಆಗಿಸಬೇಕಾಗಿದೆ” ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಡಿಗ್ರಿ ಕಾಲೇಜುಗಳ 50 ವಿದ್ಯಾರ್ಥಿಗಳು ಮತ್ತು 50 ವಿದ್ಯಾರ್ಥಿನಿಯರು ಸೇರಿ ಒಟ್ಟು ನೂರು ಯುವ ಉತ್ಸಾಹಿ ಚೇತನಗಳಿಗೆ ಈ ಕಾರ್ಯಾಗಾರದ ರೂಪು ರೇಷೆ ಮಾಡಿಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆ ಮೀರಿ ವಿದ್ಯಾರ್ಥಿ ಸಮುದಾಯದ ಸ್ಪಂದನೆ ದಕ್ಕಿತು. ಇದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ತುಮಕೂರು ವಿವಿ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು, ಬೆಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ರಮೇಶ್ ಬಿ, ಹಿರಿಯ ಪತ್ರಕರ್ತ ಎಸ್. ನಾಗಣ್ಣ, ಸಿಂಡಿಕೇಟ್ ಸದಸ್ಯ ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.