ಕಳೆದ ಆರೇಳು ತಿಂಗಳಿಂದ ಆರು ಗುಂಟೆ ಜಮೀನಿಗೆ ಇ-ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದ ಬಳಿಕ ಕೆಲ ಪ್ರಭಾವಿಗಳ ಕೈಗೊಂಬೆಯಾಗಿ ವಿನಾಕಾರಣ ತೊಂದರೆ ನೀಡುತ್ತಿರುವ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಗ್ರಾಮಸ್ಥರು ಎರಡನೇ ಬಾರಿ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ನಡೆದಿದೆ.
ಬೆಳಗ್ಗೆ 11 ರಿಂದ ನಿರಂತರ ಸಂಜೆ 5 ಗಂಟೆಯವರೆಗೆ ನಡೆದ ಸುದೀರ್ಘ ಸಾಮಾನ್ಯ ಸಭೆಯಲ್ಲಿ ಮಾವಿನಹಳ್ಳಿ ಗ್ರಾಮದ ಸರ್ವೇ ನಂಬರ್ 52/4 ನ 0.6 ಗುಂಟೆ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೇಳಿ ನಂತರ ಇ-ಸ್ವತ್ತು ಮಾಡಿಕೊಡಲು ಅಭಿಷೇಕ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಲೇ ಮಾಡಿದ ಗ್ರಾಮ ಪಂಚಾಯಿತಿ ಆಡಳಿತ ವಿನಾ ಕಾರಣ ತೊಂದರೆ ನೀಡುತ್ತಿದೆ. ಕಾನೂನು ರೀತಿ ಸರಿಯಾಗಿದ್ದರೂ ಸಲ್ಲದ ಕಾರಣ ಹುಡುಕಿ ಇ ಸ್ವತ್ತು ಮಾಡಿಕೊಡಲು ಮುಂದೂಡುತ್ತಿದ್ದಾರೆ ಎಂದು ದೂರಿದ ನೂರಾರು ಗ್ರಾಮಸ್ಥರು, ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಮೂರು ಸಭೆಯಲ್ಲಿ ಈ ಅರ್ಜಿಯನ್ನು ಮುಂದೂಡಿ ಸೋಮವಾರ ನಡೆಯಬೇಕಿದ್ದ ಸಾಮಾನ್ಯ ಸಭೆ ಇಡೀ ಗ್ರಾಮವೇ ಕುತೂಹಲದಲ್ಲಿ ಕಾದಿತ್ತು. ಸಾಮಾನ್ಯ ಸಭೆಯಲ್ಲಿ ಇ-ಸ್ವತ್ತು ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಿದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕಾನೂನು ಅರಿವಿಗೆ ಮತ್ತೊಮ್ಮೆ ವಕೀಲರ ಭೇಟಿ ಮಾಡುವುದಾಗಿ ಶುಕ್ರವಾರಕ್ಕೆ ಸಭೆ ಮುಂದೂಡಿದ್ದು, ಅಲ್ಲಿದ್ದ ಗ್ರಾಮಸ್ಥರನ್ನು ಕೆರಳಿಸಿದೆ.

ಪಂಚಾಯತಿ ಕಚೇರಿಯಲ್ಲೇ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಈ ಹಿಂದೆ ಕಾನೂನು ತೊಡಕಿನ ಬಗ್ಗೆ ವಕೀಲರ ಮೂಲಕ ಕಾನೂನು ಸಲಹೆ ಕೇಳಿದ್ದಾರೆ. ಮತ್ತೇ ಸಭೆ ಮುಂದೂಡಿದ್ದು, ಕೇವಲ ರಾಜಕೀಯ ಪ್ರಭಾವ. ಮಾಜಿ ಶಾಸಕರ ಪುತ್ರನೊಬ್ಬನ ಕೈ ಗೊಂಬೆಯಂತೆ ಪಿಡಿಒ ವರ್ತಿಸಿದ್ದಾರೆ. ಇಲ್ಲಿ ಸ್ವ-ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಮನಬಂದಂತೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಈ ತಕ್ಷಣಕ್ಕೆ ಸ್ಥಳಕ್ಕೆ ತಾಪಂ ಇಓ ಭೇಟಿ ನೀಡಬೇಕು ಎಂದು ಅರ್ಜಿದಾರ ಅಭಿಷೇಕ್ ಆಗ್ರಹಿಸಿದರು.
ಸಂಜೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ತಾಪಂ ಇಓ ಪರಮೇಶ್ ಕುಮಾರ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಇಂದ್ರೇಶ್ ಪ್ರತಿಭಟನಾಕಾರರ ಜೊತೆ ಚರ್ಚಿಸಿದರು. ಸಾಮಾನ್ಯ ಸಭೆಯಲ್ಲಿ ತೀರ್ಮಾನ ಆಗದ ವಿಚಾರಕ್ಕೆ ಮೂರು ದಿನಗಳ ನಂತರ ವಿಶೇಷ ಸಭೆ ನಡೆಸಿ, ಇ-ಸ್ವತ್ತು ಮಾಡುವ ವಿಚಾರಕ್ಕೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಕಾನೂನು ಸಲಹೆ ಪಡೆದು ಒಂದು ದಿನದಲ್ಲಿ ಹಿಂಬರಹ ನೀಡಿ ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದರು.
“ಖಾತೆ ಮಾಡುವ ಜಮೀನಿನ ಮೇಲಿನ ಕಾನೂನು ತೊಡಕು ಬಗ್ಗೆ ಸಲಹೆ ಪಡೆಯಲಾಗಿತ್ತು. ಪಿಡಿಓ ಈಗಾಗಲೇ ವಕೀಲರ ಭೇಟಿ ಮಾಡಿ ಕಾನೂನು ಸಲಹೆ ಪಡೆದಿದ್ದಾರೆ. ಇದರ ಬಗ್ಗೆ ಕೆಲ ಸದಸ್ಯರ ಸಮ್ಮತಿ ಇಲ್ಲದ ಕಾರಣ ಮತ್ತೊಮ್ಮೆ ಎಲ್ಲಾ ಸದಸ್ಯರ ಒಟ್ಟಾಗಿ ಕಾನೂನು ತಜ್ಞರನ್ನು ಇವತ್ತೇ ಭೇಟಿ ಮಾಡಿ ಸೂಕ್ತ ಪರಿಹಾರ ತಂದು ಆಗಸ್ಟ್ ಮಾಹೆ 2 ನೇ ತಾರೀಖು ನಿರ್ಧರಿಸಲಾಗುವುದು ಎಂದು ಮಾವಿನಹಳ್ಳಿ ಗ್ರಾಪಂ ಅಧ್ಯಕ್ಷೆ ಎನ್.ಲಕ್ಷ್ಮಿ ಅವರು ಹೇಳಿದ್ದಾರೆ.
” ಕಾನೂನು ರೀತ್ಯಾ ಸರಿ ಇರುವ ಜಮೀನಿಗೆ ಇ ಸ್ವತ್ತು ಮಾಡಿಕೊಡಲು ನಿರಾಕರಿಸಿದ ಗ್ರಾಮ ಪಂಚಾಯಿತಿ ಆಡಳಿತ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ನನಗೆ ವೈಯಕ್ತಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕಾನೂನು ಸಲಹೆ ಇಂದೇ ಪಡೆಯುವ ಆಡಳಿತ ನಾಳೆ ತೀರ್ಮಾನ ತಿಳಿಸದೆ ನಾಲ್ಕು ದಿನಗಳ ಅವಧಿ ನೀಡಿರುವುದು ಹಲವು ಅನುಮಾನಕ್ಕೀಡು ಮಾಡಿದೆ ಎಂದು ಸಂತ್ರಸ್ತ ಅರ್ಜಿದಾರ ಮಾವಿನಹಳ್ಳಿ ಅಭಿಷೇಕ್ ಹೇಳಿದ್ದಾರೆ.
