ಮುಸ್ಲಿಂ ಬಾಂಧವ್ಯ ವೇದಿಕೆ-ಕರ್ನಾಟಕ ಇಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ, ಕೋಮು ಸೌಹಾರ್ದತೆಗಾಗಿ ದನಿ ಎತ್ತುವಂತೆ ಮನವಿ ಮಾಡಿರುವುದಾಗಿ ಮುಸ್ಲಿಂ ಬಾಂಧವ್ಯ ವೇದಿಕೆಯ ಗೌರವಾಧ್ಯಕ್ಷ ಎಸ್ ಬಿ ದಾರಿಮಿ ತಿಳಿಸಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
“ದೇಶದಲ್ಲಿ ನೆಲೆಸಿರುವ ಎಲ್ಲ ಸಮುದಾಯಗಳ ನಡುವೆ ಉತ್ತಮ ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡಿರುವ ಮುಸ್ಲಿಂ ಬಾಂಧವ್ಯ ವೇದಿಕೆ-ಕರ್ನಾಟಕ ಇದು” ಎಂದರು.
“ವಿರಕ್ತ ಮಠಗಳಲ್ಲಿಯೇ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಶಕ್ತಿಕೇಂದ್ರ ಎನಿಸಿಕೊಂಡಿರುವ ಸಿದ್ದಗಂಗಾ ಮಠಾಧ್ಯಕ್ಷರನ್ನು ಭೇಟಿಯಾಗಿ ಒಂದು ಸಮುದಾಯದ ವಿರುದ್ದ ನಡೆಯುತ್ತಿರುವ ಕೋಮು ಅಸಹಿಷ್ಣತೆ ವಿರುದ್ದ ಶ್ರೀಗಳು ದನಿ ಎತ್ತುವಂತೆ ಮನವಿ ಮಾಡಿದ್ದು, ಶ್ರೀಗಳು ಅವಕಾಶ ಬಂದಾಗ, ಸೌಹಾರ್ದ ಭೂಮಿಕೆಗೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ” ಎಂದು ಹೇಳಿದರು.
“ಕರ್ನಾಟಕವು ಕುವೆಂಪು ಅವರು ಹೇಳಿರುವ ರೀತಿ ಸರ್ವ ಜನಾಂಗದ ಶಾಂತಿಯ ತೋಟ. ಆದರೆ ಕೆಲ ವರ್ಷಗಳಿಂದ ಇಲ್ಲಿ ಹಿಜಾಬ್, ಹಲಾಲ್, ಅಜ್ಹಾನ್, ವ್ಯಾಪಾರ ನಿರ್ಬಂಧ, ಟಿಪ್ಪು ಜಯಂತಿ, ಉರಿಗೌಡ-ನಂಜೇಗೌಡ, ಮೀಸಲಾತಿ ರದ್ದು ಹೀಗೆ ನಿರಂತರವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡ ಕೀಳು ಮಟ್ಟದ ರಾಜಕಾರಣದಿಂದ ನಿರಂತರ ಶೋಷಣೆಗೆ ಒಳಗಾಗುತ್ತಿದೆ. ಒಂದೆಡೆ ರಾಜಕೀಯ ಕಾರಣಕ್ಕೆ ಇದನ್ನು ಮಾಡಿದರೆ, ಇದಕ್ಕೆ ಕುಸಿಯತ್ತಿರುವ ಮೌಲ್ಯಾಧಾರಿತ ಸಮಾಜಿಕ ವ್ಯವಸ್ಥೆ ಕಾರಣವಾಗಿದೆ” ಎಂದರು.
“ಅನಾದಿ ಕಾಲದಿಂದ ಎಲ್ಲ ಸಮುದಾಯದವರ ನಡುವೆ ಉತ್ತಮ ಬಾಂಧವ್ಯ ಹೊಂದಿರುವ ಮಠ-ಮಾನ್ಯಗಳ ಸ್ವಾಮೀಜಿಗಳು ಮೌನ ಸರಿಯಲ್ಲ. ನಶಿಸುತ್ತಿರುವ ಕೋಮು ಸಾಮರಸ್ಯವನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಸ್ವಾಮಿಜೀಗಳು ಜನರಿಗೆ ಸತ್ಯ ತಿಳಿಸಬೇಕು. ಇದು ಕೇವಲ ಹಿಂದು ಧರ್ಮದ ಸ್ವಾಮೀಜಿಗಳಲ್ಲದೆ, ಎಲ್ಲ ಧರ್ಮಗಳ ಪೂಜ್ಯ ಸ್ಥಾನದಲ್ಲಿ ಇರುವವರೂ ಇದಕ್ಕೆ ಕೈಜೋಡಿಬೇಕೆಂಬುದು ನಮ್ಮ ವೇದಿಕೆಯ ಕೋರಿಕೆಯಾಗಿದೆ” ಎಂದರು.
“ರಾಜ್ಯದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಆದ ಘಟನೆಗಳನ್ನು ಇಡೀ ಸಮುದಾಯಕ್ಕೆ ಅಂಟಿಸುವ ಕೆಲಸವನ್ನು ಹೆಚ್ಚಿನ ರೀತಿಯಲ್ಲಿ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಮಠಾಧೀಶರು, ಧಾರ್ಮಿಕ ನಾಯಕರು, ಸಾಮಾಜಿಕ ನಾಯಕರು ಮತ್ತು ಮುತ್ಸದ್ದಿಗಳ ಮೌನ ಸಮ್ಮತಿ ಎಂಬಂತೆ ಕೆಲವರು ವರ್ತಿಸುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳು ನಮ್ಮ ನೆರೆ ಹೊರೆಯ ರಾಜ್ಯಗಳಲ್ಲಿ ಯಶಸ್ಸು ಕಂಡಿಲ್ಲ. ಇದಕ್ಕೆ ಅಲ್ಲಿನ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯೇ ಕಾರಣವಾಗಿದೆ” ಎಂದರು.
“ಆನಾದಿ ಕಾಲದಿಂದಲೂ ಮುಸ್ಲಿಂ ಸಮುದಾಯದೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಸಮುದಾಯಗಳೇ ಇಂತಹ ವಿಚಾರಗಳಲ್ಲಿ ಮುಂದಾಳತ್ವ ವಹಿಸುತ್ತಿರುವುದು ಕಳವಳ ಮೂಡಿಸಿದೆ. ಹಾಗಾಗಿ ಸ್ವಾಮೀಜಿಗಳು ರಾಜ್ಯದಲ್ಲಿ ಕೋಮು ಸೌಹಾರ್ದ ವಾತಾವರಣ ನಿರ್ಮಾಣದ ಮುಂದಾಳ್ವತ್ವ ವಹಿಸಬೇಕೆಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳಲ್ಲಿ ಮನವಿ ಮಾಡಿದ್ದೆವೆ” ಎಂದರು.
ಈ ಸುದ್ದಿ ಓದಿದ್ದೀರಾ? ಜು.7 | ಉಡುಪಿ ಕ್ರೈಸ್ತ ಸಮುದಾಯದ ವತಿಯಿಂದ ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಸನ್ಮಾನ
ಸುದ್ದಿಗೋಷ್ಟಿಯಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯ ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟಾ, ಸುಹೇಲ್ ಅಹಮದ್ ಮರೂರ್, ಡಾ ಹಕೀಮ್ ತೀರ್ಥಹಳ್ಳಿ, ಮುಸ್ತಾಕ್ ಹೆನ್ನಾಬೈಬ್ ಸೇರಿದಂತೆ ಹಲವರು ಇದ್ದರು.