ರೈತ– ಕಾರ್ಮಿಕ-ಜನ ವಿರೋಧಿ ನೀತಿಗಳ ಬದಲಿಸದ ಸರ್ಕಾರಗಳ ವಿರುದ್ದ ಸಿಐಟಿಯುನಿಂದ ನವೆಂಬರ್ 20ರಿಂದ 26ರವರೆಗೆ ಅರಿವಿನ ವಾರಾಚರಣೆ ಹಮ್ಮಿಕೊಂಡಿರುವುದಾಗಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.
ತುಮಕೂರು ನಗರದ ಜನ ಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ರೈತ–ಕಾರ್ಮಿಕ-ಜನ ವಿರೋಧಿ ನೀತಿಗಳ ಜಾರಿ ಮಾಡುತ್ತಾ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಬಿಜೆಪಿ ತಾನು ದೇಶದ ಜನತೆ ಮುಂದೆ ಮತ ಕೇಳುವ ಸಮಯದಲ್ಲಿ ನೀಡಿದ್ದ ಜನಪರ ಅಶಯದ ಒಂದೇ ಒಂದು ವಿಚಾರವನ್ನೂ ಜಾರಿ ಮಾಡದೆ ಜನತೆಯನ್ನು ವಂಚಿಸುತ್ತಿದೆ. ಮತ್ತೊಂದು ಕಡೆಯಲ್ಲಿ ತನ್ನ ನಿಷ್ಠೆಯನ್ನು ಕಾರ್ಪೋರೇಟ್ ಮತ್ತು ಬಹುರಾಷ್ರೀಯ ಹಾಗೂ ರಾಷ್ಟ್ರೀಯ ಬಂಡವಾಳಗಾರರಿಗೆ ದೇಶವನ್ನು ಲೂಟಿ ಮಾಡಲು ಮುಕ್ತವಾದ ಅವಕಾಶವನ್ನು ನೀಡಿದೆ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರ ತನ್ನ ನೀತಿಗಳನ್ನು ಬದಲಿಸುವಂತೆ ನಿರಂತರವಾಗಿ ರೈತ–ಕಾರ್ಮಿಕರು, ಜನರು ನಡೆಸುತ್ತಿರುವ ಚಳವಳಿಗಳನ್ನು ಪರಿಗಣಿಸದೆ ವಿದ್ಯುತ್, ರೈಲ್ವೆ, ಕಲ್ಲಿದ್ದಲು, ದೂರ ಸಂಪರ್ಕ, ವಿಮೆ, ವಿಮಾನಯಾನ, ರಕ್ಷಣಾ ವಲದ ಕೈಗಾರಿಕೆಗಳು ಸೇರಿದಂತೆ ಸರ್ವಜನಿಕ ಕ್ಷೇತ್ರದ ಕೈಗಾರಿಕೆಗಳನ್ನು ಖಾಸಗಿ ಅವರಿಗೆ ಮಾರಟ ಮಾಡುವುದನ್ನು ಶರವೇಗದಲ್ಲಿ ನಡೆಸುತ್ತಿದೆ” ಎಂದು ಹೇಳಿದರು.
“ಆರೋಗ್ಯ, ಶಿಕ್ಷಣ, ಸಾರಿಗೆ, ನೀರು, ಭೂಮಿ, ಗಣಿ, ಅರಣ್ಯ ಇವೆಲ್ಲವನ್ನೂ ಖಾಸಗಿಯವರ ಕೈಗಿಟ್ಟು ದೇಶದ ಜನತೆಗೆ ಮಹಾ ಮೋಸ ಮಾಡಲು ಹೊರಟಿದೆ. ಬೇಲೆ ಏರಿಕೆ ನಿಯಂತ್ರಿಸುವುದರಲ್ಲಿ ವಿಫಲವಾಗಿರುವ ಸರ್ಕಾರ ಉದ್ಯೋಗ ಸೃಷ್ಟಿ ಮಾಡದೆ ಇರುವ ಉದ್ಯೋಗವನ್ನು ಕಳೆಯುತ್ತಿದೆ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರದ ಈ ಎಲ್ಲ ನೀತಿಗಳ ವಿರುದ್ಧ ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ನವೆಂಬರ್ 20 ರಿಂದ 26ರ ತನಕ ಜಿಲ್ಲೆಯಲ್ಲಿ ರಾಜಕೀಯ ಅರಿವಿನ ವಾರಾಚರಣೆಯನ್ನು ನಡೆಸಲಿದೆ. ಇದರ ಭಾಗವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ 200ಕ್ಕೂ ಹೆಚ್ಚು ಬೀದಿಗಳಲ್ಲಿ ಸಭೆಗಳನ್ನು ನಡೆಸಿ ಜನತೆಯಲ್ಲಿ ಅರಿವು ಮೂಡಿಸಲಾಗುವುದು” ಎಂದರು.
“ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ನಿಷ್ಪ್ರಯೋಜಕವಾಗಿಸುವ ನಡೆ ನಿಲ್ಲಿಸಬೇಕು. ಎಲ್ಲ ಅಸಂಘಟಿತ ಕಾರ್ಮಿಕರಿಗೆ ವಸತಿ, ಇಎಸ್‌ಐ ಸೌಲಭ್ಯ ನೀಡಿ, ಸಾಮಾಜಿಕ ಭದ್ರತೆ ಯೊಜನೆ ರೂಪಿಸಿ, ಎಲ್ಲರಿಗೂ ಪಿಂಚಣಿ ಜಾರಿ ಮಾಡಬೇಕು. ರಾಜ್ಯ ಸರ್ಕಾರ 12 ಗಂಟೆಗಳ ದುಡಿಮೆಗೆ ಅವಕಾಶ ನೀಡುವ ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನು ರದ್ದುಮಾಡಬೇಕು. ಮಾಸಿಕ ಕನಿಷ್ಠ ವೇತನ ₹26,000ಗೆ ಕಡಿಮೆ ಇಲ್ಲದಂತೆ ನಿಗದಿ ಮಾಡಬೇಕು” ಎಂದು ಆಗ್ರಹಿಸಿದರು.
“ಗುತ್ತಿಗೆ ಕಾರ್ಮಿಕರ ಶೋಷಣೆ ನಿಲ್ಲಿಸಿ, ಖಾಯಂ ಸ್ವರೂಪದಲ್ಲಿ ಸರ್ಕಾರಿ, ಅರೆ ಸರ್ಕಾರಿ, ನಿಗಮ, ಮಂಡಳಿ, ನಗರಸಭೆ, ಆಸ್ಪತ್ರೆ ಸೇರಿದಂತೆ ಇತರೆಡೆ ದುಡಿಯುವ ಎಲ್ಲ ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು. ಸಂವಿಧಾನ ಅಶಯಗಳಿಗೆ ಗೌರವ ಕೊಟ್ಟು, ಅಭಿವ್ಯಕ್ತಿ, ಸ್ವಾತಂತ್ರ, ಧಾರ್ಮಿಕ ಸ್ವಾತಂತ್ರ, ಭಾಷೆ, ವೈವಿಧ್ಯತೆ, ಸಮಾನತೆ, ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರದ ದಾಳಿಗಳನ್ನು ನಿಲ್ಲಿಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿರುವ ಸಿಐಟಿಯು, ದಲಿತ ಮಹಿಳೆ, ಮಕ್ಕಳು, ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಲಾಗುವುದು” ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಕಮಲ ಮಾತನಾಡಿ, “ಜನ ಉಪಯೋಗಿ ಯೋಜನೆಗಳಾದ ಐಸಿಡಿಎಸ್, ಬಿಸಿಯೂಟ, ಆಶಾ ಇವುಗಳನ್ನು ಖಾಸಗೀಕರಿಸಬಾರದು. ಇದರಲ್ಲಿ ದುಡಿಯುವವರನ್ನು ಕಾರ್ಮಿಕರೆಂದು ಪರಿಗಣಿಸಬೇಕು” ಎಂದು ಸರ್ಕಾರಗಳಿಗೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಸಲಿ ರಾಷ್ಟ್ರೀಯವಾದಿ ಚಳವಳಿ ಹುಟ್ಟು ಹಾಕಿದ್ದು ಬಸವಣ್ಣ: ಡಾ. ಜೆ.ಎಸ್ ಪಾಟೀಲ್
ಮುಖಂಡರುಗಳಾದ ಬಿ ಉಮೇಶ್ ಅವರು ಮಾತನಾಡಿ, “ರೈತರ ವಿರೋಧಿ ಕಾಯಿದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಮಾಡಿ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೇಲೆ ನೀಡಬೇಕು. ಕೃಷಿ ಸಹಾಯಧನ ಕಡಿತ ನಿಲ್ಲಿಸಿ, ಸಹಾಯಧನ ಹೆಚ್ಚಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಕಿರುಕುಳ ನಿಲ್ಲಿಸಿ ಭೂಮಿ ನೀಡಬೇಕು” ಎಂದು ಒತ್ತಾಯಿಸಿದರು.
ಎನ್ ಕೆ ಸುಬ್ರಮಣ್ಯ ಮಾತನಾಡಿ, “ಈ ಅರಿವಿನ ವಾರಾಚರಣೆ ನಂತರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಬೆಂಗಳೂರಿನಲ್ಲಿ ನವೆಂಬರ್ 26, 27, 28 ರಂದು ನಡೆಸುತ್ತಿರುವ ನಿರಂತರ 72 ಗಂಟೆಗಳ ಧರಣಿಯಲ್ಲಿ ಸರದಿಯಲ್ಲಿ ಜಿಲ್ಲೆಯಿಂದ 4,000ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಭಾಗವಹಿಸುತ್ತಾರೆ” ಎಂದರು.