ಹಸಿರುಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನ ಮಂತ್ರಿ ಡಾ. ಬಾಬು ಜಗಜೀವನ್ ರಾಂ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದರು.
ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ ಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸರಳವಾಗಿ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ ಬಾಬು ಜಗಜೀವನ್ ರಾಂರವರ 117ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಾಬೂ ಜಗಜೀವನ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ ಮಾತನಾಡಿದರು.
“ಬಾಬು ಜಗಜೀವನರಾಂರವರು 1908ರ ಏಪ್ರಿಲ್ 5ರಂದು ಬಿಹಾರದಲ್ಲಿ ಬಡತನದ ಕುಟುಂಬದಲ್ಲಿ ಜನಿಸಿ, 10ನೇ ತರಗತಿಯಲ್ಲಿ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದರು. ಚೆನ್ನಾಗಿ ಓದಿದ ನಂತರ ಇವರಿಗೆ ಸರ್ಕಾರಿ ಉದ್ಯೋಗ ಸಿಕ್ಕಿತ್ತು. ಆದರೆ ಬಾಬೂಜಿಯವರು ಸರ್ಕಾರಿ ಉದ್ಯೋಗ ಬೇಡ ಎಂದು ಹೇಳಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ಹೋರಾಟದಲ್ಲೂ ಇವರ ಕೊಡುಗೆ ಬಹಳ ದೊಡ್ಡದಿದೆ” ಎಂದರು.
“ಸುಮಾರು 31 ವರ್ಷಗಳ ಕಾಲ ಕೇಂದ್ರ ಮಂತ್ರಿಗಳಾಗಿದ್ದ ಬಾಬು ಜಗಜೀವನ್ ರಾಂ ಅವರು ಕೃಷಿ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೈಲ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶದಲ್ಲಿ ಬರ ಪರಿಸ್ಥಿತಿ ಇದ್ದಾಗ ಹಸಿರುಕ್ರಾಂತಿಗೆ ಕಾರಣಕರ್ತರಾಗಿದ್ದಾರೆ. ಇಂತಹ ಮಹಾತ್ಮರ ತತ್ವಗಳನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪಾಲನೆ ಮಾಡಬೇಕು” ಎಂದರು.
“ನಾವು ಹೇಗೆ ನಡೆದುಕೊಳ್ಳುತ್ತೇವೆಯೋ ಅದನ್ನೇ ದೇಶ ಬಿಂಬಿಸುತ್ತದೆ. ಪ್ರತಿಯೊಬ್ಬರಿಗೂ ಆತ್ಮಶಕ್ತಿ ಬಹಳ ಮುಖ್ಯ, ಬದುಕಿನಲ್ಲಿ ಸತ್ಯ ಒಂದೇ ಇರಬೇಕೆಂದು ಬಾಬು ಜಗಜೀವನರಾಂ ಹೇಳಿದ್ದಾರೆ. ಮುಂದಿನ ಪೀಳಿಗೆಗೆ ಇವರ ಬಗ್ಗೆ ತಿಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ” ಎಂದು ಹೇಳಿದರು.
ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, “ಹಸಿರುಕ್ರಾಂತಿಯ ಹರಿಕಾರರಾಗಿ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಅತ್ಯಂತ ತಳಮಟ್ಟದಿಂದ ಇಡೀ ದೇಶವನ್ನೇ ಮುನ್ನಡೆಸುವಂತಹ ಹಂತಕ್ಕೆ ತಲುಪಿದವರು ಬಾಬು ಜಗಜೀವನ ರಾಂ ಅವರು. ಇವರು ಅತ್ಯುನ್ನತ ಸಾಧನೆಯನ್ನು ಮಾಡಿ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ” ಎಂದರು.
“ಮಹಾತ್ಮರ ಜಯಂತಿ, ಉತ್ಸವಗಳನ್ನು ತೋರಿಕೆಗಾಗಿ ಆಚರಣೆ ಮಾಡಬಾರದು. ಅವರ ತತ್ವಾದರ್ಶ, ಮೌಲ್ಯಗಳನ್ನು ನಾವೆಲ್ಲರೂ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಗಾಂಧೀಜಿ ಮತ್ತು ಬಾಬೂಜಿ ಇವರಿಬ್ಬರೂ ಕೂಡ ಸಾಧನೆಯ ಎರಡು ತುದಿಯನ್ನು ಮುಟ್ಟಿದವರು. ಇಂತಹ ಮಹನೀಯರು ಎಲ್ಲರಿಗೂ ಆದರ್ಶಪ್ರಾಯರು” ಎಂದು ಹೇಳಿದರು.
“ಮಹಾತ್ಮರ ಚರಿತ್ರೆಯನ್ನು ಆಳವಾಗಿ ಅಧ್ಯಯನ ಮಾಡಿದರೆ ಅವರ ಬದುಕಿನ ಪ್ರತಿ ಘಟ್ಟವೂ ಎಲ್ಲರಿಗೂ ಮನವರಿಕೆಯಾಗುತ್ತದೆ. ಬಾಬೂಜಿಯವರು ಕೇಂದ್ರ ಸಚಿವರಾಗಿ ಅನೇಕ ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ವಿಚಾರದಲ್ಲೂ ಕೂಡ ಮುಂಚೂಣಿಯಲ್ಲಿದ್ದು, ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಚುನಾವಣೆ ಅಕ್ರಮಗಳ ಬಗ್ಗೆ “ಸಿ-ವಿಜಿಲ್ ಸಿಟಿಜನ್ ಆ್ಯಪ್‌ನಲ್ಲಿ ದೂರು ಸಲ್ಲಿಸಿ: ಜಿಲ್ಲಾಧಿಕಾರಿ
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ನಿರ್ದೇಶಕ ಬಿ ಎಂ ದಿನೇಶ್ ಸೇರಿದಂತೆ ಸಮುದಾಯದ ಮುಖಂಡರುಗಳು ಇದ್ದರು.
