ಗುಬ್ಬಿ ತಾಲೂಕಿನ ಗಂಗಯ್ಯನಪಾಳ್ಯ, ಕುರುಬರಹಳ್ಳಿ, ದಾಸನಪ್ಪನಹಳ್ಳಿ, ತಾಳೆಕೊಪ್ಪ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಉಳುಮೆ ಮಾಡುತ್ತಿರುವ ಬಗರ್‌ಹುಕ್ಕಂ ಸಾಗುವಳಿ ದಾರರಿಗೆ ಅರಣ್ಯ ಇಲಾಖೆ ನೀಡಿರುವ ಕಿರುಕುಳ ಹಾಗು ದೌರ್ಜನ್ಯವನ್ನು ಖಂಡಿಸಿ ಬಗರ್‌ಹುಕ್ಕಂ ಸಾಗುವಳಿದಾರರು ಪಾದಯಾತ್ರೆ ನಡೆಸಿ, ಪ್ರತಿಭಟನೆ ನೆಡೆಸಿದ್ದಾರೆ.
ಗುಬ್ಬಿ ತಾಲೂಕು ಸೇರಿದಂತೆ ತುಮಕೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬಗರ್‌ಹುಕುಂ ಸಾಗುವಳಿದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ತುಮಕೂರಿನ ಭೀಮಸಂದ್ರ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗುವಳಿದಾರರು ಮತ್ತು ರೈತಸಂಘದ ಕಾರ್ಯಕರ್ತರು ಪಾದಯಾತ್ರೆ ನಡೆಸಿದ್ದಾರೆ.
ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ. ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ದೌರ್ಜನ್ಯದ ಕುರಿತು ತನಿಖೆಗೆ ಉಪ ವಿಭಾಗಾಧಿಕಾರಿಯನ್ನು ನೇಮಕ ಮಾಡುತ್ತೇವೆಂದು ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರು ಭರವಸೆ ನೀಡಿದ್ದು, ರೈತರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ರೈತರ ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, “ಬಗರ್‌ಹುಕ್ಕಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ ಎಂದು ಯಾರಿಗೂ ಆದೇಶ ನೀಡಿಲ್ಲ. ಅರಣ್ಯ ಇಲಾಖೆಯವರು ನೀಲಗಿರಿ ಮರಗಳನ್ನು ತೆರವುಗೊಳಿಸಿರುವ ಜಾಗದಲ್ಲಿ ಬೇರೆ ಗಿಡಗಳನ್ನು ಬೆಳೆಸಲು ಅನುಮತಿ ನೀಡುವಂತೆ ಕೋರಿದಾಗ, ಅವಕಾಶ ನೀಡಿದ್ದೇನೆ. ಆದರೆ, ನನಗಿರುವ ಮಾಹಿತಿ ಪ್ರಕಾರ ಸದರಿ ಸರ್ವೆ ನಂಬರ್‌ಗಳಲ್ಲಿ ಕೆಲವು ಪ್ರಭಾವಿಗಳು 12 ಎಕರೆ ಜಾಗ ಉಳುಮೆ ಮಾಡಿ, ತೆಂಗಿನ ಗಿಡ ನೆಟ್ಟಿದ್ದಾರೆ ಎನ್ನಲಾಗಿದೆ. ಅರಣ್ಯ ಭೂಮಿಯಲ್ಲಿ ಒಂದು ಎಕರೆ, ಅರ್ಧ ಎಕರೆ,ಎರಡು ಎಕರೆ ಜಾಗವನ್ನು ಹತ್ತಾರು ವರ್ಷಗಳಿಂದ ಉಳಮೆ ಮಾಡಿದ್ದರೆ ತೊಂದರೆಯಿಲ್ಲ ಸಮಿತಿಯಲ್ಲಿಟ್ಟು, ಅದರ ತೀರ್ಮಾನದಂತೆ ನಡೆದುಕೊಳ್ಳಬಹುದು.10-15 ಎಕರೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಅಂತಹ ಜಾಗವನ್ನು ತೆರವುಗೊಳಿಸದೆ ವಿಧಿಯಿಲ್ಲ” ಎಂದರು.
“ರೈತರ ಮೇಲಾಗಿರುವ ದೌರ್ಜನ್ಯದ ಸಾರ್ವಜನಿಕ ವಿಚಾರಣೆಗಾಗಿ ಸಮಿತಿ ರಚಿಸಬೇಕೆಂಬ ನಿಮ್ಮ ಬೇಡಿಕೆ ಅನ್ವಯ ತುಮಕೂರು ಉಪವಿಭಾಗಾಧಿಕಾರಿಗಳನ್ನು ಸಾರ್ವಜನಿಕ ವಿಚಾರಣಾಧಿಕಾರಿಯಾಗಿ ನೇಮಿಸುತ್ತೇನೆ. ನಿಮ್ಮ ಅಹವಾಲು ಸಲ್ಲಿಸಿ, ಅವರು ಸಲ್ಲಿಸಿದ ವರದಿಯ ಮೇಲೆ, ಅರಣ್ಯ ಇಲಾಖೆ, ಕಂದಾಯ ಮತ್ತು ರೈತರ ಸಭೆ ಕರೆದು ಚರ್ಚೆ ನಡೆಸುತ್ತೇನೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶ್ವಂತ್, “ಬಗರ್‌ಹುಕ್ಕುಂ ಸಾಗುವಳಿಗೆ ಸಂಬಂಧಿಸಿದಂತೆ ಫಾರಂ ನಂ 50-53 ಮತ್ತು 57 ಅರ್ಜಿಗಳು ಸಮಿತಿಯ ಮುಂದೆ ಮಂಜೂರಾತಿಗಾಗಿ ಪೆಡಿಂಗ್ ಇರುವ ವೇಳೆ ರೈತರನ್ನು ಒಕ್ಕಲೆಬ್ಬಿಸುವಂತಿಲ್ಲ ಎಂದು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1964ರ ನಿಯಮಗಳು ಹೇಳುತ್ತವೆ. ಆದರೆ ಸುಮಾರು 1 ಸಾವಿರಕ್ಕೂ ಅಧಿಕ ರೈತರು ಗಂಗಯ್ಯನಪಾಳ್ಯ, ತಾಳೆಕೊಪ್ಪ, ಕುರುಬರಹಳ್ಳಿ, ದಾಸಪ್ಪನಹಳ್ಳಿ ಸರ್ವೆ ನಂಬರ್‌ಗಳಲ್ಲಿ ತಾತ, ಮುತ್ತಾತನ ಕಾಲದಿಂದಲೂ ಉಳುಮೆ ಮಾಡುತ್ತಾ ಬಂದಿದ್ದಾರೆ. ಕೆಲವರಿಗೆ ಸಾಗುವಳಿ ಚೀಟಿ ಸಿಕ್ಕಿದೆ. ಇನ್ನೂ ಕೆಲವರಿಗೆ ಸಿಗಬೇಕಿದೆ” ಎಂದರು.
“ಆದರೆ, ಅರಣ್ಯ ಇಲಾಖೆಯವರು ಇದು ನಮ್ಮ ಭೂಮಿ ಎಂದು ಬಗರ್‌ಹುಕ್ಕಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ನಮ್ಮ ಬಳಿ ಜಿಲ್ಲಾಧಿಕಾರಿಗಳ ಆದೇಶವಿದೆ ಎಂದು ಹೇಳಿ ಪೊಲೀಸ್ ನಾಕಾಬಂದಿಯಲ್ಲಿ ರೈತರನ್ನು ಗೃಹ ಬಂಧನದಲ್ಲಿರಿಸಿ, ರೈತರು ಉಳುಮೆ ಮಾಡುತಿದ್ದ ಭೂಮಿಗೆ ಗಿಡಗಳನ್ನು ಹಾಕಲು ಮುಂದಾಗಿದ್ದನ್ನು ತಡೆದು ರೈತರು ಕಳೆದ 21 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ. ಅರಣ್ಯ ಇಲಾಖೆ ಮತ್ತು ಪೊಲೀಸರು ನೀವು ಇಲ್ಲಿ ಧರಣಿ ನಡೆಸಲು ಅವಕಾಶವಿಲ್ಲ. ಜಿಲ್ಲಾಧಿಕಾರಿಗಳ ಬಳಿ ಹೋಗಿ ಎಂದ ಹೇಳಿದ್ದಾರೆ.ಹಾಗಾಗಿ ನಿಮ್ಮ ಬಳಿ ಬಂದಿದ್ದೇವೆ.ನಮಗೆ ನ್ಯಾಯ ಕೊಡಿ.ನಮ್ಮ ಮೇಲಾಗಿರುವ ದೌರ್ಜನ್ಯ ಕುರಿತು ಸಾರ್ವಜನಿಕ ವಿಚಾರಣಾ ಸಮಿತಿ ರಚಿಸಿ,ನಮ್ಮ ಅಹವಾಲುಗಳನ್ನು ಸ್ವೀಕರಿಸಿ,ತಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು.ಬಗರ್‌ಹುಕ್ಕಂ ಸಾಗುವಳಿದಾರರು ಭೂಮಿಗೆ ಹೋಗಲು ಅಡ್ಡಿ ಪಡಿಸಬಾರದು ಎಂದು ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಬೇಕು” ಎಂದು ಯಶ್ವಂತ್ ಒತ್ತಾಯಿಸಿದರು.
ಪಾದಯಾತ್ರೆಯಲ್ಲಿ ಕೆಪಿಆರ್‌ಎಸ್ ಹಾಗೂ ಜಿಲ್ಲಾ ಬಗರ್ ಹುಕ್ಕಂ ಸಾಗುವಳಿದಾರರ ವೇದಿಕೆಯ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸವಣ್ಣ, ಉಪಾಧ್ಯಕ್ಷ ದೊಡ್ಡನಂಜಯ್ಯ, ಬಿ.ಉಮೇಶ್,ಎ ನ್.ಕೆ.ಸುಬ್ರಮಣ್ಯ, ಲೋಕೇಶ್, ಪ್ರಧಾನಕಾರ್ಯದರ್ಶಿ ಅಜ್ಜಪ್ಪ, ನರಸಿಂಹಮೂರ್ತಿ, ಕಾರ್ಯದರ್ಶಿ ಬಸವರಾಜು, ತಿಪಟೂರು ಮಲ್ಲಿಕಾರ್ಜುನಯ್ಯ, ಜೆ.ಎಂ.ಎಸ್ ಕಲ್ಪನಾ, ಕೂಟ್ರಪ್ಪ, ನಾಗರಾಜು, ಭೂಜರಾಜು ಸೇರಿದಂತೆ ಹಲವರು ಇದ್ದರು.