ರಾಷ್ಟ್ರದ ಎಲ್ಲಾ ರಾಜ್ಯಗಳ ಭಾಷೆಗಳು ಸಮಾನವೆನ್ನಲು ರಾಷ್ಟ್ರೀಯ ಭಾಷಾ ನೀತಿ ರಚನೆಯಾಗಬೇಕೆಂಬ ಹೋರಾಟ ನಮ್ಮದು ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ತುಮಕೂರು ಜಿಲ್ಲಾಡಳಿತ ವತಿಯಿಂದ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು-ನುಡಿ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,
ಹಿಂದಿ ಭಾಷೆಗೆ ದೊರೆಯುತ್ತಿರುವ ವಿಶೇಷ ಪ್ರಾಶಸ್ತ್ಯ ಇತರೆ ಭಾಷೆಗಳಿಗೆ ಸಿಗದಿರುವುದು ವಿಪರ್ಯಾಸ. ಹಿಂದಿ ಭಾಷೆ ರಾಷ್ಟ್ರ ಭಾಷೆಯಲ್ಲ. ಹಿಂದಿಯಂತೆ ಕನ್ನಡಕ್ಕೂ ಪ್ರಾಶಸ್ತ್ಯ ದೊರೆಯಬೇಕು. ಕನ್ನಡಕಷ್ಟೆ ಅಲ್ಲದೆ, ದೇಶದ ಇತರೆ ರಾಜ್ಯಗಳ ಭಾಷೆಗಳಿಗೂ ಪ್ರಾಶಸ್ತ್ಯ ದೊರೆಯಬೇಕೆಂದು ನಮ್ಮ ಆಗ್ರಹವಿದೆ.
ಅದೇ ರೀತಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ಇದಕ್ಕಾಗಿ ರಾಷ್ಟ್ರೀಯ ಉದ್ಯೋಗ ನೀತಿ ರಚನೆಯಾಗಬೇಕೆಂಬ ಹಕ್ಕೊತ್ತಾಯ ನಮ್ಮದು. ಇಲ್ಲದೆ ಹೋದರೆ ಎಲ್ಲ ರಾಜ್ಯ ಭಾಷೆಗಳು 2ನೇ ಹಾಗೂ 3ನೇ ದರ್ಜೆಯಲ್ಲಿಯೇ ಉಳಿಯಬೇಕಾದ ದುಸ್ಥಿತಿಗೆ ತಲುಪಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಕ್ಕೆ 2008ರ ನವೆಂಬರ್ 1ರಂದು ಶಾಸ್ತ್ರೀಯ ಸ್ಥಾನಮಾನ ನೀಡಿದ್ದರೂ ಸಹ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲು ಕರ್ನಾಟಕಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ತಮಿಳು ನಾಡಿನಲ್ಲಿ ಇಂತಹದೊಂದು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯಿಂದ ಅನುಮತಿ ಪಡೆದು ಕನ್ನಡದ ಪ್ರತ್ಯೇಕ ಶಾಸ್ತ್ರೀಯ
ಭಾಷಾ ಸಂಸ್ಥೆ ಸ್ಥಾಪನೆಗೆ ಮುಂದಾಗಬೇಕೆಂದು ಗೃಹ ಸಚಿವರಲ್ಲಿ ಅವರು ಮನವಿ ಮಾಡಿದರಲ್ಲದೆ ಪ್ರತ್ಯೇಕ ಶಾಸ್ತ್ರೀಯ ಭಾಷಾ ಸಂಸ್ಥೆ ಸ್ಥಾಪನೆಯಿಂದ ರಾಜ್ಯ ಭಾಷೆಗಳು ಮತ್ತಷ್ಟು ಬಲಗೊಳ್ಳಲು ಸಾಧ್ಯವೆಂದು ತಿಳಿಸಿದರು.
