ಮತ್ತೆ ಬಸವಣ್ಣ-ಮತ್ತೆ ಕಲ್ಯಾಣ ಜನಾಂದೋಲನವಾಗಬೇಕು ; ಸಿಐಟಿಯು ಮುಜೀಬ್
ತುಮಕೂರು ನಗರದ ಜನಪರ-ಚಳವಳಿಗಳ ಕೇಂದ್ರ ಕಛೇರಿ’ಯಲ್ಲಿ ಕಾರ್ಮಿಕ ಚಳವಳಿಯ ಸಂಗಾತಿಗಳು ಮತ್ತು ರಂಗಾಭ್ಯಾಸಿಗಳು ಬಸವ-ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಿಐಟಿಯು, ಸಿಪಿಐ(ಎಂ) ಹಾಗೂ ಬಯಲ-ಕರ್ನಾಟಕದ ಸೃಜನಶೀಲ ಕಲಾವಿದರ ಒಕ್ಕೂಟವಾದ ಬಯಲುಸೀಮೆ ಕಂಪನಿ-ತುಮಕೂರು, ಹಿರಿ-ಕಿರಿಯ ರಂಗಾಭ್ಯಾಸಿಗಳು, ಕಾರ್ಮಿಕ ಹಾಗೂ ಜನಪರ ಚಳವಳಿಗಳ ಸಂಗಾತಿಗಳು ಉಪಸ್ಥಿತರಿದ್ದರು.
ಬಸವಣ್ಣನವರ ಡೆಮಾಕ್ರಟಿಕ್-ಸೊಸೈಟಿಯ ಆಶಯಗಳನ್ನು ಕುರಿತು ವಿಸ್ತಾರವಾಗಿ ಮಾತನಾಡಿದ ರಂಗ-ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಶೋಷಣೆ, ತಾರತಮ್ಯ, ಅಸಮಾನತೆ ಮತ್ತು ವೃತ್ತಿ-ಆಧಾರಿತ ಜಾತಿಗಳ ಅಸ್ತಿತ್ವವನ್ನು ಬಲವಾಗಿ ವಿವೇಚಿಸಿ ಶ್ರಮಣ ಧಾರೆಗಳನ್ನು ಗುರ್ತಿಸಿ ನಿರೂಪಿಸ ಬಯಸಿದ್ದವರು. ಕುಲದ ಮೂಲ ನೆಲೆಗಳವರೆಗೂ ಪ್ರಭಾವಿಸುವಷ್ಟು ಪ್ರಭಾವಶಾಲಿಯಾಗಿದ್ದ ಉತ್ತರ-ಭಾರತೀಯ ವೈದಿಕ ಧರ್ಮಾಚರಣೆಗಳನ್ನು ಕನ್ನಡಿಗರು ನಿರಾಕರಿಸಬೇಕಾದ ನಿರ್ವಸಾಹತೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದವರು. ಈಕ್ವಾಲಿಟಿ ಮತ್ತು ಡೆಮಾಕ್ರಸಿಯನ್ನು ಬಲವಾಗಿ ಪ್ರತಿಪಾದಿಸಿದ ಬಸವಣ್ಣನವರು ಇವನಾರವ-ಇವನಾರವ ಎಂದು ಮನುಷ್ಯಕುಲಂ-ತಾನೊಂದೆ ವಲಂ ಎಂಬುದನ್ನು ಸ್ಪಷ್ಟ ನಿರ್ವಚಿಸಬಲ್ಲವರಾಗಿದ್ದರು. ಆ ನೆಲೆಯಿಂದಲೇ ಕಲ್ಯಾಣದ ಪರಿಕಲ್ಪನೆಯನ್ನು ಹರವಿದರು.
ಮಹಿಳಾ ಸಮಾನತೆ ಹಾಗೂ ಫ್ರೀಡಮ್ ಆಫ್ ಸ್ಪೀಚ್’ನ ದಿಟ್ಟ ಅನುಷ್ಠಾನಕಾರರಾಗಿದ್ದ ಬಸವಣ್ಣ, ಅಭಿವ್ಯಕ್ತಿ ಸ್ವಾತಂತ್ರ್ಯದ ಅತ್ಯುನ್ನತ ಸಂಕೇತದಂತೆ ‘ಅನುಭವ-ಮಂಟಪ’ ಸ್ಥಾಪಿಸಿದ್ದರು. ಮತ್ತಲ್ಲಿ, ಅಬೇಧ-ಮನಃಸ್ಥಿತಿಯ ಜನ ಕೂಡಿ-ಕಲೆತು ತಂತಮ್ಮ ಅಭಿಪ್ರಾಯ ಬೇಧಗಳನ್ನು, ಚರ್ಚೆ-ಪರಾಮರ್ಶೆಗಳನ್ನು ನಿರ್ಭೀತ ಮಂಡಿಸಲು ಜಾಗೃತಗೊಳಿಸಿದ್ದರು. ಇದು, ಈ ಕಾಲದಲ್ಲಿ ಊಹಿಸಲೂ ಅಸಾಧ್ಯ.
ಜಂಗಮ’ದ, ಸಂಗಮ’ದ ಬಸವಣ್ಣನವರನ್ನು ಕೇವಲ ಒಂದು ಜಾತಿ ಅಥವಾ ವರ್ಗದ ಪ್ರತ್ಯೇಕ ಮಠದಲ್ಲಿ ಕೂಡಿಹಾಕಲು ಸಾಧ್ಯವಿಲ್ಲ. ಹಾಗಾಗಿ, ಬಸವಣ್ಣನವರು ವಿಶ್ವಾತ್ಮಕ ಪ್ರಕೃತಿಯ ಮಾನವತಾವಾದಿ ಪರಂಪರೆಗಳಲ್ಲಿ ಇದ್ದಾರೆ. ವಚನಗಳಲ್ಲಿ ಇದ್ದಾರೆ. ಜನ-ಮಾನಸದ ನಿತ್ಯದಲ್ಲಿ ಸತ್ಯವಾಗಿದ್ದಾರೆ. ಮಠಗಳಲ್ಲಿ ಅವರಿಲ್ಲ ಎಂದರು.
ಬಸವಣ್ಣನವರ ಬಗ್ಗೆ ಕನ್ನಡದಲ್ಲಿ ರಚಿಸಲಾಗಿರುವ ಸಂಶೋಧನೆ, ನಾಟಕ, ಕಾವ್ಯ, ಮಹಾಪ್ರಬಂಧ ಹಾಗೂ ಸಂಪಾದಿತ ಕೃತಿಗಳನ್ನು ಹೆಸರಿಸಿ ಅವುಗಳಲ್ಲಿ ಬಸವಣ್ಣನವರನ್ನು ಸಂಗ್ರಹಿಸಿ ನಿರೂಪಿಸಲಾಗಿರುವ ಬಗೆಗಳನ್ನು ವಿಸ್ತರಿಸಿದ ಹೊನ್ನವಳ್ಳಿ ನಟರಾಜರು, ಬಸವಣ್ಣನವರು ಕೇವಲ ಪಠ್ಯಪುಸ್ತಕದ ಇಸವಿ-ಡೇಟು ಡೇಟಾಗಳಲ್ಲಿ ಇರುವುದಲ್ಲ. ಅವರು ಮಾನವ-ಚರಿತ್ರೆಯ ಅನಂತ ವಿಶ್ವವಾಚಿಕೆಗಳಲ್ಲಿ ಸರ್ವಥಾ ಇದ್ದಾರೆ. ರಂಗಭೂಮಿಯಲ್ಲಿ ಸಕ್ರಿಯವಾಗಿರುವ ನಾವು ನಿಯಮಿತವಾಗಿ ಅವರ ಕುರಿತಾದ ವಸ್ತು-ವಿಷಯಗಳನ್ನು ಪರಾಂಬರಿಸುತ್ತಲೇ ಪ್ರಯೋಗಿಸುತ್ತಿರುತ್ತೇವೆ. ಕರ್ಮ-ಭೂತದ ಭಾರವನ್ನು ಇಳಿಸಿ, ಕಾಯಕದ ಕೈಲಾಸ ತೋರಿದ ಬಸವಣ್ಣನವರನ್ನು ಮತ್ತೆ ಮತ್ತೆ ಓದುವುದು, ಅವರ ತತ್ವ ಮತ್ತು ಮೌಲ್ಯಗಳನ್ನು ಪಾಲಿಸುವುದು ಎಂದಿಗಿಂತ ಇಂದಿನ ತುರ್ತಾಗಿದೆ ಎಂದರು.

ಸಿಐಟಿಯು-ತುಮಕೂರಿನ ಸುಬ್ರಹ್ಮಣ್ಯ ಮಾತನಾಡಿ, ನಮ್ಮ ಕಲ್ಯಾಣ-ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರನ್ನು ನಾವು ಅವರ ಜಯಂತಿಯ ಸಂದರ್ಭದಲ್ಲಷ್ಟೇ ಅಲ್ಲದೆ, ಪ್ರಸ್ತುತ ಕಾಲದ ಸಂದರ್ಭದಲ್ಲಿ ಕ್ಷಣಕ್ಷಣಕ್ಕೂ ಅನುಕರಿಸಬೇಕಾದ ಅನಿವಾರ್ಯತೆ ಇದೆ! ಜಾತ್ಯತೀತ ಸಮ-ಸಮಾಜದ ಕಲ್ಯಾಣರಾಜ್ಯ ನಿರ್ಮಾಣಕ್ಕಾಗಿ ಪರಿತಪಿಸಿದ ಬಸವಣ್ಣನವರನ್ನು ವಿಶ್ವಗುರು ಎಂದು ಗೌರವಿಸುವುದು ನಮ್ಮ ಕರ್ತವ್ಯವೂ ಹೌದು ಎಂದರು.
ಸಿಐಟಿಯು-ತುಮಕೂರಿನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ನಾವು ಬಸವಣ್ಣನ ಅನುಯಾಯಿಗಳು ಎಂದು ಘೋಷಿಸಿಕೊಳ್ಳುವವರೇ ಬಸವಣ್ಣನವರನ್ನು ದಿನೇದಿನೇ ಅವಮಾನಿಸುತ್ತಿದ್ದಾರೆ. ಕೇವಲ ಫ್ಲೆಕ್ಸು-ಕಟೌಟು-ಫೋಟೋಶೂಟಿಗಷ್ಟೇ ಬಸವಣ್ಣನವರ ಚಿತ್ರವನ್ನು ಬಳಸಿಕೊಂಡು ತಮ್ಮ ಸ್ವಾರ್ಥ-ಸಾಧನೆ ಮಾಡಿಕೊಳ್ಳುತ್ತಿದ್ದಾರೆ. ಇವತ್ತಿನ ದಿನಮಾನಗಳಲ್ಲಿ ಬಸವಣ್ಣನವರ ತತ್ವಾದರ್ಶಗಳನ್ನು ಓದಿ ತಿಳಿಯುವ ಸಹನೆ ಬಹಳಷ್ಟು ಜನರಲ್ಲಿ ಇಲ್ಲವೇ ಇಲ್ಲ. ವೇದಿಕೆಗಳಲ್ಲಿ ಅವರ ವಚನಗಳನ್ನೂ ಕೆಲವರು ತಪ್ಪುತಪ್ಪಾಗಿ ಓದಿ ಸಭಿಕರಿಗೆ ಇರಿಸುಮುರುಸು ಮಾಡಿಬಿಡುತ್ತಾರೆ! ಇಂತಹ ಹೊಣೆಗೇಡಿತನ ಬದಲಾಗಬೇಕು. ಬಸವಣ್ಣನವರು ಕನ್ನಡ ನಾಡಿಗಷ್ಟೇ ಅಲ್ಲ ಇಡೀ ವಿಶ್ವಕ್ಕೇ ಮಾದರಿ ಆಂದೋಲನಕಾರಿ. ಅನೇಕ ಬಗೆಯ ಮೌಢ್ಯ ಮತ್ತು ಅಂಧಾನುಕರಣೆಗಳಲ್ಲಿ ಕಳೆದುಹೋಗಿರುವ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಚಳವಳಿಕಾರ. ದಕ್ಷಿಣದ ದ್ರಾವಿಡ ಪರಂಪರೆಯ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ. ಕನ್ನಡ ಭಾಷೆಯಲ್ಲೇ ಮೊತ್ತಮೊದಲು ಧರ್ಮವೊಂದನ್ನು ಕನ್ನಡಿಗರಿಗಾಗಿ ಸೃಜಿಸಿಕೊಟ್ಟ ಜಗಜ್ಯೋತಿ. ಅಂಥ ಮಹಾನ್-ಚೇತನರನ್ನು ಕೇವಲ ಕಟೌಟು-ಫ್ಲೆಕ್ಸು ಮಾಡಿ ನಿಲ್ಲಿಸುವುದು ಬಸವಣ್ಣನವರಿಗಷ್ಟೇ ಅಲ್ಲದೆ, ನಾಡಿಗೇ ಎಸಗುವ ದ್ರೋಹವಾಗುತ್ತದೆ. ನಮ್ಮ ಕಾಲಕ್ಕೆ ಮತ್ತೆ ಬಸವಣ್ಣ ಬೇಕಿದ್ದಾರೆ. ಮತ್ತೆ ಬಸವಣ್ಣ-ಮತ್ತೆ ಕಲ್ಯಾಣ ಇನ್ನು ಇಲ್ಲಿ ಆಂದೋಲನವಾಗಬೇಕಿದೆ. ಸರ್ವ-ಜನಾಂಗದ ತೋಟವಾದ ನಮ್ಮ ಈ ಕನ್ನಡನಾಡಲ್ಲಿ ಬಸವ-ಧರ್ಮ ಜಾರಿಯಾಗಬೇಕಿದೆ ಎಂದರು.
ಸಿಐಟಿಯು-ಲೋಕೇಶ್ ಮಾತನಾಡುತ್ತಾ ‘ಬಸವಣ್ಣನವರ ಓದು ಮುಖ್ಯವೇ ಹೊರತು, ಕೇವಲ ಜಯಂತಿಯ ಆಚರಣೆ ಅಲ್ಲ. ಬಸವಣ್ಣನವರ ತತ್ವಾದರ್ಶಗಳ ಅನುಷ್ಠಾನ ಮುಖ್ಯವೇ ವಿನಾ, ಬರೇ ಭಾಷಣಗಳಲ್ಲ. ವಚನಗಳನ್ನು ಆಡಿದರೆ ಸಾಲದು, ಅನುಕರಿಸಿದರೆ ಗೌರವ. ಬಸವ-ಧರ್ಮದ ಆಶಯ ಹೊಂದಿದ್ದರೆ ಸಾಲದು, ಅದನ್ನು ಪಾಲಿಸಲು ನಾವೆಲ್ಲರೂ ತಯಾರಾಗಬೇಕು ಎಂದರು.
ಸಿಐಟಿಯು-ತುಮಕೂರಿನ ಶ್ರೀಮತಿ ಕಲ್ಪನಾರವರು ಮಾತನಾಡಿ, ಬಸವಣ್ಣನವರ ಹಿನ್ನೆಲೆ, ಬಾಲ್ಯ, ಪ್ರಧಾನಮಂತ್ರಿ, ಶರಣ ಚಳವಳಿ, ಶೈವ ಪರಂಪರೆಗಳ ಬಗ್ಗೆ ಮಾತನಾಡಿದರು.
ತುಮಕೂರು ವಿಶ್ವವಿದ್ಯಾಲಯದ ಪಿಹೆಚ್‌ಡಿ-ವಿದ್ಯಾರ್ಥಿ ಮಾರುತೇಶ್ ಮಾತನಾಡಿ, ಗಾಂಧಿ-ಮಹಾತ್ಮ ಮತ್ತು ಡಾ ಅಂಬೇಡ್ಕರ್’ರವರಿಗೆ ಬಸವಣ್ಣನವರ ಅನುವಾದಿತ ವಚನಗಳು ಸಿಗಬೇಕಿತ್ತು. ಉತ್ತರ ಭಾರತದ ಕ್ರಾಂತಿಕಾರಿ ಸಮಾಜ-ಸುಧಾರಕರನ್ನು ಅವರಿಬ್ಬರೂ ಬಲ್ಲವರಾಗಿದ್ದರು. ಆದರೆ, ದಕ್ಷಿಣದ ದ್ರಾವಿಡ ಹಿನ್ನೆಲೆಯ ಕ್ರಾಂತಿಕಾರಿ ಸಮಾಜ-ಸುಧಾರಕರ ಬಗ್ಗೆಯೂ ಅವರು ತಿಳಿದಿರಬೇಕಿತ್ತು. ಆಗ, ಆಧುನಿಕ-ಭಾರತಕ್ಕೆ ಆಯೆರಡೂ ಚೇತನರು ನೀಡಿದ ಕಾಣ್ಕೆಗಳು ಭಿನ್ನದ್ದಿರುತ್ತಿದ್ದವೇನೋ…. ಎಂದು ತಮ್ಮ ಸಂಶೋಧಕ-ಪ್ರವೃತ್ತಿಯ ಅನುಮಾನದಲ್ಲಿ ನುಡಿದರು.
ಹಿರಿಯ ವಕೀಲ ಸತ್ಯನಾರಾಯಣ ರಾವ್, ಸಾಮಾಜಿಕ ಕಾರ್ಯಕರ್ತ ರಫೀಕ್ ಪಾಷಾ, ಜಲೀಲ್, ಲಕ್ಷ್ಮಿಕಾಂತ್, ಚಿತ್ರ-ಕಲಾವಿದ ರಾಘವೇಂದ್ರ ನಾಯಕ್, ಪ್ರೇರಣಾ ಬಾಬು, ಮಾಜಿ ಸೈನಿಕರಾದ ಪ್ರಸಾದ್, ರಂಗಾಭ್ಯಾಸಿ ಹೇಮಂತ್, ಕಮಲ, ನಾಸೆರ್ ಸೈಯ್ದ್ ಹುಸೇನ್, ಮತ್ತಿತರರು ಉಪಸ್ಥಿತರಿದ್ದರು.
ವರದಿ – ಸಂಚಲನ