ಯುವಕನೋರ್ವ ಘನ ಉದ್ದೇಶದಿಂದ 15,000 ಕಿಲೋಮೀಟರ್ ದೂರ ಸೈಕಲ್ ಯಾತ್ರೆ ಕ್ರಮಿಸಿ ನಾಲ್ಕು ದಿಕ್ಕಿನ ಪುಣ್ಯ ಕ್ಷೇತ್ರಗಳ ಯಾತ್ರೆ ಮುಗಿಸಿದ್ದು, ಆರು ತಿಂಗಳ ನಂತರ ತನ್ನೂರಿಗೆ ಆಗಮಿಸುತ್ತಿರುವ ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿಯ ಶಿವಾನಂದ್ ಎಲ್ಲರ ರೋಲ್ ಮಾಡೆಲ್ ಯುವಕನಾಗಿದ್ದಾನೆ.
ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿಯ 27 ವರ್ಷದ ಪದವೀಧರ ಸೈಕ್ಲಿಸ್ಟ್ ಶಿವಾನಂದ್ ʼರೈತರ ಏಳಿಗೆಗೆ ಮತ್ತು ದೇಶದ ಒಳಿತಿಗಾಗಿʼ ಎನ್ನುವ ಘೋಷ ವಾಕ್ಯದೊಂದಿಗೆ ಇದೇ ಜೂನ್ 2ರಂದು ಸೈಕಲ್ ಯಾತ್ರೆ ಪ್ರಾರಂಭಿಸಿದ್ದರು. ದೇಶದ ಹನ್ನೆರಡು ಜ್ಯೋತಿರ್ಲಿಂಗಗಳು ಮತ್ತು ನಾಲ್ಕು ಪ್ರಮುಖ ಚಾರ್ದಾಮ್(ದೇಶದ ನಾಲ್ಕು ದಿಕ್ಕುಗಳಲ್ಲಿರುವ ಯಾತ್ರಾ ಪುಣ್ಯ ಸ್ಥಳಗಳಾದ ರಾಮೇಶ್ವರ, ದ್ವಾರಕಾ, ಬದರಿ, ಪುರಿ)ಗಳ ಯಾತ್ರೆ ಮುಗಿಸಿ ತನ್ನೂರಿಗೆ ಮರಳಿದ್ದಾರೆ.
ತುಮಕೂರಿನ ಚಿಕ್ಕಬೆಳ್ಳಾವಿ ರೈತ ಕುಟುಂಬದ ಉಮೇಶ್ ಮತ್ತು ಸುವರ್ಣಮ್ಮ ದಂಪತಿಗಳ ಏಕೈಕ ಪುತ್ರ ಶಿವಾನಂದ್ ತನ್ನ ಪದವಿಯ ನಂತರ ಎಲ್ಲ ಯುವಕರಂತೆ ಮೋಜು ಮಸ್ತಿ ತಿರುಗಾಟಕ್ಕೆ ಹೋಗದೆ ತಮ್ಮ ವ್ಯವಸಾಯದ ಕೆಲಸದೊಂದಿಗೆ ತಮ್ಮ ತಂದೆ ತಾಯಿಯನ್ನು ಒಪ್ಪಿಸಿ ಈ ಸೈಕಲ್ ಯಾತ್ರೆಗೆ ಏಕಾಂಗಿಯಾಗಿ ತೆರಳಲು ಮುಂದಾಗಿರುವುದು ಬಹಳ ವಿವೇಚಿಸಬೇಕಾದ ವಿಚಾರ.

ಯಾತ್ರೆ ಪ್ರಾರಂಭದಲ್ಲಿ ಬೆಳ್ಳಾವಿಯಿಂದ ಶ್ರೀ ಕ್ಷೇತ್ರ ಶ್ವೇತಾ ಕಮಟ ಪುರಿ ಮತ್ತು ತುಮಕೂರಿನ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಸಾನಿಧ್ಯದಿಂದ ಆಶೀರ್ವಾದ ಪಡೆದು ಯಾತ್ರೆ ಪ್ರಾರಂಭಿಸಿದ್ದು, ತಮಿಳುನಾಡಿನ ರಾಮೇಶ್ವರಂ ಮುಖಾಂತರ ಆಂಧ್ರಪ್ರದೇಶದ ಶ್ರೀಶೈಲ, ಮಲ್ಲಿಕಾರ್ಜುನ ಮತ್ತು ಭೀಮಾಶಂಕರ್, ತ್ರಯಂಬಕೇಶ್ವರ್ ನಂತರ ಗುಜರಾತ್ ರಾಜ್ಯದ ಸೋಮನಾಥ, ನಾಗೇಶ್ವರ್, ದ್ವಾರಕ(ಬಡ ಚಾರ್ದಾನ) ನಂತರ ಮಧ್ಯ ಪ್ರದೇಶ ರಾಜ್ಯದ ಓಂಕಾರೇಶ್ವರ, ಮಹಾಕಾಳೇಶ್ವರ, ಶ್ರೀ ಕೃಷ್ಣನ ಜನ್ಮಸ್ಥಳವಾದ ಮಥುರಾ, ಬೃಂದಾವನ್ ನಂತರ ಕೇದಾರನಾಥ್, ಬದ್ರಿನಾಥ್(ಚಾರದಮ್) ಅಯೋಧ್ಯೆಯಲ್ಲಿ ಪ್ರವಾಸ ಮಾಡಿ ನಂತರ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ತದನಂತರ ನೇಪಾಳದ ಪಶುಪತಿನಾಥ, ಕಟ್ಮಂಡುವಿನ ಮೂಲಕ ನೇಪಾಳದಲ್ಲಿರುವ ಜಾನಕಿ ಮಂದಿರ್ ಮತ್ತೆ ಬಿಹಾರ್ ರಾಜ್ಯದ ಬಾಕ್ಕೊಂಡ್, ಬಾಬಾ ಬೈದ್ಯನಾಥ್ ತದನಂತರ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಲ್ಕತ್ತಾ ನಗರದ ಮುಖಾಂತರ ಭಾರತ ಬಾಂಗ್ಲಾದೇಶ ಬಾರ್ಡರ್ ಸರಹದ್ಧಿನಲ್ಲಿ ಪಾಸ್ ಪೋರ್ಟ್ ಇಲ್ಲದ ಕಾರಣ ಬಾಂಗ್ಲಾದೇಶ ಪ್ರವೇಶಿಸಲು ಸಾಧ್ಯವಾಗದೆ ಒರಿಸ್ಸಾದ ಪುರಿ ಜಗನ್ನಾಥ ದರ್ಶನ ಮುಗಿಸಿದ ಸೈಕ್ಲಿಸ್ಟ್ ಶಿವಾನಂದ್ ಕರ್ನಾಟಕದ ಮಂತ್ರಾಲಯದಲ್ಲಿ ರಾಯರ ದರ್ಶನ, ಹಂಪಿಯ ಅಂಜನಾದ್ರಿ ದರ್ಶನ ಮುಗಿಸಿ ಚಿತ್ರದುರ್ಗ ಜಿಲ್ಲೆಯ ಮುಖಾಂತರ ನವೆಂಬರ್ 17ರಂದು ತುಮಕೂರಿನ ತಮ್ಮ ಸ್ವಗ್ರಾಮವಾದ ಚಿಕ್ಕಬೆಳ್ಳಾವಿಗೆ ಸುರಕ್ಷಿತವಾಗಿ ಆಗಮಿಸಿರುತ್ತಾರೆ.
ಶಿವಾನಂದ್ ಅವರು ಸೈಕಲ್ ಯಾತ್ರೆಯ ಸಾಹಸದ ಬಗ್ಗೆ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. ರೈತರ ಏಳಿಗೆಗೆ ಮತ್ತು ದೇಶದ ಒಳಿತಿಗಾಗಿ ದೇವರಲ್ಲಿ ಮೊರೆ ಇಡುತ್ತ ಏಕಾಂಗಿ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದರು. ಪರಿಸರ ಪ್ರೇಮಿಯಾಗಿರುವ ಕಾರಣ ಸೈಕಲ್ ಯಾತ್ರೆಯ ಮುಖಾಂತರ ಆರೋಗ್ಯ ಕಾಪಾಡಿಕೊಳ್ಳುವ ಹಾಗೂ ಇಂಧನ ಉಳಿಸುವ ಮುಖಾಂತರ ಪರಿಸರ ಮಾಲಿನ್ಯದ ಅರಿವು ಮೂಡಿಸುತ್ತ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.

ಸೈಕಲ್‌ನೊಂದಿಗೆ ಪಂಕ್ಚರ್ ಕಿಟ್, ಟೆಂಟ್, ಮೂರು ಜೊತೆ ಬಟ್ಟೆಗಳು, ಸ್ವೆಟರ್, ಜರ್ಕಿನ್, ಯೋಗ ಮ್ಯಾಟ್, ರಗ್ಗು, ಹೆಲ್ತ್ ಕಿಟ್ ಹೀಗೆ 50 ಕೆಜಿ ಬಾರದೊಂದಿಗೆ ತೆರಳಿದ್ದು, ಸೈಕಲ್ ಮುಂಭಾಗಕ್ಕೆ ದೇಶ ಮತ್ತು ಕನ್ನಡ ನಾಡಿನ ಬಾವುಟ ಕಟ್ಟಿ ಪ್ರಯಾಣ ನಡೆಸಿದ್ದರು.
“ದೇಶದ ಜನತೆಯ ಪ್ರೀತಿ ವಿಶ್ವಾಸ ನೆನೆಸಿಕೊಂಡ ಅವರು ಬೇರೆ ಬೇರೆ ಸಮುದಾಯದ ಜನ ಘನ ಉದ್ದೇಶದ ಸೈಕಲ್ ಯಾತ್ರೆಯ ಮಧ್ಯದಲ್ಲಿ ಸಿಕ್ಕವರು ಊಟ, ವಸತಿ, ಟೀ ಕೊಡಿಸುವುದು, ಒಳ್ಳೆಯ ನಾಲ್ಕು ಮಾತನಾಡುವುದು, ಪ್ರಯಾಣದಲ್ಲಿ ನಾಲ್ಕು ಹೆಜ್ಜೆ ಜೊತೆಗೆ ಹಾಕುವುದರ ಜತೆಗೆ ಯಾತ್ರೆಗೆ ಕೈಲಾದ ಸಹಾಯ ಮಾಡಿದ್ದಾರೆ. ಬಾವುಟವನ್ನು ನೋಡಿದ ಬೆಂಗಳೂರಿನವರು ವಿಮಾನ ಪ್ರಯಾಣಕ್ಕೆ ಹೊರಟಿದ್ದವರು ಹಿಂತುರುಗಿ ಬಂದು ತಮ್ಮ ಹತ್ತಿರವಿದ್ದ ಗ್ಯಾಸ್ಕೆಟ್ ಕೊಟ್ಟು ಶುಭ ಹಾರೈಸಿ ಹೋಗಿದ್ದರು. ಅದರಲ್ಲಿ ನಾಲ್ಕು ದಿನ ಅಡುಗೆ ಮಾಡಿ ಉಂಡದ್ದು ಅವಿಸ್ಮರಣೀಯ. ಯಾವುದೇ ಹಿಂದೂ ಸಂಘಟನೆಗಳ ಬೆಂಬಲ ಇಲ್ಲದಿದ್ದರೂ ಜನರ ಪ್ರೀತಿ ವಿಶ್ವಾಸವೇ ನನಗೆ ಆಶೀರ್ವಾದ” ಎಂದು ನೆನಪಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ದೇಶದ ನಿರ್ಮಾತೃಗಳನ್ನು ಮರೆಸುವ ಷಡ್ಯಂತ್ರ ಜರಗುತಿದೆ – ಶಶಿಧರ್ ಭಾರಿಘಾಟ್
“ನಾವು ಊರಿನಲ್ಲಿ ಜಾತಿ ಧರ್ಮ ಅಂತ ಬಡಿದಾಡಿಕೊಳ್ಳುವುದಕ್ಕಿಂತ ಹೊರಗೆ ಹೋಗಿ ಜನರೊಂದಿಗೆ ಬೆರೆಯುವುದು ಮುಖ್ಯ. ಮನುಷ್ಯತ್ವ ಇರುವ ಮಾನವನಲ್ಲಿ ಯಾವುದೇ ಧರ್ಮದ ರಾಜಕೀಯ ಸುಳಿಯುವುದಿಲ್ಲ. ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕೆಲಸ ಹುಡುಕಿಕೊಂಡು ಅಸಂಖ್ಯಾತ ಜನ ಬರುತ್ತಾರೆ. ಇದು ನಮ್ಮ ರಾಜ್ಯದ ಹೆಮ್ಮೆ” ಎನ್ನುವ ಇವರ ಮಾತು ಪ್ರಸ್ತುತ ಧಾರ್ಮಿಕ ದ್ರವೀಕರಣದದಂತಹ ಕ್ಲಿಷ್ಟ ಪರಿಸ್ಥಿತಿಯ ಸಂದರ್ಭದಲ್ಲಿ ಮನಸ್ಸಿಗೆ ತಟ್ಟಿತು.
“ಮುಂದಿನ ಜೀವನದ ಗುರಿ ಗೊತ್ತಿಲ್ಲ. ಸದ್ಯಕ್ಕೆ ವ್ಯವಸಾಯ ಮಾಡ್ತೀನಿ. ದೇಶವನ್ನು ಟಿವಿಯಲ್ಲೋ ಮೊಬೈಲ್‌ನಲ್ಲಿಯೋ ನೋಡುವುದಕ್ಕಿಂತ ನೇರ ನೋಡುವುದು, ಬೆರೆಯುವುದು ಬಹಳ ಮುಖ್ಯ. ದೇಶದ ಜನರ ಪ್ರೋತ್ಸಾಹ, ಪ್ರೀತಿ ವಿಶ್ವಾಸ ಮತ್ತು ದೇವರ ಆಶೀರ್ವಾದೊಂದಿಗೆ ಈ ಪ್ರವಾಸ ಯಶಸ್ವಯಾಗಿದೆ. ಈ ಪ್ರವಾಸಕ್ಕೆ ಅನೇಕ ಅಡೆತಡೆಗಳು, ಏಕಾಂಗಿತನ, ಹಸಿವು, ಪ್ರಕೃತಿ ವಿಕೋಪಗಳ ನಡುವೆಯೂ ಜನರ ಆಶೀರ್ವಾದದಿಂದ ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯವಾಯಿತು” ಎಂದು ವಿನಯದಿಂದ ನುಡಿಯುತ್ತಾರೆ ತುಮಕೂರಿನ ಚಿಕ್ಕಬಳ್ಳಾವಿಯ ಸಾಹಸಿ ಶಿವಾನಂದ.
ವರದಿ : ರವಿಕುಮಾರ್, ತುಮಕೂರು