30 ವರ್ಷಗಳ ಸುದೀರ್ಘವಾದ ಒಳಮೀಸಲಾತಿ ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಿದ್ದಂತೆ ಬಿಜೆಪಿ, ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಜಾರಿ ಮಾಡುತ್ತದೆ ಎಂದು ನಾವು ಭಾವಿಸಿದ್ದೆವು, ಆದರೆ ಮಾಡದೆ ಮೋಸ ಮಾಡಿತು ಎಂದು ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಹೇಳಿದರು.
ತುಮಕೂರಿನ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ನಡೆದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಮೋದಿ, ಇಂದು ಒಳಮೀಸಲಾತಿಯನ್ನು ಕೋಮಾದಲ್ಲಿರಿಸಿದ್ದಾರೆ. ಇಡಬ್ಲ್ಯೂಎಸ್ ಶೇ. 10ರಷ್ಟು ಮೀಸಲಾತಿಯನ್ನು ಒಂದೇ ದಿನದಲ್ಲಿ ಜಾರಿಗೊಳಿಸಿದ ಮೋದಿ ಸರ್ಕಾರ ಒಳಮೀಸಲಾತಿಯನ್ನು 10 ವರ್ಷಗಳಾದರೂ ಜಾರಿಗೊಳಿಸಲಿಲ್ಲ. ಆದ್ದರಿಂದ ಇಷ್ಟು ದಿಟ್ಟ ನಿರ್ಲಕ್ಷ್ಯ ವಹಿಸಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಮಾದಿಗ ಸಮುದಾಯ ಸೋಲಿಸಬೇಕೆಂದು ಕರೆ ನೀಡಿದರು.
ರಾಜ್ಯಾದ್ಯಂತ ಆರ್‌ಎಸ್‌ಎಸ್, ಬಿಜೆಪಿ ಪ್ರಾಯೋಜಿತ ಮಾದಿಗ ಮುನ್ನಡೆ ನೆಲಕಚ್ಚಿದೆ. ಹೋರಾಟವನ್ನು ದಿಕ್ಕು ತಪ್ಪಿಸಲು ಬಿಜೆಪಿ ಮುಂದಾಗಿದ್ದನ್ನು ಗಮನಿಸಿದ ಮಾದಿಗ ಸಮುದಾಯ ಪಾಲ್ಗೊಳ್ಳದೆ ನೆಲಕಚ್ಚಿಸಿದೆ. 2018ರಲ್ಲಿ ಇದೇ ರೀತಿ ಕಾಂಗ್ರೆಸ್ ಒಳಮೀಸಲಾತಿಯನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಸೋತಿದ್ದನ್ನು ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. 2023ರಲ್ಲಿ ಮಾದಿಗ ಸಮುದಾಯ ಕಾಂಗ್ರೆಸ್ ಜೊತೆಗೆ ನಿಂತಿದ್ದಕ್ಕೆ 136 ಸ್ಥಾನ ಗೆಲುವು ಸಾಧಿಸಲು ಸಾಧ್ಯವಾಗಿದೆ. ಕೋಮುವಾದಿ, ಮನುವಾದಿ, ಸನಾತನವಾದಿ ಸಿದ್ದಾಂತವನ್ನು ಈ ಚುನಾವಣೆಯಲ್ಲಿ ನಾವು ಸೋಲಿಸಬೇಕಾಗಿದೆ ಎಂದು ಬಸವರಾಜ್ ಕೌತಾಳ್ ಹೇಳಿದರು.
ಡಾ. ಬಸವರಾಜ್ ಮಾತನಾಡಿ ಸಂವಿಧಾನದ ಸಮಬಾಳು ಸಮಪಾಲು ಆಶಯದಲ್ಲಿ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳನ್ನು ನೀಡಿದ್ದಾರೆ. ಈ ಗ್ಯಾರಂಟಿಗಳನ್ನು ಪ್ರಶ್ನಿಸಿ ಬಿಜೆಪಿ ಕೋರ್ಟ್ ಮೋರೆ ಹೋಗಿದೆ. ಇಂತಹ ಗೋಮುಖ ವ್ಯಾಘ್ರಗಳಿಗೆ ಈ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು. ದಲಿತರು ಈ ಲೋಕಸಭೆ ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳದಿದ್ದರೆ, ಸಂವಿಧಾನ ಬದಲಾವಣೆ ಶತಸಿದ್ದವಾಗುತ್ತದೆ. ಮುಂದಿನ ಅಪಾಯಗಳ ತಡೆಗಾಗಿ ಜನಚಳುವಳಿಗಳು ಗಟ್ಟಿಯಾಗಬೇಕೆಂದರು.
ಸಭೆಯಲ್ಲಿ ಕೆ.ದೊರೈರಾಜ್, ಡಾ.ಅರುಂಧತಿ, ಎ.ನರಸಿಂಹಮೂರ್ತಿ, ಕೊಟ್ಟಶಂಕರ್, ರಂಗಧಾಮಯ್ಯ, ನರಸೀಯಪ್ಪ, ಪಿ.ಎನ್ ರಾಮಯ್ಯ, ಅನುಪಮಾ, ಪೂರ್ಣಿಮಾ, ಸುಧಾ, ಅರುಣ್, ಟಿ.ಸಿ. ರಾಮಯ್ಯ, ಕೃಷ್ಣಮೂರ್ತಿ, ತಿರುಮಲಯ್ಯ, ಮೋಹನ್, ವೆಂಕಟೇಶ್, ಕಾಶಿರಾಜ್, ರಾಜ, ಲಕ್ಷ್ಮಿಕಾಂತ್ ಮುಂತಾದವರು ಪಾಲ್ಗೊಂಡಿದ್ದರು.
