ತುಮಕೂರು: ಸಹೋದ್ಯೋಗಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದರು ಎನ್ನಲಾದ ಪಬ್ಲಿಕ್ ಟಿ.ವಿ. ವರದಿಗಾರನ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಏ.21 ರಂದು ತುಮಕೂರು ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಮೇಲೆ ಇ.ಡಿ ದಾಳಿ ನಡೆದಿತ್ತು. ಈ ವೇಳೆ ಝೀ ಟಿ.ವಿ ಸುದ್ದಿ ವಾಹಿನಿಯ ವರದಿಗಾರ ಮಂಜುನಾಥ್ ಜಿ.ಎನ್ ಅವರು ವರದಿ ಮಾಡಲೆಂದು ಎಸ್‌ಎಸ್‌ಐಟಿಗೆ ಕಾಲೇಜಿಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಪಬ್ಲಿಕ್ ಟಿ.ವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಎಂಬಾತ ಝೀ ಟಿ.ವಿ ವರದಿಗಾರ ಮಂಜುನಾಥ್ ಜಿ.ಎನ್ ಎಂಬುವವರ ಮೇಲೆ ಎರಗಿ ಪಬ್ಲಿಕ್ ಟಿ.ವಿ ಕಬ್ಬಿಣದ ಲೋಗೋ ಮೈಕಿನಿಂದ ಹಲ್ಲೆ ಮಾಡಿರುವುದು ಅಲ್ಲದೆ, ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಝೀ ನ್ಯೂಸ್ ವರದಿಗಾರ ಮಂಜುನಾಥ್ ಜಿ.ಎನ್ ಅವರಿಗೆ ಕುತ್ತಿಗೆಗೆ ಪೆಟ್ಟಾಗಿದ್ದು, ರಕ್ತಗಾಯಗಳಾಗಿವೆ. ಈ ವೇಳೆ ಸಹೋದ್ಯೋಗಿ ಮಿತ್ರರು ಮಂಜುನಾಥ್ ಜಿ.ಎನ್ ಅವರನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.