ತುಮಕೂರು | ಜೀನ್ಸ್‌ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಸಿಇಟಿ ಪರೀಕ್ಷೆಗೆ ನಿರ್ಬಂಧ; ಜನಿವಾರದ ಪರ ದನಿ ಎತ್ತಿದವರು ಈಗೆಲ್ಲಿ?

Date:

Advertisements

ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಜಿ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ, ಜೀನ್ಸ್‌ ಪ್ಯಾಂಟ್ ಧರಿಸಿದ್ದ ಕಾರಣಕ್ಕೆ ಕೆಲವು ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಯಿತು. ಈ ಘಟನೆಯಿಂದ ಆತಂಕಗೊಂಡ ವಿದ್ಯಾರ್ಥಿನಿಯರಿಗೆ ಆಟೋ ಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತ ಯಡಿಯೂರಪ್ಪ ಸಹಾಯಕ್ಕೆ ಧಾವಿಸಿ, ವಿದ್ಯಾರ್ಥಿನಿಯರನ್ನು ತಮ್ಮ ಆಟೋದಲ್ಲಿ ಸಮೀಪದ ಬಟ್ಟೆ ಅಂಗಡಿಗೆ ಕರೆದೊಯ್ದು, ಸ್ವಂತ ಖರ್ಚಿನಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಿ ಕೊಟ್ಟಿದ್ದಾರೆ.

ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ, ಜೀನ್ಸ್ ಪ್ಯಾಂಟ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ತಡೆದು, ಪರೀಕ್ಷೆಗೆ ಪ್ರವೇಶವಿಲ್ಲವೆಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ಬಿಸಿಎ ಓದುತ್ತಿರುವ ಶ್ರೀಲಕ್ಷ್ಮೀ ಮತ್ತು ಕೀರ್ತನಾ ಎಂಬ ವಿದ್ಯಾರ್ಥಿನಿಯರಿಗೂ ಕೂಡ ಇದೇ ಕಹಿ ಅನುಭವವಾಗಿದೆ. ಹಾಸ್ಟೆಲ್‌ನಿಂದ ಪರೀಕ್ಷೆಗೆ ಆಗಮಿಸಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ, ಹಾಸ್ಟೆಲ್ ಸುಮಾರು 6 ಕಿ.ಮೀ ದೂರವಿತ್ತು. ಪರೀಕ್ಷಾ ಕೊಠಡಿಗೆ ತೆರಳಲು ಕೇವಲ 15 ನಿಮಿಷಗಳು ಮಾತ್ರ ಬಾಕಿ ಇತ್ತು. ಇಂಥ ಸಂದರ್ಭದಲ್ಲಿ, 6 ಕಿ.ಮೀ ದೂರದ ಹಾಸ್ಟೆಲ್‌ಗೆ ಹೋಗಿ ಬಟ್ಟೆ ಬದಲಾಯಿಸಿ ಬರುವುದು ಅಸಾಧ್ಯವಾಗಿತ್ತು. ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ ಎಂಬ ಗೊಂದಲದಲ್ಲಿ ವಿದ್ಯಾರ್ಥಿನಿಯರು ಕಂಗಾಲಾಗಿದ್ದರು.

ಇದೆಲ್ಲದರ ನಡುವೆ, ಪರೀಕ್ಷಾ ಕೇಂದ್ರಕ್ಕೆ ಪ್ರವೇಶಕ್ಕೂ ಮುನ್ನ ಆಭರಣಗಳನ್ನು ತೆಗೆದಿಡುವಂತೆ ಸೂಚಿಸಿದಾಗ, ವಿದ್ಯಾರ್ಥಿನಿ ಕೀರ್ತನಾ ತಮ್ಮ ಕಿವಿ ಓಲೆಗಳನ್ನು ಬಿಚ್ಚಿಟ್ಟಿದ್ದರು. ಈ ಸಂದರ್ಭದಲ್ಲಿ ಅವು ಕಳೆದುಹೋಗಿವೆಯೆಂದು ಕೀರ್ತನಾ ಪೋಷಕರು ಆರೋಪಿಸಿದ್ದು, ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಪರೀಕ್ಷೆಗಳ ಸುವ್ಯವಸ್ಥೆಗಾಗಿ ಕೆಲವು ನಿಯಮಗಳು ಅಗತ್ಯವಿದ್ದರೂ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡದಂತೆ ಹಾಗೂ ಮುಂಚಿತವಾಗಿ ಸ್ಪಷ್ಟ ಸೂಚನೆಗಳನ್ನು ನೀಡುವಂತೆ ಪೋಷಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisements

“ಜೀನ್ಸ್ ಧರಿಸಿದ್ದಕ್ಕೆ ಪ್ರವೇಶ ನಿರಾಕರಿಸಿದಾಗ ಆತಂಕಗೊಂಡೆ, ಆದರೆ ಯಡಿಯೂರಪ್ಪ ಅವರ ಸಹಾಯ ನನಗೆ ಧೈರ್ಯ ತುಂಬಿತು. ಈ ಕಾರ್ಯದಿಂದ ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಪರೀಕ್ಷೆಯನ್ನು ಬರೆಯಲು ಸಾಧ್ಯವಾಯಿತು” ಎಂದು ವಿದ್ಯಾರ್ಥಿನಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಪರೀಕ್ಷಾ ಮೇಲ್ವಿಚಾರಕರ ಈ ‘ಯಡವಟ್ಟು’ ನೂರಾರು ವಿದ್ಯಾರ್ಥಿನಿಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಪರೀಕ್ಷಾರ್ಥಿಗಳು ಮೊದಲೇ ಪರೀಕ್ಷೆ ಬರೆಯುವ ಧಾವಂತದಲ್ಲಿರುತ್ತಾರೆ. ಇದರ ನಡುವೆ ಇಂತಹ ಯಡವಟ್ಟುಗಳು ಅವರನ್ನು ಮತ್ತಷ್ಟು ಆತಂಕಿತರನ್ನಾಗಿ ಮಾಡುತ್ತವೆ.

ಪರೀಕ್ಷಾ ಕೇಂದ್ರದ ನಿಯಮಗಳು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತಿಳಿಯದಿದ್ದರೆ, ಇಂತಹ ಗೊಂದಲಗಳು ಉಂಟಾಗಬಹುದು. ಪರೀಕ್ಷಾ ಸಂಸ್ಥೆಗಳು ಮುಂಚಿತವಾಗಿ ಸರಿಯಾದ ಮಾಹಿತಿಯನ್ನು ಒದಗಿಸಬೇಕಿದೆ. ಅಲ್ಲದೆ, ಪರೀಕ್ಷಾ ಕೇಂದ್ರದಲ್ಲಿ ಕಿವಿಯೋಲೆ ಕಳೆದುಹೋದ ಬಗ್ಗೆ ಪೋಷಕರು ದೂರಿದ್ದು, ಕೇಂದ್ರದ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯಡಿಯೂರಪ್ಪ, ಆಟೋ ಚಾಲನೆಯ ಜತೆಗೆ ಸಾಮಾಜಿಕ ಕಾರ್ಯಕರ್ತರಾಗಿ, ತಮ್ಮ ಸಮಾಜದಲ್ಲಿ ಸಹಾಯಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ವಿದ್ಯಾರ್ಥಿನಿಯರು ಮತ್ತು ಪೋಷಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು, ಸಣ್ಣ ದಯಾಳು ಕಾರ್ಯವೂ ಒಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂಬುದನ್ನು ಎಲ್ಲರಿಗೂ ಕಲಿಸಿದೆ.

ಯಡಿಯೂರಪ್ಪ ಅವರಂತಹ ವ್ಯಕ್ತಿಗಳು, ಸಮಾಜದಲ್ಲಿ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಾರೆ. ಇಂತಹ ಕತೆಗಳು ಸ್ಫೂರ್ತಿಯಾಗಿ, ಸಹಾನುಭೂತಿ ಮತ್ತು ಸಹಕಾರದ ಮಹತ್ವವನ್ನು ಒತ್ತಿಹೇಳುತ್ತವೆ.

ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದಕ್ಕೆ ಸಂಬಂಧಿಸಿದಂತೆ, ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ(NHRC) ಔಪಚಾರಿಕ ದೂರು ದಾಖಲಿಸಿದ್ದರು.

ಇದನ್ನೂ ಓದಿದ್ದೀರಾ? ಬೆಳಗಾವಿ | ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸ್ವಪಕ್ಷದವರಿಂದ ಬಹಿರಂಗವಾಗಿದೆ : ಸಂಸದ ಜಗದೀಶ ಶೆಟ್ಟರ್

ಅಲ್ಲದೆ, “ಜನಿವಾರ ತೆಗೆಸುವ ಮೂಲಕ ಅವರ ಧಾರ್ಮಿಕ ಭಾವನೆಗಳಿಗೆ, ಹಕ್ಕುಗಳಿಗೆ ಚ್ಯುತಿ ತಂದ ರಾಜ್ಯ ಸರ್ಕಾರದ ನಡೆ ವಿರುದ್ಧ ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದೇನೆ. ನಾಗರಿಕರ ಸಂವಿಧಾನದತ್ತ ಹಕ್ಕುಗಳು ಹಾಗೂ ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ, ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ” ಎಂದು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಚಾರಗಳೆಲ್ಲವೂ ಮುನ್ನಲೆಗೆ ಬಂದಿದ್ದವು. ಬಿಜೆಪಿ ನಾಯಕರು ಸೇರಿದಂತೆ ಹಲವರು ಬೃಹತ್‌ ಪ್ರತಿಭಟನೆಗಳನ್ನು ನಡೆಸಿದ್ದರು. ಅಲ್ಲದೆ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿ ಮಾರ್ಪಟ್ಟಿತ್ತು. ಅಲ್ಲದೆ ವಿವಾದಕ್ಕೆ ಒಳಗಾದ ಅಭ್ಯರ್ಥಿಗೆ ಉಚಿತ ಸೀಟು ದೊರೆಯುವಂತೆಯೂ ಆಯಿತು. ಆದರೆ ಹೆಣ್ಣುಮಕ್ಕಳ ವಸ್ತ್ರ ತೆಗೆಸಿರುವುದು ಯಾವುದೇ ನಾಯಕರಿಗೂ ದೊಡ್ಡ ವಿಷಯವಾಗಿ ಕಂಡಿಲ್ಲ. ಪರೀಕ್ಷಾ ಕೇಂದ್ರಗಳ ವಿರುದ್ಧ ಯಾವುದೇ ಪ್ರತಿಭಟನೆಗಳು ಆರಂಭವಾಗಿಲ್ಲ. ಹೆಣ್ಣುಮಕ್ಕಳಿಗೆ ಅವರ ಭಾವನೆಗಳಿಲ್ಲವೇ? ಅವರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ? ಈ ಬಗ್ಗೆ ಈ ನಾಡಿನ ಸತ್ಪ್ರಜೆಗಳು ದನಿ ಎತ್ತುವರೇ?

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X