ತುಮಕೂರು ನಗರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ನಗರದ ಬಿಸಿಎಂ ಇಲಾಖೆಯ ಕಚೇರಿ ಎದುರು ಮಂಗಳವಾರ (ಜ.2) ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಬಿಸಿಡಬ್ಲೂ ಹಾಸ್ಟೆಲ್ ವಿದ್ಯಾರ್ಥಿನಿಯರು ಸಂಜೆ 8ಗಂಟೆ ಸಮಯದಲ್ಲಿ ಹಾಸ್ಟೆಲ್‌ನಿಂದ ನೇರವಾಗಿ ಬಿಸಿಎಂ ಕಚೇರಿ ಎದುರು ಬಂದು ದಿಢೀರನೆ ಪ್ರತಿಭಟನೆ ಕುಳಿತರು.
ಹಾಸ್ಟೆಲ್‌ನಿಂದ ಸುಮಾರು 1 ಕಿ.ಮೀವರೆಗೆ ನಡೆದುಕೊಂಡು ಬಂದ 100ಕ್ಕೂ ಅಧಿಕ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಇಲ್ಲಿ ಇರುವ 300 ವಿದ್ಯಾರ್ಥಿನಿಯರಿಗೆ ಸಮರ್ಪಕವಾದ ಶೌಚಾಲಯ ಇಲ್ಲ. ಒಂದುವರೆ ತಿಂಗಳಿನಿಂದ ಈ ಸಮಸ್ಯೆ ಇದೆ. ಇರುವ ಎರಡು ಶೌಚಾಲಯವನ್ನು 300 ವಿದ್ಯಾರ್ಥಿನಿಯರು ಬಳಸಿಕೊಳ್ಳಬೇಕು. ಇದರಿಂದಾಗಿ ಸಮಸ್ಯೆ ತೀವ್ರವಾಗಿದೆ ಎಂದು ವಿದ್ಯಾರ್ಥಿನಿಯರು ತಮ್ಮ ಸಮಸ್ಯೆ ಹೇಳಿಕೊಂಡರು.
ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶೌಚಾಲಯ ಸಮಸ್ಯೆಯಿಂದಾಗಿ ತರಗತಿಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿಲ್ಲ. ರಾತ್ರಿ ಎರಡು ಗಂಟೆಗೆ ಎದ್ದು ಸ್ನಾನಕ್ಕೆ ಹೋಗುವಂತಹ ಪರಿಸ್ಥಿತಿ ಇದೆ. ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇನ್ನು ರಾತ್ರಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರೂ, ಯಾವೊಬ್ಬ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದಿಲ್ಲ, ಸಮಸ್ಯೆ ಆಲಿಸಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.