ಒಂದು ಕ್ಷುಲ್ಲಕ ಎಂದು ಭಾವಿಸಲಾಗಿರುವ ಮಂಥರೆಯ ಪಾತ್ರಕ್ಕೆ ಕುವೆಂಪು ತಮ್ಮ ಮಹಾಕಾವ್ಯದಲ್ಲಿ ‘ಗ್ರಾಂಡ್ ಎಂಟ್ರಿ’ಯನ್ನು ಕೊಡುತ್ತಾರೆ. ಅಲ್ಲದೇ, ತನ್ನ ಜೀವ ಕೊಟ್ಟು ರಾಮನ ಜೀವ ಉಳಿಸುವ ಮೂಲಕ ಶಬರಿಯು ರಾಮನಿಗಿಂತಲೂ ಹೇಗೆ ಒಂದು ಹೆಜ್ಜೆ ಮಿಗಿಲು ಎಂಬುದನ್ನು ಚಿತ್ರಿಸುತ್ತಾರೆ. ಇದು ಕುವೆಂಪು ಯಾವ ರೀತಿಯ ಸ್ತ್ರೀ ಪಾತ್ರಗಳನ್ನು ನಮಗೆ ಕಾಣಿಸುತ್ತಿದ್ದಾರೆ ಎಂಬುದಕ್ಕೆ ನಿದರ್ಶನ. ಕುವೆಂಪು ಅವರ ತೀಕ್ಷ್ಣವಾದ ವಿಮರ್ಶೆಗೆ ಅಯೋಧ್ಯೆಯೂ ಹೊರತಲ್ಲ ಎಂದು ಪ್ರೊ ನಿತ್ಯಾನಂದ ಬಿ ಶೆಟ್ಟಿ ಅಭಿಪ್ರಾಯಪಟ್ಟರು.
ತುಮಕೂರು ನಗರದ ಜನ ಚಳವಳಿ ಕೇಂದ್ರದಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘ ತುಮಕೂರು, ವಿಚಾರ ಮಂಟಪ ಬಳಗ ತುಮಕೂರು ಇವರ ಸಹಯೋಗದಲ್ಲಿ ನಡೆದ ‘ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿನ ಸ್ತ್ರೀ ಪಾತ್ರಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಕ್ರಾಫ್ಟ್ಸ್ ಮೆನ್‌ಶಿಫ್ ಎಂಥಹದ್ದು ಎಂಬುದು ನಮಗೆ ರಾಮಾಯಣದರ್ಶನಂ ಮಹಾ ಕಾವ್ಯದ ಪ್ರತಿ ಸಂದರ್ಭದಲ್ಲಿಯೂ ಕಾಣುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ, ಕುಟಿಲತೆಯೇ ಸಾಕಾರಗೊಂಡAತೆ, ಹಿಂದಿಲ್ಲದ ಮುಂದಿಲ್ಲದ ಮಂಥರೆಯನ್ನು ಚಿತ್ರಿಸಿದರೆ, ಕುವೆಂಪು ಮಂಥರೆ ಹೀಗಾಗಲು ಕಾರಣವೇನು? ಎಂಬುದನ್ನು ಕಾಣಿಸುವ ಪ್ರಯತ್ನ ಮಾಡುತ್ತಾರೆ. ಮಂಥರೆ ಮಂತ್ರಿ ಸುಮಂತ್ರನೂ ಪರಿಹರಿಸಲಾರದ ರಾಮನ ಆಸೆಯನ್ನು ಕ್ಷಣ ಮಾತ್ರದಲ್ಲಿ ಪರಿಹರಿಸುವಷ್ಟು ಜಾಣೆ. ಆದರೆ, ಇವಳ ಹೃದಯದಲ್ಲಿನ ಮೈತ್ರಿ ನುಚ್ಚುನೂರಾಗುವಂತೆ ‘ಮುಟ್ಟದಿರು ಕಂದನಿಗೆ ಅಮಂಗಳA’ ಎಂದು ಕೌಸಲ್ಯೆ ಅವಳನ್ನು ಅವಮಾನಿಸುತ್ತಾಳೆ. ಹೀಗೆ ಮಂಥರೆಯಲ್ಲಿ ಅರಮನೆಯೇ ವಿಷವನ್ನು ಭಿತ್ತಿದ ಸಂದರ್ಭವನ್ನು ಕುವೆಂಪು ಬಹು ದೀರ್ಘವಾಗಿ ಚಿತ್ರಿಸಿದ್ದಾರೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯೆಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬರುವ ಧಾನ್ಯಮಾಲಿನಿ, ತ್ರಿಜಟೆ, ಸೀತೆ, ಅನಲೆ, ಕೈಕೇಯಿ ಮುಂತಾದ ಪ್ರಬುದ್ಧ ಸ್ತ್ರೀ ಪಾತ್ರಗಳನ್ನು ಕುವೆಂಪು ಚಿತ್ರಿಸಿರುವ ಬಗೆ ಅತ್ಯಧ್ಬುತವಾದದ್ದು. ಕೈಕೆಯಿ ಯುದ್ಧ ಕಲೆ ತಿಳಿದಿದ್ದವಳು. ಆಡಳಿತದಲ್ಲೂ ದಶರಥನಿಗೆ ಸಲಹೆ ಕೊಡುವವಳು. ಆದರೆ, ಇಡೀ ಅರಮೆನೆಗೆ ತಿಳಿದಿದ್ದ ರಾಮನ ಪಟ್ಟಾಭಿಷೇಕದ ವಿಷಯ ಕೈಕೆಯಿಗೆ ತಿಳಿಯುವುದು ಒಬ್ಬ ದಾಸಿಯಿಂದ. ಇದನ್ನ ಗಮನಿಸಿದರೆ ಅರಮನೆಯ ಅಧಿಕಾರ, ಷಡ್ಯಂತ್ರಗಳು ಎಂಥಹವು ಎಂಬುವುಗಳ ನಮಗೆ ತಿಳಿಯುತ್ತವೆ. ಈ ಹಿನ್ನೆಲೆಯಲ್ಲಿಯೂ ನಾವು ಕೈಕೆಯಿಯ ಪಾತ್ರವನ್ನು ಗಮನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ, ವಿಚಾರ ಮಂಟಪದ ಅಧ್ಯಕ್ಷ ವರುಣ್ ರಾಜ್, ಕಾರ್ಯಕ್ರಮದ ಸಂಚಾಲಕಿ ಆಶಾರಾಣಿ ಬಗ್ಗನಡು, ಡಾ. ಗೀತಾ ವಸಂತ, ಸುಗುಣಾ ದೇವಿ, ಸುರೈನಾ, ಆಶಾ ಸಚಿನ್, ಸಿ.ಎ. ಇಂದಿರಾ, ಲಲಿತಾ, ಅನುಪಮ, ಡಾ. ವೀಣಾ, ಪಾರ್ವತಮ್ಮ ರಾಜ್‌ಕುಮಾರ್, ಗಂಗಲಕ್ಷ್ಮೀ, ಚೇತನಾ, ಲೀಲಾ, ಅಕ್ಷತಾ, ಉಷಾ, ಗೀತಾನಾಗೇಶ್, ರಾಣಿಚಂದ್ರಶೇಖರ್, ಪರಿಮಳ, ಸತೀಶ್, ವಿದ್ಯಾ ಅರಮನೆ, ಶಶಿವಸಂತ್, ಮಾಮ್ತಾಜ್, ರಂಗಮಣಿ ಕಾಮೇಶ್, ಮರಿಯಂಬೀ, ಲತಾ ವಡ್ಡಗೆರೆ, ನಿರ್ಮಲಾ, ಸ್ಲಂಜನಾಃದೋಲನದ ಅರುಣ್, ತಿಲಕ್‌ಕುಮಾರ್ ಬ್ಯಾತ ಮುಂತಾದವರು ಇದ್ದರು.