ರಾಜ್ಯದ 13 ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಬ್ಬರಿ ಬೆಳೆಯ ಬಗ್ಗೆ ಕಂಜೂಸ್ ಗಿರಾಕಿ ಎನಿಸಿದ್ದಾರೆ ಎಂದು ತುಮಕೂರು ಜಿಲ್ಲೆಯ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ನೇರ ವಾಗ್ದಾಳಿ ನಡೆಸಿದರು.
ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿರುವ ತುರುವೇಕೆರೆ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
“ಕೊಬ್ಬರಿ ಬೆಲೆ ವಿಚಾರವನ್ನು ಸದನದಲ್ಲಿ ಬಹು ಸಮಯ ಚರ್ಚೆ ಮಾಡಿದ್ದೇನೆ. ಉತ್ಪಾದನಾ ವೆಚ್ಚ ಅನುಗುಣವಾಗಿ ಬೆಲೆ ನಿಗದಿ ಮಾಡಲು ಒತ್ತಡ ತಂದರೂ ಕೇವಲ ₹250 ನೀಡಿ ಜಿಪುಣತನ ಮೆರೆದಿದ್ದಾರೆ. ಈ ಬಗ್ಗೆ ಮುಂದಿನ ವಾರದಲ್ಲಿ 13 ಜಿಲ್ಲೆಯ ರೈತರ ಸಭೆ ನಡೆಸಿ ತೀವ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
“ಸರ್ಕಾರ ನಡೆಸಲು ಹಣವಿಲ್ಲದೆ ಸರ್ಕಾರಿ ನೌಕರರಿಗೆ ವೇತನ ನೀಡಲು ಆಗುತ್ತಿಲ್ಲ. ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ನಾಲ್ಕೈದು ತಿಂಗಳ ಸಂಬಳ ನೀಡಬೇಕಿದೆ. ಗ್ಯಾರಂಟಿ ಹೆಸರಿನಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಒಪ್ಪಿಕೊಳ್ಳಬೇಕಿದೆ” ಎಂದು ಕಿಡಿಕಾರಿದರು.
“ಈ ಹಿಂದೆ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಅಂತಿದ್ದರು. ಈಗ ಕಾಂಗ್ರೆಸ್ 60 ಪರ್ಸೆಂಟ್ ಸರ್ಕಾರ ಎನಿಸಿದೆ” ಎಂದು ವ್ಯಂಗ್ಯವಾಡಿದರು.
“ಜಾತಿ ಗಣತಿ ಕಾರ್ಯ ಸರಿಯಾಗಿ ಮಾಡಿಲ್ಲ ಎಂಬ ಮಾತು ಇರುವಾಗ ಗಣತಿ ವಿಚಾರ ಕೈ ಬಿಡದೆ ಕೆಲ ಜಾತಿಗಳಿಗೆ ಅನ್ಯಾಯ ಮಾಡಲು ಕಾಂಗ್ರೆಸ್ ಹೊರಟಿದೆ. ನಾಲ್ಕು ಜನಾಂಗ ಸೇರಿಸಿ ಎಸ್ ಎನ್ನುವುದು ಮತ್ತೊಂದು ಕಡೆ ಒಳಜಾತಿ ಹೆಸರಿನಲ್ಲಿ ಮತ್ತೊಂದು ಜಾತಿ ಸೃಷ್ಟಿ ಮಾಡುವುದು. ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ದೇವೇಗೌಡರು ಹೋರಾಟ ಮಾಡಿದರೆ, ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡುತ್ತಿಲ್ಲ. ಒಕ್ಕಲಿಗ, ಲಿಂಗಾಯತ ಒಡೆಯುವ ಸರ್ಕಾರದ ಗಣತಿ ಬೇಕಿಲ್ಲ. ಈ ಬದಲು ಆಯಾ ಜನಾಂಗಕ್ಕೆ ವಹಿಸಿದಲ್ಲಿ ಅವರಿಂದಲೇ ಸೂಕ್ತ ಗಣತಿ ಅಂಕಿ ಅಂಶ ಸಿಗಲಿದೆ ಎಂದು ಸಲಹೆ ನೀಡಿದ ಅವರು ಲೋಕಾಸಭಾ ಚುನಾವಣೆ ಅಭ್ಯರ್ಥಿ ವಿಚಾರದಲ್ಲಿ ನಮ್ಮ ವರಿಷ್ಠರ ನಿರ್ಧಾರದಂತೆ ನಡೆಯುತ್ತೇವೆ. ನಾನು ಅಭ್ಯರ್ಥಿ ಆಕಾಂಕ್ಷಿಯಲ್ಲ” ಎಂದು ಸ್ಪಷ್ಟ ಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೊಬ್ಬರಿಗೆ ಬೆಂಬಲ ಬೆಲೆ, ನಾಫೆಡ್ ಖರೀದಿ ಕೇಂದ್ರ ತೆರೆಯಲು ಆಗ್ರಹ
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಬಿ ಆರತಿ ಅವರಿಗೆ ಸೂಚಿಸಿ ತುರುವೇಕೆರೆ ಕ್ಷೇತ್ರದ ಏಳು ಗ್ರಾಮ ಪಂಚಾಯಿತಿ ಜನರ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ತಿಳಿಸಿದರು.
ಜೆಡಿಎಸ್ ಹೋಬಳಿ ಅಧ್ಯಕ್ಷ ಜಗದೀಶ್, ಜಿಲ್ಲಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಮುಖಂಡರುಗಳಾದ ವೀರಣ್ಣಗುಡಿ ರಾಮಣ್ಣ, ಚೆಂಗಾವಿ ಕುಮಾರ್, ರಾಘವೇಂದ್ರ, ಜಾಲಿಪಾಳ್ಯ ಸಂತೋಷ್, ಗದ್ದೇಹಳ್ಳಿ ನರಸೇಗೌಡ ಸೇರಿದಂತೆ ಇತರರು ಇದ್ದರು.