ಸೂತಕ-ಸಂಪ್ರದಾಯದ ಹೆಸರಿನಲ್ಲಿ ಹೆರಿಗೆ ನಂತರ ಬಾಣಂತಿ ಮತ್ತು ನವಜಾತ ಶಿಶುವನ್ನು ಊರಾಚೆಯ ಗುಡಿಸಲಲ್ಲಿ ಇಟ್ಟು ಮೌಢ್ಯ ಆಚರಣೆ ಮಾಡಿದ್ದ ಆರೋಪದ ಮೇಲೆ ಬಾಣಂತಿಯ ತಂದೆ, ತಾಯಿ ಮತ್ತು ಗಂಡನ ವಿರುದ್ಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹೈಕೋರ್ಟ್ ನಿರ್ದೇಶನದ ಮೇರೆಗೆ ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ನೂರುನ್ನಿಸಾ ಅವರು ಅಧಿಕಾರಿಗಳ ತಂಡದೊಂದಿಗೆ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗುಡಿಸಲಿಗೆ ಗುರುವಾರ ಭೇಟಿ ನೀಡಿದ್ದರು.
ಕೋಳಿಗೂಡಿನಂತಹ ಪುಟ್ಟ ಗುಡಿಸಲಲ್ಲಿ ಇರಿಸಲಾಗಿದ್ದ ಬಾಣಂತಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕಂಡು ಕಿಡಿಕಾರಿದ ಅವರು ನವಜಾತ ಶಿಶುವಿನ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಸಮ್ಮುಖದಲ್ಲಿಯೇ ಗುಡಿಸಲು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗುಡಿಸಲು ತೆರವುಗೊಳಿಸಿದ ಬಳಿಕ ಬಾಣಂತಿಯನ್ನು ಗೊಲ್ಲರಹಟ್ಟಿಯ ಆಕೆಯ ಮನೆಗೆ ಕರೆದೊಯ್ಯುವ ಶಾಸ್ತ್ರ ಮುಗಿಸಲಾಯಿತು.
ಅಧಿಕಾರಿಗಳ ತಂಡದೊಂದಿಗೆ ಗೊಲ್ಲರಹಟ್ಟಿಗೆ ತೆರಳಿದ ನ್ಯಾಯಾಧೀಶೆ, ಆಂಬುಲೆನ್ಸ್ ತರಿಸಿ ಬಾಣಂತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟಿದ್ದು, ಆಕೆ ಗುಣಮುಖವಾಗುವವರಗೂ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಗು ಸತ್ತರೂ ಊರಾಚೆಯೇ ಉಳಿದಿದ್ದ ತಾಯಿ; ಮನೆಗೆ ಸೇರಿಸಿದ ನ್ಯಾಯಾಧೀಶೆ
ಗೊಲ್ಲರಹಟ್ಟಿಯ ಶಾಲೆಯ ಆವರಣದಲ್ಲಿ ಅಧಿಕಾರಿಗಳು, ಗೊಲ್ಲ ಸಮುದಾಯದ ಜನರು ಮತ್ತು ಮುಖಂಡರ ಸಭೆ ನಡೆಸಿದರು. ಸಂಪ್ರದಾಯದ ಹೆಸರಲ್ಲಿ ಮೌಢ್ಯಚಾರಣೆ ನಿಲ್ಲಿಸುವಂತೆ ತಿಳಿ ಹೇಳಿದರು.
“ಸಂಪ್ರದಾಯದ ಹೆಸರಲ್ಲಿ ಪಾಲಿಸುತ್ತಿರುವ ಮೌಢ್ಯ ತೊರೆಯುವಂತೆ ಸಮುದಾಯದವರಿಗೆ ಹೇಳಿದರೆ ನಮಗೇ ಬೆದರಿಕೆ ಹಾಕುತ್ತಾರೆ” ಎಂದು ಅಧಿಕಾರಿಗಳು ಅವಲತ್ತುಕೊಂಡರು.
ಸುಮಾರು ಎರಡು ವಾರಗಳಿಂದ ಈ ಪ್ರಕರಣ ಮೀಡಿಯಾದಲ್ಲಿ ಹರಿದಾಡುತ್ತಿದೆ. ಗೌರವಾನ್ವಿತ ನ್ಯಾಯಾಧೀಶೆಯರು ಮಧ್ಯಸ್ತಿಕೆ ವಹಿಸಿ ಕ್ರಮ ಕೈಗೊಂಡಿರುವದು ಅತ್ಯಂತ ಸ್ತುತ್ಯಾರ್ಹ ಕ್ರಮ. ಆದರೆ ಪೊಲೀಸ್ ಇಲಾಖೆಗೆ ಈ ಸುದ್ದಿ ಮುಟ್ಟಲೇ ಇಲ್ಲವೇ? ಅವರೇಕೆ ಸೂಮೋಟು ಪ್ರಕರಣ ದಾಖಲಿಸಿ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಲಿಲ್ಲ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನು ಮಾಡುತ್ತಿದೆ?