ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಂದಾಯ ಶಾಖೆಗೆ ಇಂದು (ಫೆ.26) ಭೇಟಿ ನೀಡಿ ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸೇವೆ ನೀಡಬೇಕೆಂದು ವಿಷಯ ನಿರ್ವಾಹಕ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಕಸಬಾ ಪಶ್ಚಿಮ ಹೋಬಳಿ ಹೆಗ್ಗೆರೆ ಕಂದಾಯ ವೃತ್ತ ವ್ಯಾಪ್ತಿಯ ನಿವಾಸಿ ಇರ್ಫಾನ್ ಎಂಬುವವರು ತಮ್ಮ ಕುಟುಂಬ ಸದಸ್ಯರೊಬ್ಬರ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಇದುವರೆಗೂ ಪ್ರಮಾಣ ಪತ್ರ ನನ್ನ ಕೈಗೆ ಸಿಕ್ಕಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಖುದ್ದು ದೂರು ನೀಡಿದ ಮೇರೆಗೆ ಜಿಲ್ಲಾಧಿಕಾರಿಗಳು ಕಂದಾಯ ಶಾಖೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಈ ದಿನವೇ ಅರ್ಜಿಯನ್ನು ವಿಲೇವಾರಿ ಮಾಡಿ ಅರ್ಜಿದಾರರಿಗೆ ಮರಣ ಪ್ರಮಾಣ ಪತ್ರ ನೀಡಬೇಕೆಂದು ತಾಕೀತು ಮಾಡಿದರು.
ಇದೇ ರೀತಿ ಸಾರ್ವಜನಿಕರಿಗೆ ನಿಗಧಿತ ಅವಧಿಯೊಳಗೆ ಸೇವೆ ನೀಡದೆ ಸತಾಯಿಸುವ ಅಧಿಕಾರಿ, ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಂದಾಯ ಸೇವೆ, ಆದಾಯ ಪ್ರಮಾಣಪತ್ರ, ಪಿಂಚಣಿ, ಜನನ ಮತ್ತು ಮರಣ ಪ್ರಮಾಣ ಪತ್ರ, ವಿಧವಾ ವೇತನ, ಮತ್ತಿತರ ಸೇವೆಗಳನ್ನು ವಿಳಂಬ ಮಾಡದೆ ಸಾರ್ವಜನಿಕರಿಗೆ ಒದಗಿಸಬೇಕೆಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ವಿಷಯ ನಿರ್ವಾಹಕ ರಾಕೇಶ್, ಹೆಗ್ಗೆರೆ ಗ್ರಾಮಾಡಳಿತ ಅಧಿಕಾರಿ ಮಂಜುನಾಥ, ಕಂದಾಯ ನಿರೀಕ್ಷಕರುಗಳಾದ ರಾಘವೇಂದ್ರ ಹಾಗೂ ಅಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.