ಒಳಮೀಸಲಾತಿ ಜಾರಿಗೊಳಸಿದರೆ ನನಗೆ ಯಾವ ವಿಧಾನಪರಿಷತ್ ಹಾಗೂ ಸಚಿವ ಸ್ಥಾನವೂ ಬೇಡ, ಒಳ ಮೀಸಲಾತಿ ಜಾರಿಮಾಡಿದರೆ ನನಗೇ ಅದೇ ದೊಡ್ಡ ಸ್ಥಾನ ಮಾನ ನೀಡಿದಂತೆ ಎನ್ನುವ ಮೂಲಕ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಅವರು ಸಮುದಾಯ ಕಾಳಜಿ ಮೆರೆದಿರುವುದು ಸ್ವಾಗತಾರ್ಹ ಎಂದು ಮಂಜುನಾಥ್ ಹೆತ್ತೇನಹಳ್ಳಿ ಪ್ರತಿಕ್ರಿಯಿಸಿದರು.
ತುಮಕೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾತನಾಡಿದ ಮಂಜುನಾಥ್, ಸ್ಥಾನ ಮಾನಗಳು ಅಥವ ಅವಕಾಶಗಳನ್ನು ಪಡೆಯುವ ಸಂದರ್ಭ ಬಂದಾಗ ಸ್ವಜಾತಿಗಳಲ್ಲೇ ಭಿನ್ನಾಭಿಪ್ರಾಯ, ಅವಕಾಶವಾದಿತನ ಮುನ್ನೆಲೆಗೆ ಬರುತ್ತವೆ. ಆದರೆ ಆಂಜನೇಯ ಅವರು ಈ ಆರೋಪಕ್ಕೆ ಅಪವಾದವಾಗಿ ನಿಲ್ಲುತ್ತಾರೆ ಹಾಗೂ ತಮ್ಮ ನಿಸ್ವಾರ್ಥ ನಿಲುವಿನ ಮೂಲಕ ಸಮುದಾಯ ಕಾಳಜಿ ವಹಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತಾರೆ. ಅದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎರಡನೇ ಅಂಬೇಡ್ಕರ್ ಎಂದು ಹೇಳಿರುವುದು ಉತ್ಪ್ರೇಕ್ಷೆಯಲ್ಲದೆ ಬೇರೇನೂ ಅಲ್ಲ. ಸಿದ್ದರಾಮಯ್ಯನವರು ಅಂಬೇಡ್ಕರ್ ಅನುಯಾಯಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅವರನ್ನೇ ಬಾಬಾ ಸಾಹೇಬರಿಗೆ ಹೋಲಿಸುವುದು ತರ್ಕಕ್ಕೆ ನಿಲುಕದ್ದು, ಸ್ವೀಕರಿಸಲು ಅನರ್ಹವಾದದ್ದು ಎಂಬ ಸೂಕ್ಷ್ಮ ವಿಷಯ ಮಾಜಿ ಸಚಿವರಿಗೆ ಇರಬೇಕು ಎಂದು ಹೇಳಿದರು.
ವರದಿ – ಹರೀಶ್ ಕಮ್ಮನಕೋಟೆ