ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದಂತಹ ಮಹಿಳೆಯರಿಗೆ ನಮ್ಮ ಸಂವಿಧಾನ ಸಮಾನ ಅವಕಾಶವನ್ನು ಕಲ್ಪಿಸಿಕೊಡುವುದರ ಮೂಲಕ ಸಮಾನತೆಯನ್ನೂ ದೊರಕಿಸಿ ಕೊಟ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಮುಕ್ತವಾದ ಅವಕಾಶಗಳಿದ್ದು, ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದು ಹೇಳಿದರು.
“ಪ್ರಯತ್ನ ಪಟ್ಟರೆ ಮಾತ್ರ ಸಾಧನೆ ಸಾಧ್ಯ. ಸಾಧನೆಗೆ ಅಡ್ಡಿ ಬರುವ ಕಾರಣಗಳನ್ನು ಹೇಳದೆ ಅವುಗಳನ್ನು ಮೀರಿ ಸಾಧಿಸಬೇಕು. ಶಿಕ್ಷಣದ ಕಡೆ ಹೆಚ್ಚು ಗಮನ ವಹಿಸಬೇಕು, ಮಹಿಳೆಯರು ಉನ್ನತ ಶಿಕ್ಷಣವನ್ನು ಪಡೆದರೆ ತಮ್ಮ ಮಕ್ಕಳನ್ನೂ ಕೂಡ ಸಾಕ್ಷರರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹೆಣ್ಣು-ಗಂಡು ಎಂದು ಭೇದ ಭಾವ ಮಾಡದೆ, ಇಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಬೇಕು” ಎಂದು ತಿಳಿಸಿದರು.
ಮಹಿಳಾ ಅಭಿವೃದ್ಧಿ ಅಧಿಕಾರಿ ಪವಿತ್ರ ಮಾತನಾಡಿ, “ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಮಹಿಳೆಯರು ಮನೆಯನ್ನು ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಈ ದಿನ ನಮ್ಮನ್ನು ನಾವು ಸಂಭ್ರಮಿಸಿಕೊಳ್ಳುವ ದಿನ, ಮಹಿಳೆಯರು ತಮ್ಮ ಮಕ್ಕಳನ್ನು ಕಟ್ಟು ಪಾಡುಗಳಲ್ಲಿ ಬೆಳೆಸದೆ ಒಳ್ಳೆಯ ಸಂಸ್ಕೃತಿ ಕಲಿಸಬೇಕು. ಹೆಣ್ಣಾಗಿ ಹುಟ್ಟಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡೋಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮಾ.8ರಂದು ಎಸ್ಡಿಪಿಐನಿಂದ ʼಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶʼ
ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಶಿಶು ಅಭಿವದ್ಧಿ ಯೋಜನಾಧಿಕಾರಿಗಳಾದ ಶಶಿಧರ್, ನಾಗರಾಜು, ಕ್ರೀಡಾ ತರಬೇತುದಾರ ಮುನಿರಾಜು ಸೇರಿದಂತೆ ಹಲವು ಮಹಿಳೆಯರು ಇದ್ದರು.
