ಸಾಲಬಾಧೆ ಮತ್ತು ಕಿರುಕುಳದಿಂದಾಗಿ ದಂಪತಿಗಳು ತಮ್ಮ ಮೂವರು ಮಕ್ಕಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಸದಾಶಿವನಗರ ನಿವಾಸಿ ಗರೀಬ್ ಸಾಬ್, ಆತನ ಪತ್ನಿ ಸುಮಯ್ಯ, ಮಗಳು ಹಜೀನಾ ಹಾಗೂ ಗಂಡು ಮಕ್ಕಳು ಮೊಹ್ಮದ್ ಶಬೀರ್ ಮತ್ತು ಮೊಹಮದ್ ಮುನೀರ್ ಮೃತ ದುರ್ದೈವಿಗಳು. ಗರೀಬ್ ಸಾಬ್ ಮತ್ತು ಸುಮಯ್ಯ ಅವರು ತಮ್ಮ ಮೂವರು ಮಕ್ಕಳನ್ನು ಕತ್ತುಹಿಸಿಕಿ ಹೊಂದಿದ್ದಾರೆ. ಬಳಿಕ, ಇಬ್ಬರೂ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆತ್ಮಹತ್ಯೆಗೂ ಮುನ್ನ ತಮ್ಮ ಸಂಬಂಧಿಕರಿಗೆ ವಿಡಿಯೋ ಮಾಡಿ ಕಳುಹಿಸಿದ್ದಾರೆ. ವಿಡಿಯೋದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ತಮಗೆ ಐವರು ಸಾಲ ತಮಗೆ ಕಿರುಕುಳ ನೀಡಿದ್ದಾಗಿ ಉಲ್ಲೇಖಿಸಿದ್ದು, ಆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಡಿಯೋದಲ್ಲಿ, “ನಮ್ಮ ಜಿಲ್ಲೆಯ ಗೃಹ ಮಂತ್ರಿ ಸಾರ್ ಅವರಿಗೆ ನಮಸ್ತೆ. ನಾವು ಲಕ್ಕನಹಳ್ಳಿಯವರು. ಬಡವರು. ಮಕ್ಕಳನ್ನ ಓದಿಸಬೇಕೆಂದು ತುಮಕೂರಿಗೆ ಬಂದೆವು. ತುಮಕೂರಿನ ಸದಾಶಿವ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದೇವೆ. ನಮ್ಮ ಮನೆಯ ಕೆಳಗೆ ಖಲಂದರ್ ಅಂತಾ ಇದ್ದಾನೆ. ಅವನು ದೊಡ್ಡ ರಾಕ್ಷಸ. ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ತುಂಬಾ ಹಿಂಸೆ ಕೊಟ್ಟಿದ್ದಾನೆ. ನಾನು ಯಾರ ಬಳಿ ವ್ಯವಹಾರ ಮಾಡಿದರೂ, ಅವರಿಗೆ ಇಲ್ಲಸಲ್ಲದನ್ನು ಹೇಳಿ, ಕಿರುಕುಳ ನೀಡಿದ್ದಾನೆ. ನಮ್ಮ ಮಕ್ಕಳಿಗೆ ಎಲ್ಲರ ಎದುರು ಹೊಡೆದಿದ್ದಾನೆ” ಎಂದು ಆರೋಪಿಸಿದ್ದಾರೆ.
“ಮಕ್ಕಳಿಗೆ ಹೊಡೆದಿದ್ದರ ಬಗ್ಗೆ ಪ್ರಶ್ನಿಸದರೆ, ಎಲ್ಲರೂ ಆತನಿಗೆ ಸಪೋರ್ಟ್ ಮಾಡಿದ್ರು. ಆತ ದುಡ್ಡಿರುವವನು. ನಾವು ಬಾಡಿಗೆಯಲ್ಲಿರುವವರು. ನಾವು ಸಂಘದಲ್ಲಿ ಸಾಲ ತೆಗೆದುಕೊಂಡಿದ್ದೆವು. ಖಲಂದರ್ ತಾನು ಹೇಳಿದ ಹಾಗೆ ಕೇಳಬೇಕು. ಇಲ್ಲದಿದ್ದರೆ, ಪೂರ್ತಿ ಸಾಲ ಕಟ್ಟಬೇಕು ಅಂತ ಹಿಂಸೆ ಕೊಡ್ತಿದ್ದ. ಸಾಲ ಕೊಟ್ಟವರಿಗೆ ಇಲ್ಲಸಲ್ಲದನ್ನ ಹೇಳಿ, ಅವರೆಲ್ಲರೂ ಮನೆ ಬಳಿ ಬಂದು ಗಲಾಟೆ ಮಾಡುವಂತೆ ಮಾಡಿದ್ದಾನೆ. ಹತ್ತು ಸಾವಿರಕ್ಕೆ ಸಾವಿರ ರೂಪಾಯಿ ಬಡ್ಡಿ ತಗೋತಿದ್ದರು” ಎಂದು ದೂರಿದ್ದಾರೆ.
“ಖಲಂದರ್ ಜೊತೆಗೆ, ಆತನ ದೊಡ್ಡ ಮಗ, ಮಗಳು, ಮಹಡಿ ಮನೆಯ ಶಬಾನಾ, ಆಕೆಯ ಮಗಳು ಕೂಡ ತೆಂದರೆ ಕೊಟ್ಟಿದ್ದಾರೆ. ನಾವು ಸಾಯೋಕೆ ಈ ಐದು ಜನರೇ ಕಾರಣ. ಎಲ್ಲ ಪೊಲೀಸರಿಗೂ ಕೈ ಮುಗಿದು ಕೇಳ್ಕೊತಿನಿ. ಖಲಂದರ್‍ಗೆ ಸ್ವಲ್ಪ ಕೊಬ್ಬು ಕರಗಿಸಬೇಕು. ಅವನಿಗೆ ಸರಿಯಾದ ಶಿಕ್ಷೆ ಕೊಡಿ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.