ಕಳೆದ ಹತ್ತು ವರ್ಷಗಳ ಮೋದಿ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ನಡೆಸುತ್ತಿದೆ. ಹೀಗಾಗಿ ಈ ಬಾರಿಯ ಲೋಕಸಭೆಯಲ್ಲಿ ಇಂತಹ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಇದ್ದಕ್ಕಾಗಿ ʼಬಿಜೆಪಿ ಹಠಾವೋ, ದೇಶ್ ಬಚಾವೋʼ ಎಂಬ ಘೋಷವಾಕ್ಯದೊಡನೆ ಭಾರತ ಕಮ್ಯೂನಿಸ್ಟ್ ಪಕ್ಷ ತುಮಕೂರು ಮಂಡಳಿಯಿಂದ ರಾಜಕೀಯ ಸಮಾವೇಶ ನಡೆಸಲಾಗುತ್ತಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ ಅಜ್ಮದ್ ತಿಳಿಸಿದರು.
ತುಮಕೂರು ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಹತ್ತು ವರ್ಷಗಳ ಮೋದಿ ಆಡಳಿತ ಯುವಜನರಿಗೆ ಉದ್ಯೋಗ ಒದಗಿಸಲಿಲ್ಲ. ಮಹಿಳೆಯರು ಕೇಂದ್ರ ಸರ್ಕಾರದ ಮೇಲೆ ಇಟ್ಟಿದ್ದ ಸುಧಾರಣೆಗಳು ಈಡೇರಲಿಲ್ಲ. ಕೊಟ್ಟ ಭರವಸೆಗಳೆಲ್ಲವೂ ಸುಳ್ಳಾಗಿದೆ. ಕೋಟಿ ಉದ್ಯೋಗದ ಭರವಸೆ ನಿರಾಶಾದಾಯಕವಾಗಿದೆ. ಬೆಲೆ ಏರಿಕೆ ಗಗನಕ್ಕೆ ಮುಟ್ಟಿದೆ. ದುಡಿದು ತಿನ್ನುವ ಬಡವರಿಗೆ ಇಲ್ಲದ ಸಂಕಷ್ಟವಾಗಿದ್ದು, ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ” ಎಂದರು.
“ದೇಶದ ಭ್ರಷ್ಟ ರಾಜಕೀಯ ಮಾಡುತ್ತಿರುವ ಬಿಜೆಪಿ ಎಲೆಕ್ಟೋರಲ್ ಬಾಂಡ್ ವಿಚಾರದಲ್ಲಿ ಭ್ರಷ್ಟಾಚಾರಿ ಪಕ್ಷವಾಗಿ ಪರಿಣಮಿಸಿದ್ದು, ಇದು ಸಂವಿಧಾನ ವಿರೋಧಿಯಾಗಿದೆ. ಮೋದಿ ಬಡವರ ಪರ ಇರಲಿಲ್ಲ. ಕಾರ್ಪೊರೇಟ್ ಉದ್ಯಮಿಗಳ ಪರವಾಗಿದ್ದು, ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡಿದ್ದಾರೆ” ಎಂದು ದೂರಿದರು.
“ನ್ಯಾಯ ಕೇಳಲು ಬಂದ ರೈತರಿಗೆ ಲಾಠಿ ಜಾರ್ಜ್ ಮಾಡಿ ರೈತರ ಸಾಲ ಮನ್ನಾ ಮಾಡುವುದಾಗಿ ಸುಳ್ಳು ಹೇಳಿ ದೇಶದ ಸಂಪನ್ಮೂಲವನ್ನು ಬೇರೆಯದಕ್ಕೆ ಬಳಸಲಾಗುತ್ತಿದೆ 11.5 ಸಾವಿರ ಕೋಟಿ ರೂ. ವಿವಿಧ ರಾಜಕೀಯ ಪಕ್ಷಗಳಿಗೆ ಕೊಡಲಾಗಿದ್ದು, ಇದರಲ್ಲಿ ಶೇ.60 ಬಿಜೆಪಿ ಪಡೆದಿದೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಬೇರೆ ಯಾವುದೂ ಇಲ್ಲ ಎಂಬುದು ಸಾಬೀತಾಗಿದೆ. ದೇಶದಲ್ಲಿ ಚರ್ಚೆಗೆ ಗ್ರಾಸವಾದ ಎಲೆಕ್ಟ್ರಾರಲ್ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ಸಮಗ್ರ ತನಿಖೆಗೆ ಮಾಡಲು ಒತ್ತಾಯ ಮಾಡಿದೆ” ಎಂದರು.
“ದೇಶದಲ್ಲಿ ಜನರಿಗೆ ಸಾಸಿವೆಯಷ್ಟು ಮೋದಿ ಬಗ್ಗೆ ನಂಬಿಕೆ ಇಲ್ಲ. ಮೋದಿ ಸರ್ಕಾರವು ನಮಗೆ ವಿರೋಧ ಪಕ್ಷವೇ ಇಲ್ಲ ಎಂದುಕೊಂಡಿದೆ. ಸರ್ಕಾರದ ವೈಫಲ್ಯ ಸಾಂವಿಧಾನಿಕ ಹೊಣೆಯಾಗಿದ್ದು, ವಿರೋಧ ಪಕ್ಷದಲ್ಲಿ ಇರುವ ಅಂತಹವರನ್ನ ಪಾರ್ಲಿಮೆಂಟ್‌ನಿಂದ ಹೊರಗಿಟ್ಟು ತಮಗೆ ಬೇಕಾದ ಬಿಲ್‌ಪಾಸ್ ಮಾಡಿಕೊಂಡು ಗಣತಂತ್ರ ವ್ಯವಸ್ಥೆಯ ವಿರುದ್ಧವಾಗಿ ನಡೆದುಕೊಂಡು ಇದೀಗ ವಿಕಸಿತ ಭಾರತ ಹೆಸರಿನಡಿ ಹಣವಿರುವವರನ್ನು ಪಕ್ಷಕ್ಕೆ ಕರೆದುಕೊಳ್ಳುತ್ತಿರುವುದು ಸೋಲಿನ ಭೀತಿ ಕಾಡುತ್ತಿದೆ ಎಂದು ತಿಳಿಯಬಹುದು. ತಂತ್ರಗಳ ಮೂಲಕ ವಿರೋಧ ಪಕ್ಷಗಳ ದಮನ ಮಾಡುವ ಹುನ್ನಾರ ಬಿಜೆಪಿ ಸರ್ಕಾರ ಹೊಂದಿದೆ” ಎಂದರು.
ಭಾರತೀಯ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, “ಪ್ರಧಾನಿ ಮೋದಿ ಮತ್ತು ಬಿಜೆಪಿ ದೇಶದ ಮಾಧ್ಯಮವನ್ನು ಖರೀದಿ ಮಾಡಿ 400 ಸ್ಥಾನ ಗೆಲ್ಲುವ ಭ್ರಮೆಯಲ್ಲಿದೆ. ದೇಶ ಆಂತಕದಲ್ಲಿದ್ದು, ದೇಶದ ಜನರನ್ನು ಎಚ್ಚರಿಸುವುದಕ್ಕಾಗಿ ನಮ್ಮ ಪಕ್ಷದಿಂದ ತುಮಕೂರು ಜಿಲ್ಲೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದಿಂದ ರಾಜಕೀಯ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ” ಎಂದರು.
“ತುಮಕೂರಿಗೆ ಮೋದಿ ಹಲವು ಬಾರಿ ಭೇಟಿ ಕೊಟ್ಟಿದ್ದಾರೆ. ಹತ್ತು ಸಾವಿರ ಊದ್ಯೋಗ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರಕ್ಷಣೆ ಸೇರಿದಂತೆ ತುಮಕೂರಿನ ಎಚ್‌ಎಎಲ್ ಘಟಕ ಉದ್ಘಾಟನೆ ವೇಳೆ ಉದ್ಯೋಗ ಸೃಷ್ಠಿಗೆ ಸೂಕ್ತ ಕ್ರಮ ವಹಿಸುವುದಾಗಿ ಹೇಳಿದ ಮೋದಿ ಮಾತು ಅಲ್ಲಿ ಹೆಲಿಕಾಪ್ಟರ್ ಹಾರಲಿಲ್ಲ ಉದ್ಯೋಗ ಸಿಗಲಿಲ್ಲ ಸ್ಥಳೀಯವಾಗಿ ಉದ್ಯೋಗಕ್ಕಾಗಿ ಅನೇಕರು ಪರದಾಡುವಂತಾಗಿದ್ದು, ಈ ವಿಚಾರವಾಗಿ ಸಿಪಿಐ ಅನೇಕ ಹೋರಾಟಗಳನ್ನು ನಡೆಸಿದೆ” ಎಂದರು.
“ಕಿಸಾನ್ ಸಮ್ಮಾನ್ ಹೆಸರಿನಲ್ಲಿ ಹಣ ಹಾಕಿದ್ದೇವೆ ಎನ್ನುವ ಮೋದಿ ಭಾವನಾತ್ಮಕವಾಗಿ ಮಾತುಗಳನ್ನು ಮನ್ ಕಿ ಬಾತ್‌ನಲ್ಲಿ ಹೇಳಿಕೊಳ್ಳುತ್ತಾರೆ. ದೇಶಗಳಲ್ಲಿ ದ್ವೇಷದ, ಜನಾಂಗೀಯ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದು ಇದರ ಸಲುವಾಗಿ ಜಿಲ್ಲೆಯಲ್ಲಿ ಸಮಾವೇಶ ಮಾಡಿ ಬಿಜೆಪಿಯ ಸೋಲಿಸಲು ಪಣ ತೊಡಲಾಗಿದೆ. ಏಪ್ರಿಲ್ 3ರಂದು ಕನ್ನಡ ಭವನದಲ್ಲಿ ನಡೆಯುವ ಈ ಸಮಾವೇಶಕ್ಕೆ ನಮ್ಮ ಮೈತ್ರಿ ಪಕ್ಷಗಳ ಕಾಂಗ್ರೆಸ್‌ನ ಚಂದ್ರಶೇಖರ್ ಗೌಡ, ಕಾರ್ಮಿಕ ಸಂಘಟನೆಯ ಸುಬ್ರಹ್ಮಣ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ಆರ್‌ಎಸ್‌ಎಸ್ ವಿಚಾರಧಾರೆಯನ್ನು ಅನುಸರಿಸುತ್ತಿರುವ ಬಿಜಿಪಿ ಡಾ. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಗೊಂಡ ಭಾರತದ ಸಂವಿಧಾನವನ್ನು ಎಂದೂ ಒಪ್ಪಿಲ್ಲ. ಬದಲಾಗಿ ದಲಿತರ, ಹಿಂದುಳಿದ ಜಾತಿಗಳ, ಮಹಿಳೆಯರ ವಿರುದ್ಧವಾಗಿರುವ ಮನುಸ್ಮೃತಿಯನ್ನು ಭಾರತದ ಸಂವಿಧಾನವನ್ನಾಗಿಸಲು ಅದು ಸಂಚು ರೂಪಿಸುತ್ತಿದೆ. ಅಲ್ಲದೆ ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಗಿರುವ ಬಿಜೆಪಿ, ಮನುಸ್ಮೃತಿಯ ಮೌಲ್ಯಗಳನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ದೇಶದ ಮೇಲೆ ಹೇರುವ ಪ್ರಕ್ರಿಯೆಯಲ್ಲಿ ಸದಾ ನಿರತವಾಗಿದೆ. ಮನುಸ್ಮೃತಿಯನ್ನು ಆಧರಿಸಿ ಶ್ರೇಣೀಕೃತ ಸಮಾಜವನ್ನು ಗಟ್ಟಿಗೊಳಿಸಲು ಆರ್‌ಎಸ್‌ಎಸ್-ಬಿಜೆಪಿ ಪರಿವಾರ ಈಗಾಗಲೇ ಕೆಲಸ ಆರಂಭಿಸಿದೆ. ಅದಕ್ಕಾಗಿ ಬಹುಸಂಖ್ಯೆಯ ರೈತ, ಕಾರ್ಮಿಕರನ್ನು (ಶೂದ್ರ ವರ್ಣ) ಕಾರ್ಪೊರೇಟ್ ವ್ಯಾಪಾರಿಗಳ (ವೈಶ್ಯ ವರ್ಣ) ಗುಲಾಮಗಿರಿಗೆ ತಳ್ಳುವ ಸಲುವಾಗಿ ರೈತ-ಕಾರ್ಮಿಕರ ಸ್ವಾವಲಂಬಿ ಬದುಕನ್ನು ನಾಶಮಾಡಲು ರೈತ-ಕಾರ್ಮಿಕ ವಿರೋಧಿ ಮಾರಕ ಕಾನೂನುಗಳನ್ನು ಅನುಷ್ಠಾನ ಮಾಡುತ್ತಿದೆ” ಎಂದರು.
“ಕೇಂದ್ರದ ಮೋದಿ ಸರ್ಕಾರವು, ‘ಒಂದು ದೇಶ, ಒಂದು ಆಡಳಿತ’ ಎಂಬ ನೀತಿಯನ್ನು ಜಾರಿ ಮಾಡುತ್ತ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳನ್ನು ದಮನ ಮಾಡುತ್ತಾ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುತ್ತಿದೆ. ಹೀಗೆ ಬಿಜೆಪಿ ಮತ್ತು ಅದರ ಪರಿವಾರ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮನುಸ್ಮೃತಿಯ ಆಧಾರದಂತೆ ದೇಶವನ್ನು ಆಳುವ ಅಧಿಕಾರವನ್ನು ಕ್ಷತ್ರಿಯ ವರ್ಣದಂತೆ ನಡೆಸುತ್ತಿದೆ. ಈ ಮನುಸ್ಮೃತಿ ಆಧಾರಿತ ಸಮಾಜದಲ್ಲಿ ಬೌದ್ಧಿಕವಾಗಿ ಅರ್‌ಎಸ್‌ಎಸ್ ಬ್ರಾಹ್ಮಣ ವರ್ಣದ ಕೆಲಸ ಮಾಡತೊಡಗಿದೆ. ಹೀಗೆ ನಮ್ಮ ಮತನಿರಪೇಕ್ಷ ಸಮಾಜವಾದಿ ಸಂವಿಧಾನ ಅಪಾಯದಲ್ಲಿದೆ” ಎಂದು ಹೇಳಿದರು.
“ಸಾಮಾಜಿಕವಾಗಿ ಮತಾಧಾರಿತ ರಾಜಕಾರಣ ಮಾಡುತ್ತ ದೇಶದ ಜನರ ನಡುವೆ ದ್ವೇಷ ಬಿತ್ತಿ, ಭಯ ನಿರ್ಮಾಣ ಮಾಡಿ ದೇಶದ ಜನರನ್ನು ಮತೀಯ ಅಲ್ಪಸಂಖ್ಯಾತರ ವಿರುದ್ಧ ಎತಿ ಕಟ್ಟಿ, ಜನಾಂಗೀಯ ಶ್ರೇಷ್ಠತೆಯನ್ನು ಹುಟ್ಟು ಹಾಕಿ, ಫ್ಯಾಸಿಸ್ಟ್ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರ ದೇಶದ ಬಹುತ್ವ ನಾಶ ಮಾಡಲು ಹೊರಟಿದೆ. ಮೇಲಿನ ತನ್ನೆಲ್ಲ ಕಾರ್ಯಸೂಚನೆ ಜಾರಿ ಮಾಡಲು ಹಲವಾರು ಭಾವನಾತ್ಮಕ ವಿಷಯಗಳನ್ನು ಸಮಾಜದಲ್ಲಿ ಬಿತ್ತುತ್ತಿದೆ. ಅಚ್ಛೇ ದಿನ್, ಕಪ್ಪು ಹಣ ವಾಪಸಾತಿ, ಭಯೋತ್ಪಾದನೆ ನಿಗ್ರಹ, ಬೇಟಿ ಬಚಾವ್, ಅಮೃತ ಕಾಲ, ವಿಕಸಿತ ಭಾರತ, ಇತ್ಯಾದಿ ಪದಪುಂಜ ಬಳಸಿ ಜನರನ್ನು ಮರಳು ಮಾಡುತ್ತಿದೆ. ಬಷ್ಟಾಚಾರದ ವಿರುದ್ಧ ಮಾತನಾಡುತ್ತಾ ಪ್ರಧಾನಿ ‘ನಾ ಕಾವೂಂಗ ನಾ ಖಾನೇ ದೂಂಗ’ ಎಂದು ಬೊಗಳೆ ಬಿಟ್ಟು ಚುನಾವಣಾ ಬಾಂಡ್ ಎಂಬ ಹೆಸರಿನಲ್ಲಿ ದೇಶದ ಸಂಪತ್ತಿನ ಲೂಟಿಕೋರರನ್ನು, ಗುತ್ತಿಗೆದಾರರನ್ನು ಐಟಿ, ಇಡಿ, ಸಿಬಿಐ, ಮುಂತಾದವರಿಂದ ಬೆದರಿಸಿ ಅವರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿರುವ ಸತ್ಯ ಇಂದು ಬೆಳಕಿಗೆ ಬಂದಿದೆ. ಆದುದರಿಂದ ದೇಶದ ಸಂವಿಧಾನವನ್ನು ಉಳಿಸಲು. ಪ್ರಜಾಪ್ರಭುತ್ವವನ್ನು ರಕ್ಷಿಸಲು, ಭ್ರಷ್ಟಾಚಾರಿಗಳನ್ನು ಶಿಕ್ಷಿಸಲು, ಬಹುತ್ವ ಭಾರತವನ್ನು ಉಳಿಸಿಕೊಳ್ಳಲು ರೈತ, ಕಾರ್ಮಿಕ ವಿದ್ಯಾರ್ಥಿ, ಯುವಜನ, ಮಹಿಳೆ, ದಲಿತ, ಆದಿವಾಸಿಗಳ ವಿರೋಧಿ ಬಿಜೆಪಿ ಸೋಲಬೇಕಿದೆ. ಅದಕ್ಕಾಗಿ. ಬಿಜಿಪಿ ಸೋಲಿಸಿ, ದೇಶ ಉಳಿಸಿ, ರಾಜಕೀಯ ಸಮಾವೇಶವನ್ನು ಸಿಪಿಐ ಹಮ್ಮಿಕೊಂಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬರ ಪರಿಹಾರ ಕೊಟ್ಟು ನಂತರ ವೋಟು ಕೇಳಲಿ; ರೈತಸಂಘ
ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ ಅಜ್ಮದ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೀರೀಶ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ ಚಂದ್ರಶೇಖರ್, ಜಿಲ್ಲಾ ಸಹಕಾರ್ಯದರ್ಶಿ ಆರ್ ಗೋವಿಂದರಾಜು, ಜಿಲ್ಲಾ ಸಹಕಾರ್ಯದರ್ಶಿ ಅಶ್ವತ್ಥ ನಾರಾಯಣ, ಜಿಲ್ಲಾ ಖಜಾಂಚಿ ರವಿಪ್ರಸಾದ್, ಎಐಟಿಯುಸಿ ಜಿಲ್ಲಾ ಖಜಾಂಚಿ ದೊಡ್ಡತಿಮ್ಮಯ್ಯ ಸೇರಿದಂತೆ ಇತರರು ಇದ್ದರು.
