ಆರೋಪಿಯೊಬ್ಬ ರಾಗಿ ಬೆಳೆ ನಾಶ ಮಾಡಿ ವಾರ ಕಳೆಯುತ್ತಾ ಬಂದರೂ ಪ್ರಕರಣ ದಾಖಲಿಸಿಕೊಳ್ಳದೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತರನ್ನೇ ಅಲೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಗೂಳೂರಿನ ಎ.ಕೆ.ಕಾವಲ್ ಸರ್ವೆ ನಂ. 599ರಲ್ಲಿ ರಾಮಾಂಜಿನಯ್ಯ ಮತ್ತು ರಾಧಕೃಷ್ಣ ಅವರಿಗೆ ಸೇರಿದ್ದ ಕೃಷಿ ಜಮೀನಿನಲ್ಲಿ ಇತ್ತೀಚೆಗೆ ರಾಗಿ ಬಿತ್ತನೆ ಮಾಡಲಾಗಿತ್ತು, ಬೀಜ ಮೊಳಕೆಯೊಡೆದ ನಂತರ ಆರೋಪಿ ಪದ್ಮನಾಭ್ ಅವರು ಆ.13ರಂದು ಬೆಳೆಯ ಮೇಲೆಯೇ ಟ್ರಾಕ್ಟರ್ ಚಲಾಯಿಸಿ ಬೆಳೆ ಹಾನಿ ಮಾಡಿದ್ದೂ ಅಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದರು ಎಂದು ಸಂತ್ರಸ್ತರು ಆರೋಪಿಸಿ ಠಾಣೆಗೆ ದೂರು ನೀಡಿದ್ದರು. ಆಗ ಪಿಎಸ್‌ಐ ಅವರು ಸಂತ್ರಸ್ತರನ್ನೇ ಬೆದರಿಸಿದ್ದರು ಎನ್ನಲಾಗಿದ್ದು, ನಂತರ ಎಸ್ಪಿ ಅವರ ಗಮನಕ್ಕೆ ತೆಗೆದುಕೊಂಡು ಹೋಗಲಾಗಿದೆ, ನಂತರ ಠಾಣೆಗೆ ಬಂದ ದೂರುದಾರರು ಆ.19 ರಂದು ದೂರು ನೀಡಿದ್ದಾರೆ. ಆದರೆ, ಠಾಣಾಧಿಕಾರಿ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಬೆಳೆ ಹಾನಿ ಮಾಡಿ ವಾರ ಕಳೆಯುತ್ತಾ ಬಂದರೂ ಪ್ರಕರಣ ದಾಖಲಿಸಿಕೊಳ್ಳದಿರುವುದಕ್ಕೆ ಗ್ರಾಮಾಂತರ ಶಾಸಕರ ಬೆಂಬಲಿಗ ಗೂಳೂರು ವ್ಯಾಪ್ತಿಯ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೆ ಪೊಲೀಸರು ದೂರು ದಾಖಲಿಸಿಕೊಳ್ಳದಿರುವುದಕ್ಕೆ ಆರೋಪಿ ಪದ್ಮನಾಭ್ ಎನ್ನುವ ವ್ಯಕ್ತಿ ರಾಜಕೀಯ ಚೇಲಾ ಆಗಿರುವುದೇ ಮುಖ್ಯ ಕಾರಣ ಎನ್ನಲಾಗಿದೆ.
ನಾವು ಠಾಣೆಗೂ ಮನೆಗೂ ಅಲೆದು ಸಾಕಾಗಿದೆ. ಯಾರೂ ನಮಗೆ ನ್ಯಾಯ ಕೊಡಿಸುತ್ತಿಲ್ಲ, ಮಂಡಿ ನೋವಿದ್ದರೂ ನಿತ್ಯ ಠಾಣೆಗೆ ಬರುತ್ತಿದ್ದೇವೆ. ದೂರು ಪಡೆಯಲಾಗಿದ್ದರೂ ಪ್ರಕರಣ ದಾಖಲಿಸದೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ನಂಬಿಕೆ ಭದ್ರಪಡಿಸುವ ಕೆಲಸವಾಗಲಿ : ರಾಜಕೀಯ ಪ್ರಭಾವಿಗಳಾದರೆ ಏನು ಬೇಕಾದರೂ ಮಾಡಬಹುದು ಎನ್ನುವ ಸ್ಥಿತಿ ತುಮಕೂರಿನಲ್ಲಿ ನಿರ್ಮಾಣವಾಗುತ್ತಿದೆ. ಹೀಗಾದರೆ ನ್ಯಾಯ ಸಿಗಲು ಸಾಧ್ಯವಿದೆಯೇ? ಕೋರ್ಟ್ ಆದೇಶವಿದ್ದರೂ ಪೊಲೀಸರು ಆರೋಪಿಗಳ ಪರ ನಿಲ್ಲುತ್ತಿರುವುದು ಸರಿಯಲ್ಲ. ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರಿಗಿರುವ ನಂಬಿಕೆಯನ್ನು ಮತ್ತಷ್ಟು ಭದ್ರಪಡಿಸುವ ಕೆಲಸವಾಗಬೇಕೇ ವಿನಾಃ, ಅಪನಂಬಿಕೆಗೆ ಗುರಿಯಾಗಬಾರದು. ಗೃಹ ಸಚಿವರ ತವರಲ್ಲಿಯೇ ಹೀಗಾಗುತ್ತಿರುವುದು ದುರದೃಷ್ಟಕರ.
“ರೈತರ ಬೆಳೆ ನಾಶ ಮಾಡುವುದು ತಪ್ಪು. ಕೋರ್ಟ್ನಲ್ಲಿ ತೀರ್ಪು ನೀಡಿದ್ದರೂ ಅದನ್ನು ಮೀರಿ ತಮ್ಮ ಪ್ರಭಾವ ಬಳಸಿ ರೈತರ ಬೆಳೆ ನಾಶಪಡಿಸಿರುವುದು ಖಂಡನೀಯ. ದೂರು ನೀಡಿದರೆ ಪರಿಶೀಲನೆ ಮಾಡಿ ಅವರಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಪೊಲೀಸರು ಮಧ್ಯ ಪ್ರವೇಶ ಮಾಡಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ರೖತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ಕೇಳಲು ತುಮಕೂರು ಗ್ರಾಮಾಂತರ ಪಿಎಸ್‌ಐ ಅವರನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಿಲಿಲ್ಲ.
