ತುಮಕೂರು | ಕೇಂದ್ರ ಬರ ಅಧ್ಯಯನ ತಂಡದಿಂದ ಬೆಳೆ ಪರಿಶೀಲನೆ

Date:

Advertisements

ತುಮಕೂರು ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರಪರಿಸ್ಥಿತಿ ಅಧ್ಯಯನ ಮಾಡಿ ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ತಂಡ ಜಿಲ್ಲೆಯ ಹಲವೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ಮಾಡಿ ಪರಿಶೀಲಿಸಿತು.

ತುಮಕೂರು ಜಿಲ್ಲೆಯ 9 ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶ ಹಾಗೂ ಒಂದು ತಾಲೂಕನ್ನು ಸಾಧಾರಣ ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊರಟಗೆರೆ ತಾಲೂಕಿನ ಅರಸಾಪುರದ ಬಳಿ ಜಿಲ್ಲೆಗೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಜಿ ಪ್ರಭು ಬರಮಾಡಿಕೊಂಡರು.

ಕೊರಟಗೆರೆ : ತಂಡವು ಮೊದಲಿಗೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಗ್ರಾಮದ ಸರ್ವೆ ನಂಬರ್ 67/3ರ ಜಮೀನಿನಲ್ಲಿ ನಾಗೇಂದ್ರ ಕುಮಾರ್ ಅವರು 1.14 ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿರುವ ಶೇಂಗಾ, ತೊಗರಿ, ಅಲಸಂದೆ, ಜೋಳದ ಬೆಳೆ ಪರಿಶೀಲಿಸಿತು. ಬಳಿಕ ರೈತ ನಾಗೇಂದ್ರ ಕುಮಾರ್ ಅವರು “ನಾನು ಉಳುಮೆ ಮಾಡಿ ಬಿತ್ತನೆ ಮಾಡುವುದಕ್ಕೆ 40,000 ರೂ. ವೆಚ್ಚವಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಸಂಪೂರ್ಣ ಬೆಳೆ ನಷ್ಟವಾಗಿದೆ. ಇದರಿಂದ ದನಕರುಗಳಿಗೆ ಮೇವು ಕೂಡ ಆಗುವುದಿಲ್ಲ” ಎಂದು ಅವಲತ್ತುಕೊಂಡರು.

Advertisements

ಅದೇ ಗ್ರಾಮದ ಸರ್ವೇ ನಂಬರ್ 67/2ರ ಜಮೀನಿನಲ್ಲಿ ಭಾಗ್ಯಮ್ಮ ಅವರು 1.14 ಎಕರೆ ಕೃಷಿ ಭೂಮಿಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಮಳೆ ಕೊರತೆಯಿಂದ ಬೆಳೆ ನಷ್ಟವಾಗಿರುವುದನ್ನು ಪರಿಶೀಲಿಸಿ ರೈತರ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆಂದು ತಂಡವು ಭರವಸೆ ನೀಡಿತು.

ಮಧುಗಿರಿ : ಮಧುಗಿರಿ ತಾಲೂಕಿನ ಮಾಡಗಾನಹಟ್ಟಿ ಗ್ರಾಮದ ಸರ್ವೆ ನಂಬರ್ 13/1ರ ಜಮೀನಿನಲ್ಲಿ ತಿಪ್ಪೇನರಸಯ್ಯ ಅವರು 2 ಎಕರೆ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆ ಬಿತ್ತನೆ ಮಾಡಿರುವುದನ್ನು ಪರಿಶೀಲಿಸಿದರು. “ಬಿತ್ತನೆ ಮಾಡಿದಾಗಿನಿಂದಲೂ ಸರಿಯಾಗಿ ಮಳೆ ಬಾರದ ಕಾರಣ ಬೆಳೆ ಕುಂಠಿತವಾಗಿದೆ” ಎಂದು ರೈತ ತಿಪ್ಪೇನರಸಯ್ಯ ಹೇಳಿದರು.

“ಪ್ರತಿವರ್ಷ ಸರಿಯಾಗಿ ಬೆಳೆಯಾಗಿರುವುದಿಲ್ಲ. ಹಿಂದಿನ ವರ್ಷ ಅತಿವೃಷ್ಠಿಯಿಂದ ಬೆಳೆ ಹಾಳಾಗಿತ್ತು. ಆದರೆ ಈ ವರ್ಷ ಮಳೆ ಸಕಾಲಕ್ಕೆ ಬಾರದೆ ಬೆಳೆ ನಷ್ಟವಾಗಿದೆ. ಆಗಾಗ್ಗೆ ಮಳೆ ಬಂದರೂ ಕೂಡ ಭೂಮಿಯ ಮೇಲ್ಭಾಗದ ಒಂದೆರಡು ಇಂಚು ಮಾತ್ರ ತೇವಗೊಂಡಿರುತ್ತಿತ್ತು. ಬೇರಿನವರೆಗೆ ತೇವಾಂಶ ಇರುತ್ತಿರಲಿಲ್ಲ. ಮುಂದಿನ ಮುಂಗಾರಿನವರೆಗೆ ಜಾನುವಾರುಗಳಿಗೆ ನೀರು, ಮೇವು ಬೇಕು.  ಬರಗಾಲದಿಂದ ಜನರ ರಕ್ಷಣೆ ಮಾಡುವಂತೆ ಮತ್ತು ತಾಲೂಕಿನ ಸಮಗ್ರ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೀಡಬೇಕು” ಎಂದು ರೈತರು ಕೇಂದ್ರ ತಂಡದ ಅಧಿಕಾರಿಗಳಿಗೆ ಮನವಿ ಮಾಡಿದರು.

“ತಾಲೂಕಿನಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು. ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾತ್ರ ಕಾಮಗಾರಿ ಮಾಡುವುದಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು” ಎಂದು ರೈತರು ಮನವಿ ಮಾಡಿದರು.

“ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ 9,753 ಎಕರೆ ಕೃಷಿ ಭೂಮಿಯಲ್ಲಿ 5,835 ಎಕರೆ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಧುಗಿರಿ ತಾಲೂಕಿನಲ್ಲಿ ಹೆಚ್ಚಾಗಿ ಶೇಂಗಾ, ರಾಗಿ, ಜೋಳದ ಜೊತೆಗೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಂದರೆ ಒಂದು ಶೇಂಗಾ ಗಿಡದಲ್ಲಿ ಸುಮಾರು 70 ರಿಂದ 80 ಕಾಯಿ ಇರುತ್ತಿತ್ತು. ಆದರೆ ಮಳೆ ನಷ್ಟದಿಂದ ಒಂದು ಗಿಡದಲ್ಲಿ ಈಗ 5 ರಿಂದ 10 ಕಾಯಿ ಇದೆ. ಅದು ಕೂಡ ಸರಿಯಾಗಿ ಆಗಿಲ್ಲ” ಎಂದು ರೈತರು ಕೃಷಿ ಇಲಾಖೆಯ ಅಧಿಕಾರಿಗಳು ಕೇಂದ್ರ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, “ಜಿಲ್ಲೆಯ 9 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಒಂದು ತಾಲೂಕನ್ನು ಸಾಧಾರಣ ಬರಪೀಡಿತ ತಾಲೂಕೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗದ ನಿರ್ದೇಶಕ ಅಶೋಕ್ ಕುಮಾರ್.ವಿ. ನೇತೃತ್ವದ ಅಧಿಕಾರಿಗಳ ಬರ ಪರಿಶೀಲನಾ ತಂಡವು ಕೊರಟಗೆರೆ, ಮಧುಗಿರಿ, ಶಿರಾ ತಾಲೂಕುಗಳ ಆಯ್ದ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ” ಎಂದು ತಿಳಿಸಿದರು.

“ಜಿಲ್ಲೆಯಲ್ಲಿ ಶೇ.69ರಷ್ಟು ಬಿತ್ತನೆಯಾಗಿದ್ದು, ಶೇ.73ರಷ್ಟು ಬೆಳೆ ಹಾನಿಯಾಗಿದೆ. ಒಟ್ಟಾರೆ 1,880 ಕೋಟಿ ರೂ. ನಷ್ಟವಾಗಿದ್ದು, ಇಳುವರಿ ಪ್ರಮಾಣ ಕೂಡ ಕಡಿಮೆಯಾಗಿದೆ” ಎಂದು ತಿಳಿಸಿದರು.

“ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಸಣ್ಣ ಮತ್ತು ಮಧ್ಯಮ ರೈತರಿಗೆ ಒಂದು ಎಕರೆ ಬೆಳೆ ನಷ್ಟಕ್ಕೆ 8,500 ರೂ. ಪರಿಹಾರದಂತೆ ಒಟ್ಟು 148 ಕೋಟಿ ರೂ. ಪರಿಹಾರ ನೀಡಲಾಗುವುದು. ರೈತರ ಮನವಿಯ ಮೇರೆಗೆ ಹೆಚ್ಚುವರಿ ಪರಿಹಾರ ಮೊತ್ತಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.

“2023ನೇ ಸಾಲಿನ ನೈರುತ್ಯ ಮುಂಗಾರು ಹಂಗಾಮಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ ಶೇ. 4ರಷ್ಟು ಹಾಗೂ ಶೇ.28ರಷ್ಟು ವಾಡಿಕೆಗಿಂತ ಸಾಧಾರಣ ಮಳೆಯಾಗಿದ್ದು, ಈ ಮಳೆ ಕೇವಲ ಒಂದೇ ವಾರ ಕೇಂದ್ರೀಕೃತವಾಗಿತ್ತು. ಬಳಿಕ ಆಗಸ್ಟ್‌ ಮಾಹೆಯಲ್ಲಿ ವಾಡಿಕೆಗಿಂತ ಶೇ.73ರಷ್ಟು ಅತಿ ಕುಂಠಿತ ಮಳೆಯಿಂದ ಜಿಲ್ಲೆಯ ಎಲ್ಲ 10 ತಾಲೂಕುಗಳಲ್ಲೂ ಮಳೆ ಕೊರತೆ ಉಂಟಾಗಿದೆ. ಜೂನ್ ಪ್ರಾರಂಭದಿಂದ ಪ್ರತಿ ತಾಲೂಕಿನಲ್ಲೂ ಕನಿಷ್ಟ 3 ವಾರ ಒಣಗಿದ ಪರಿಸ್ಥಿತಿ ಎದುರಾಗಿದ್ದು, ಎಲ್ಲ 10 ತಾಲೂಕುಗಳಲ್ಲೂ ಸಾಧಾರಣದಿಂದ ತೀವ್ರ ಪ್ರಮಾಣದ ತೇವಾಂಶ ಕೊರತೆ ಉಂಟಾಗಿದೆ. ಕೆರೆ-ಕಟ್ಟೆ ಮತ್ತು ಅಂತರ್ಜಲದ ಮಟ್ಟವು ಕಡಿಮೆಯಾಗಿರುತ್ತದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಿಲ್ಲೆಯಲ್ಲಿ ಬರ; ಮೇವಿಗಾಗಿ ಆಂಧ್ರದತ್ತ ಮುಖ ಮಾಡಿದ ರೈತರು

“ಪ್ರಸ್ತುತ ಜಿಲ್ಲೆಯಲ್ಲಿ 3,14,630 ಎಕರೆ ಪ್ರದೇಶದ ಪೈಕಿ 2,19,554 ಎಕರೆಯಷ್ಟು ಬಿತ್ತನೆಯಾಗಿದ್ದು,  ಮಳೆ ಕೊರತೆಯಿಂದ ಶೇ. 30ರಷ್ಟು ಬಿತ್ತನೆ ಕಡಿಮೆಯಾಗಿದೆ. ಒಣ ಪರಿಸ್ಥಿತಿಯಿಂದ 1,80,422 ಎಕರೆ ಪ್ರದೇಶ ಬೆಳೆ ಹಾನಿಯಾಗಿದ್ದು, ಒಟ್ಟು 1,08,622.06 ರೂ.ಗಳಷ್ಟು ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂಎನ್‌ಸಿಎಫ್‌ಸಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕರಣ್ ಚೌದರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X