ನಾಲ್ಕು ವರ್ಷದ ಬಾಲಕಿಯ ವಿರುದ್ಧ ಲೈಂಗಿಕ ಕಿರುಕುಳ ನಡೆದಿದೆ ಎಂದು ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಸಂತ್ರಸ್ತ ಬಾಲಕಿಯ ಪೋಷಕರ ದೂರು ಸ್ವೀಕರಿಸಲು ಸಿ ಎಸ್ ಪುರ ಪೊಲೀಸರು ನಿರಾಕರಿಸಿದ್ದಾರೆ. ನಾಲ್ಕೈದು ತಾಸು ವಿಳಂಬ ಮಾಡಿ, ಗ್ರಾಮಸ್ಥರೊಂದಿಗೆ ರಾಜಿ ಸಂಧಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ವಿರುದ್ಧ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎಸ್ ಸಿದ್ದಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಉಚ್ಛನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಜನವರಿ 14ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿ ಕೆ ಹರುವೇಸಂದ್ರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆ ಬಗ್ಗೆ ದೂರು ನೀಡಲು ಸಿ.ಎಸ್.ಪುರ ಪೊಲೀಸ್ ಠಾಣೆಗೆ ಸಂತ್ರಸ್ತ ಬಾಲಕಿಯ ಪೋಷಕರು ತೆರಳಿದ್ದರು. ಆದರೆ, ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಬೇಕಾದ ಪೊಲೀಸರು, ನಿರ್ಭೀತಿ ವಾತಾವರಣ ಸೃಷ್ಟಿಸಿ ಅವರಿಂದ ಘಟನೆಯ ಪೂರ್ತಿ ವಿವರಣೆ ಪಡೆದಿಲ್ಲ ಎಂದು ಸಿದ್ದಲಿಂಗೇಗೌಡ ಆರೋಪಿಸಿದ್ದಾರೆ.
ಪೋಕ್ಸೊ ಕಾಯಿದೆಯು ಅಪ್ರಾಪ್ತ ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಾರಿಯಲ್ಲಿದೆ. ಆದರೆ, ಅದರ ಪಾಲನೆ ಮಾಡದ ಪಿಎಸ್‌ಐ ಶಿವಕುಮಾರ್ ಅವರು ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಮಣಿದು ಗ್ರಾಮಸ್ಥರೊಂದಿಗೆ ರಾಜಿಸಂಧಾನಕ್ಕೆ ಸಮಯ ನೀಡಿದ್ದಾರೆ. ಆ ಮೂಲಕ, ಸಂಪೂರ್ಣವಾಗಿ ಪೋಕ್ಸೊ ಕಾಯಿದೆ ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
“ನಿರ್ಭಯ ವಾತಾವರಣ ಸೃಷ್ಟಿ ಜೊತೆಗೆ ಮಗುವಿನ ಮತ್ತು ಆಕೆಯ ತಂದೆ ತಾಯಿ ಅಥವಾ ಪೋಷಕರ ಖಾಸಗಿ ಗೌಪ್ಯತೆ ಕಾಪಾಡುವ ಕೆಲಸವನ್ನು ಪೊಲೀಸರು ಮಾಡಬೇಕಿದೆ. ಅಜ್ಞಾತ ಸ್ಥಳದಲ್ಲಿ ಸಂತ್ರಸ್ತರನ್ನಿರಿಸಿ ಕೂಲಂಕುಷ ತನಿಖೆ ಆರಂಭಿಸಬೇಕಿತ್ತು. ಕೂಡಲೇ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿತ್ತು. ಈ ರೀತಿ ಸೂಕ್ಷ್ಮತೆ ಅರಿತು ಕೆಲಸ ಮಾಡುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಕೈ ಚೆಲ್ಲಿದೆ. ಜತೆಗೆ ದೂರು ಕೇಳಿದ ತಕ್ಷಣ ಆರೋಪಿಯನ್ನು ಕರೆತಂದು ಎರಡು ದಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇದೆಲ್ಲಾ ನಡವಳಿಕೆ ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಲೈಂಗಿಕ ಕಿರುಕುಳದ ದೂರು ದಾಖಲು, ವೈದ್ಯಕೀಯ ಪರೀಕ್ಷೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ, ಪರಿಹಾರ ನೀಡಬೇಕು” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ
“ಇಡೀ ಘಟನೆ ಬಗ್ಗೆ ದೂರು ಆಧರಿಸಿ ಸಂಬಂಧಪಟ್ಟ ಪೊಲೀಸ್ ಪಿಎಸ್‌ಐ ಹಾಗೂ ಸಿಡಿಪಿಒ ಜೊತೆ ಮಾತನಾಡಿದಾಗ ಘಟನೆಯ ಸ್ಪಷ್ಟತೆ ಕಾಣುತ್ತಿದೆ. ಆದರೆ ಕೌನ್ಸೆಲಿಂಗ್‌ಗಾಗಿ ಸಿಡಿಪಿಒ ಬಳಿ ಬಂದು ವಾಪಸ್ ತೆರಳಿದ್ದಾರೆ. ಈ ಬಗ್ಗೆ ದಾಖಲು ಮಾಡದಿರುವುದೇ ದೊಡ್ಡ ವಿಪರ್ಯಾಸ. ಗಂಭೀರ ಪ್ರಕರಣದಲ್ಲಿ ಆರೋಪಿ ತಪ್ಪಿಸಿಕೊಂಡರೆ ಮತ್ತಷ್ಟು ಇಂತಹ ದುರ್ಘಟನೆಗೆ ಕಾರಣವಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 1,375ರಷ್ಟು ಅಪ್ರಾಪ್ತ ಗರ್ಭಿಣಿಯರು ಇದ್ದರೆ, ರಾಜ್ಯದಲ್ಲಿ 28,657ರಷ್ಟು ಅಪ್ರಾಪ್ತ ಗರ್ಭಿಣಿಯರಿರುವುದು ಇಂತಹ ಸಮಾಜಘಾತುಕರು ಕೃತ್ಯ ನಡೆಸಿರುವುದು ಅರಿವಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳು ಸರ್ಕಾರಿ ಕಚೇರಿ ಮಧ್ಯವರ್ತಿಗಳ ತಾಣವಾಗುತ್ತಿದೆ. ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಪತ್ರದ ಮೂಲಕ ನ್ಯಾಯ ಕೋರಿದ್ದಾರೆ.