ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಸ್ವಕ್ಷೇತ್ರದಲ್ಲೇ ದಲಿತ ಸಮುದಾಯದ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನವಿಲ್ಲದೆ ಪರದಾಡಿದ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ದಲಿತ ಯುವಕ ಹನುಮಂತರಾಯಪ್ಪ ಶುಕ್ರವಾರ ಸಂಜೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗ್ರಾಮದ ಸಮೀಪದ ಭೂಮಿಯಲ್ಲಿ ಮೃತನ ಶವ ಸಂಸ್ಕಾರಕ್ಕೆ ಮುಂದಾದಾಗ, ಆ ಭೂಮಿಯ ಮಾಲೀಕ ಎನ್ನಲಾದ ಹನುಮಂತಯ್ಯ ಎಂಬುವವರು, ‘ಈ ಭೂಮಿ ನಮಗೆ ಸೇರಿದ್ದು’ ಎಂದು ಶವ ಸಂಸ್ಕಾರಕ್ಕೆ ಅವಕಾಶ ನೀಡದೆ ತಡೆದಿದ್ದು, ಕೆಲ ಕಾಲ ಶವ ಇಟ್ಟುಕೊಂಡ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಯಿತು.
ಘಟನೆಯ ವಿಷಯ ತಿಳಿದ ಬಳಿಕ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಜಮೀನು ಮಾಲೀಕನಿಗೆ ಈ ಬಾರಿ ಇಲ್ಲೇ ಶವ ಸಂಸ್ಕಾರ ಮಾಡಿಸುವಂತೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯವರು ಗುರುತಿಸಿರುವ ಜಾಗದಲ್ಲೇ ಶವ ಸಂಸ್ಕಾರ ಮಾಡುವಂತೆ ದಲಿತ ಸಮುದಾಯದವರಿಗೆ ಮನವೊಲಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
“ಈ ಭೂಮಿ ನನ್ನ ಹೆಸರಿನಲ್ಲಿದೆ. ಹಾಗಾಗಿ ಇಲ್ಲಿ ಶವ ಸಂಸ್ಕಾರಕ್ಕೆ ಬಿಡುವುದಿಲ್ಲ” ಎಂದು ಜಮೀನು ಮಾಲೀಕ ಹನುಮಂತಯ್ಯ ಹಠ ಹಿಡಿದಿದ್ದರು. ಅದರೆ ಶತ-ಶತಮಾನಗಳಿಂದ ನಾವು ಇಲ್ಲೇ ಶವ ಸಂಸ್ಕಾರವನ್ನು ಮಾಡುತ್ತಿದ್ದೇವೆ. ಹಾಗಾಗಿ ನಾವು ಇಲ್ಲೇ ಶವ ಸಂಸ್ಕಾರ ಮಾಡುತ್ತೇವೆ ಎಂದು ದಲಿತ ಮುಖಂಡರು ಪಟ್ಟು ಹಿಡಿದಿದ್ದು ತಾಲೂಕು ಆಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ಈಗಾಲೇ ಗ್ರಾಮದಲ್ಲಿ ದಲಿತರ ಸ್ಮಶಾನಕ್ಕೆ ಕಂದಾಯ ಇಲಾಖೆ ಭೂಮಿ ಗುರುತಿಸಿದೆ. ಈ ಭೂಮಿ ಗ್ರಾಮದಿಂದ ಸುಮಾರು 3 ಕಿಲೋಮೀಟರ್ ದೂರ ಇದ್ದು, ಶವ ಸಾಗಿಸಲು ತೊಂದರೆಯಾಗುತ್ತಿದೆ. ಗುರುತಿಸಿರುವ ಸ್ಥಳ ಕಲ್ಲು ಬಂಡೆಗಳಿಂದ ಕೂಡಿದ್ದು ಗುಂಡಿ ತೆಗೆಯಲು ಅಸಾಧ್ಯವಾಗಿದೆ. ದಲಿತರಿಗೆ ಗ್ರಾಮದ ಅಕ್ಕಪಕ್ಕದಲ್ಲಿ ಸ್ಮಶಾನಕ್ಕೆ ಸ್ಥಳ ಗುರುತಿಸಿಕೊಡಬೇಕೆಂದು ಸ್ಥಳೀಯ ದಲಿತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಸಮನ್ವಯತೆಯ ಕೊರತೆಯಿಂದ ತುಮಕೂರು ಜಿಲ್ಲೆಯಾದ್ಯಂತ ದಲಿತರಿಗೆ ಅಂತ್ಯಕ್ರಿಯೆಗೆ ಯೋಗ್ಯವಾದ ಭೂಮಿ ಗುರುತಿಸಿ, ಸ್ಮಶಾನ ಸಮಸ್ಯೆಯನ್ನು ಅಧಿಕಾರಿ ವರ್ಗ ಪರಿಹರಿಸಬೇಕಾಗಿತ್ತು. ಮಳೆ ಬಂದರೆ ಕೊಡೆ ಹಿಡಿಯುವಂತೆ ಅಂತ್ಯಸಂಸ್ಕಾರಕ್ಕೆ ತೊಂದರೆಯಾದಾಗ ಮಾತ್ರ ಪ್ರತ್ಯಕ್ಷವಾಗುವ ಅಧಿಕಾರಿಗಳು ಶಾಶ್ವತವಾದ ಪರಿಹಾರ ದೊರಕಿಸಿಕೊಡುವಲ್ಲಿ ವಿಫಲವಾಗಿದ್ದಾರೆ ಎನ್ನುತ್ತಾರೆ ದಲಿತ ಸಮುದಾಯದ ಮಂದಿ ಆಕ್ರೋಶ ಹೊರಹಾಕಿದರು.
ಇದನ್ನು ಓದಿದ್ದೀರಾ? ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್‌ಎಸ್‌ಎಸ್‌ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು
ತನ್ನದೇ ಸಮುದಾಯದ ಜನರು ಅಂತ್ಯಕ್ರಿಯೆಗೆ ಸ್ಥಳಾವಕಾಶ ಇಲ್ಲದೆ ಪರದಾಡುತ್ತಿರುವಾಗ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ ಅವರು ಎರಡು ಇಲಾಖೆಯವರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಮಾಡುತ್ತಾರಾ? ಆ ಮೂಲಕ ದಲಿತರ ಅಂತ್ಯ ಸಂಸ್ಕಾರಗಳಿಗೆ ಅಡ್ಡಿಯಾಗಿರುವ ಸ್ಮಶಾನ ಸಮಸ್ಯೆಗೆ ಪೂರ್ಣವಿರಾಮ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
