ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ದಲಿತ ಸಂಘಟನೆ ಮತ್ತು ಹಲವು ಜನಪರ ಸಂಘಟನೆಗಳ ಮುಖಂಡರು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿರುದ್ಧ ಸುದ್ದಿಗೋಷ್ಠಿ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಚಿಕ್ಕನಾಯಕನಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂವಿಧಾನವನ್ನು ತಿರುಚಿ ಮನು ಸ್ಮೃತಿ ಜಾರಿಗೆತರುವ ಹುನ್ನಾರ ನಡೆಯುತ್ತಿದೆ ಎಂದು ದಲಿತ ಮುಖಂಡರು ಹಾಗೂ ಹಲವು ಜನಪರ ಸಂಘಟನೆಗಳ ಮುಖಂಡರು ಆರೋಪಿಸಿದರು.
ಮಾದಿಗದಂಡೋರ ರಾಜ್ಯಕಾರ್ಯದರ್ಶಿ ಬೇವಿನಹಳ್ಳಿ ಚೆನ್ನಬಸವಯ್ಯ ಮಾತನಾಡಿ, ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ಲಿಂಗದೇವರು ಮಾತನಾಡಿ, ಬಿಜೆಪಿ ನಾಯಕರು ದಲಿತರು ಮತ್ತು ಹಿಂದುಳಿದ ಸಮುದಾಯಗಳನ್ನು ತುಳಿದು ಬದುಕುವ ನೀತಿಯನ್ನು ಅನುಸರಿಸುತ್ತಿದೆ. ಹಾಗಾಗಿ ಅನಂತ್ ಕುಮಾರ್ ಹೆಗಡೆ ಹೇಳಿಕೆ ಅಚ್ಚರಿಯಲ್ಲ. ಅದರೆ, ನಿರಂತರವಾಗಿ ಸಂವಿಧಾನ ಬದಲಿಸುವ ಹೇಳಿಕೆ ನೀಡುವ ಅನಂತ್ ಕುಮಾರ್ ಹೆಗಡೆ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ಅಧ್ಯಕ್ಷ ವಸಂತ್ ಕುಮಾರ್, ಕೃಷ್ಣಮೂರ್ತಿ, ಶಂಕರ್, ಕೆಂಪರಾಜು ಕಾತ್ರಿಕಾಲ್ ಇನ್ನಿತರರು ಇದ್ದರು.
