ತುಮಕೂರಿನ ಕಾಲೇಜೊಂದರಲ್ಲಿ ಸಂವಿಧಾನ ಬದಲಾವಣೆ ವಿಷಯ ಕುರಿತ ಚರ್ಚಾ ಸ್ಪರ್ಧೆ ಆಯೋಜಿಸುವ ಮೂಲಕ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಂಘ ಸಂಸ್ಥೆಗಳು ಹೊಸ ವಿವಾದವನ್ನ ಸೃಷ್ಠಿಸಿದ್ದು, ಈ ಬೆಳವಣಿಗೆ ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯದಿನ ಆಚರಣೆ ಹಾಗೂ ಚರ್ಚಾ ಸ್ಪರ್ಧೆಯನ್ನ ನಡೆಸಲು ವಿವಿಧ ಸಂಘ ಸಂಸ್ಥೆಗಳು ಸಿದ್ದತೆ ನಡೆಸಿದ್ದವು. ಕಾಲೇಜಿನ ಪ್ರಾಂಶುಪಾಲರಾದ ಎಸ್ ಎಂ ಕಾಂತರಾಜ್ ಅಧ್ಯಕ್ಷತೆಯಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸುರಭಿ ಸಂಗಮ ಸಂಸ್ಥೆಗಳ ಆಶ್ರಯದೊಂದಿಗೆ ಕರ್ನಾಟಕ ಬ್ಯಾಂಕ್, ಎಸ್ ಬಿ ಐ ಬ್ಯಾಂಕ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲು ಸಿದ್ದತೆ ನಡೆದಿತ್ತು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಚರ್ಚಾ ಸ್ಪರ್ಧೆಯಲ್ಲಿ “ಭಾರತದ ಸಂವಿಧಾನಕ್ಕೆ ಬದಲಾವಣೆ ಅಗತ್ಯವೇ?” ಎಂಬ ಪ್ರಶ್ನಾರ್ಥಕ ವಿಷಯವನ್ನ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಹಲವು ಬಿಜೆಪಿ ನಾಯಕರು ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದು ಕಳೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಹಿನ್ನಡೆಗೂ ಕಾರಣವಾಗಿತ್ತು. ಇದೀಗ ಸಂಘ ಸಂಸ್ಥೆಗಳು, ಬ್ಯಾಂಕ್‌ಗಳು ಸೇರಿ ಕಾಲೇಜುಗಳಲ್ಲೇ ಸಂವಿಧಾನ ಬದಲಾವಣೆ ಕುರಿತ ವಿಷಯವನ್ನ ಚರ್ಚಿಸಲು ಮುಂದಾಗಿರುವುದು ಸಂವಿಧಾನ ವಿರೋಧಿ ಚಟುವಟಿಕೆ ಎಂದು ಆರೋಪಿಸಿ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಅಲ್ಲದೆ ಚರ್ಚಾ ಸ್ಪರ್ಧೆಯನ್ನು ನಡೆಸಲು ಸಿದ್ದತೆ ನಡೆಸಿದ್ದ ಆಯೋಜಕರ ವಿರುದ್ದ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆಯೋಜಕರ ವಿರುದ್ದ ಎಫ್ ಐ ಆರ್ ದಾಖಲಿಸದೇ ಪೊಲೀಸರು ವಿಳಂಬ ಮಾಡಿದ್ದಕ್ಕೆ ತುರುವೇಕೆರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಸಂಘಟನೆಗಳ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಹುದುಗಿದ್ದ ಮಣ್ಣಿನ ಗುಡ್ಡೆಯಲ್ಲಿ ನೆಲಮಾಳಿಗೆ ಪತ್ತೆ
ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಂವಿಧಾನ ರಕ್ಷಣೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹೋದಲ್ಲಿ, ಬಂದಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡಿ ಪ್ರಚಾರ ಗಿಟ್ಟಿಸಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ತಮ್ಮದೇ ಸರ್ಕಾರವಿದ್ದರೂ ಸಹ ಸಂವಿಧಾನ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ದ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸ ಎಂದು ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
