ನರೇಂದ್ರ ಮೋದಿ ನೇತೃತ್ವದ 10 ವರ್ಷಗಳ ಎನ್‌ಡಿಎ ಆಡಳಿತ ಜನಸಾಮಾನ್ಯರಿಗೆ ಅಚ್ಛೇ ದಿನ್ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತ, ಬಡವರ, ದೀನ ದಲಿತರು, ಹಿಂದುಳಿದ ವರ್ಗಗಳ ವಿರೋಧಿಯಾಗಿರುವ ಬಿಜೆಪಿ ಪಕ್ಷವನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ತುಮಕೂರು ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಕಳೆದ ಹತ್ತುವರ್ಷಗಳಲ್ಲಿ ಎನ್‌ಡಿಎ ಒಕ್ಕೂಟ ನೀಡಿದ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನಿರುದ್ಯೋಗ ತಾಂಡವವಾಡುತ್ತಿದೆ. ಸೈನಿಕರ ನೇಮಕಾತಿಯಲ್ಲಿಯೂ ಅಗ್ನಿಪಥ್ ಹೆಸರಿನಲ್ಲಿ ಹೊರಗುತ್ತಿಗೆ ಪದ್ದತಿಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಸದೃಢವಾಗಿದ್ದ ಬ್ಯಾಂಕ್‌ಗಳನ್ನು ಗುಜರಾತ್‌ನ ನಷ್ಟದಲ್ಲಿರುವ ಬ್ಯಾಂಕಿನೊಂದಿಗೆ ವಿಲೀನ ಮಾಡಿ, ಕನ್ನಡಿಗರ ಅಸ್ವಿತ್ವವೇ ಇಲ್ಲದಂತೆ ಮಾಡಲಾಗಿದೆ” ಎಂದರು.
“ಇತ್ತೀಚಿನ ಭಾಷಣವೊಂದರಲ್ಲಿ ಪ್ರಧಾನಿ ನರೇಂದ್ರಮೋದಿ ಮಾತನಾಡಿ, ʼಈವರೆಗೂ ನಡೆದಿರುವುದು ಪ್ರಯೋಗಿಕ, ಇನ್ನು ಮುಂದೆ ನಿಜವಾದ ಅಭಿವೃದ್ಧಿ ಇದೆʼ ಎಂದು ಹೇಳಿಕೆ ನೀಡಿರುವುದನ್ನು ಗಮನಿಸಿದರೆ, 10 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದು, ಓರ್ವ ಅನನುಭವಿ ಎಂಬುದು ತಿಳಿಯುತ್ತದೆ. ಮೋದಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯವೆಂಬುದು ಮರೀಚಿಕೆಯಾಗಿದೆ. ಪದೇ ಪದೆ ಆ ಪಕ್ಷದ ಸಂಸದರೇ ಸಂವಿಧಾನ ಬದಲಾಯಿಸುವ ಕೆಲಸ ಮಾಡುತ್ತಿದ್ದರೂ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಈಗ 400 ಸೀಟು ಕೊಡಿ ಎಂದು ಕೇಳುತ್ತಿದ್ದಾರೆ. ಇವರಿಗೆ 400 ಸೀಟು ಕೊಟ್ಟರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ದೇಶದ ಗದ್ದುಗೆ ಹಿಡಿಯುವಂತೆ ಮಾಡಬೇಕು” ಎಂದರು.
ಅನಂತನಾಯಕ್ ಮಾತನಾಡಿ, “ದೇಶದ ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಭರವಸೆ ನೀಡಿದ್ದ ಬಿಜೆಪಿ ಸರ್ಕಾರದಲ್ಲಿ 1.74 ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಇಲ್ಲ. ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ಪ್ರತಿಭಟನಾನಿರತ ಸುಮಾರು 752 ಮಂದಿ ರೈತರು ಸಾವಿಗೆ ಶರಣಾದರು. ಇದು ಮೋದಿ ಸರ್ಕಾರದ ವ್ಯವಸ್ಥಿತ ಕೊಲೆ. ದುಡಿಯುವ ವರ್ಗದ ಕಾರ್ಮಿಕರ ಸಮಯವನ್ನು 8-12 ಗಂಟೆಗಳಿಗೆ ಹೆಚ್ಚಿಲಾಗಿದೆ. ಇಂತಹ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ ಜನತೆಗೆ ಯಾವುದೇ ಭದ್ರತೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ” ಎಂದರು.
ತುಮಕೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಎಸ್ ಟಿ ಶ್ರೀನಿವಾಸ್ ಮಾತನಾಡಿ, “ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಧೋರಣೆ ಅನುಸರಿಸುತ್ತಿದೆ. ಎನ್‌ಡಿಆರ್‌ಎಫ್ ಹಾಗೂ ಜಿಎಸ್‌ಟಿ ಪಾಲು ಕುರಿತು ಚರ್ಚಿಸಲು ಆಹ್ವಾನಿಸಿದರೆ ವಿತ್ತ ಮಂತ್ರಿಗಳು ಗೈರಾಗುವ ಮೂಲಕ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಒಪ್ಪಿಕೊಂಡಿದ್ದಾರೆ. ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ₹5,300 ಕೋಟಿ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈವರೆಗೂ ನಯಾ ಪೈಸೆ ನೀಡಿಲ್ಲ. ಇಂತಹ ಜನ ವಿರೋಧಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಸ್ವತಹಃ ನಾವೇ ನೇಣಿಗೆ ಶರಣಾದಂತೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದಿಂದ ಲಕ್ಷ್ಮಣ ಜಡಗನ್ನವರ ಸ್ಪರ್ಧೆ
ಮುಖಂಡರುಗಳಾದ ಎಸ್ ನಾಗಣ್ಣ, ವಿರೂಪಾಕ್ಷ ಡ್ಯಾಗೇರಹಳ್ಳಿ, ಪ್ರತಾಪ್, ನರಸಿಂಹಣ್ಣ, ಕೊಳಗೇರಿ ನರಸಿಂಹಮೂರ್ತಿ, ಆರ್ ಕಾಮರಾಜು, ಮೈಲಪ್ಪ, ಜೋಸೆಫ್, ಎಣ್ಣೆಗೆರೆ ವೆಂಕಟರಾಮಯ್ಯ, ಡಾ ರಫೀಕ್ ಅಹಮದ್ ಸೇರಿದಂತೆ ಹಲವರು ಇದ್ದರು.
