ಕಳೆದ ಹತ್ತು ವರ್ಷಗಳ ಹಿಂದೆ ಎಚ್ಎಎಲ್ ಘಟಕ ನಿರ್ಮಾಣಕ್ಕೆ ಬಿದರೆಹಳ್ಳ ಕಾವಲ್ ಗ್ರಾಮದ ದಲಿತ ಕುಟುಂಬಗಳ ಪೈಕಿ 50 ಮಂದಿಗೆ ಬೇರೆಡೆ ಪರ್ಯಾಯ ಭೂಮಿ ನೀಡಲಾಯಿತು. ಈ ಪೈಕಿ ಅಲ್ಲಿ ಮೂರು ಮಂದಿ ಪ್ರಭಾವಿಗಳು ದಲಿತ ಕುಟುಂಬಕ್ಕೆ ಪರ್ಯಾಯ ಭೂಮಿ ನೀಡಲು ನಿರಾಕರಿಸಿ ಸಲ್ಲದ ರಾಜಕಾರಣ ಮಾಡಿದ್ದಾರೆ. ಐವತ್ತು ಮಂದಿ ಪೈಕಿ ಎಂಟು ಮಂದಿ ದಲಿತರಿಗೆ ಭೂಮಿ ಸಿಗದೇ ಅನ್ಯಾಯವಾಗಿದೆ. ಕಳೆದ ಏಳು ವರ್ಷದ ಈ ಹೋರಾಟಕ್ಕೆ ತುಮಕೂರು ಜಿಲ್ಲಾಡಳಿತ ತಾರ್ಕಿಕ ಅಂತ್ಯ ನೀಡಬೇಕು ಎಂದು ದಸಂಸ ಗುಬ್ಬಿ ತಾಲೂಕು ಸಂಘಟನಾ ಸಂಚಾಲಕ ಫಣೀಂದ್ರ ಮುನಿ ಒತ್ತಾಯಿಸಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಬಿ ಆರತಿ ಅವರೊಡನೆ ಈ ದಲಿತರ ಭೂಮಿ ವಿವಾದದ ಬಗ್ಗೆ ಚರ್ಚಿಸಿ ಮಾತನಾಡಿದರು.
“2014ರಲ್ಲಿ ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಎಚ್ಎಎಲ್ ಘಟಕ ಬಂದ ಕೂಡಲೇ ಅಲ್ಲಿನ ದಲಿತ ಕುಟುಂಬವನ್ನು ಒಕ್ಕಲೆಬ್ಬಿಸುವ ನಿಟ್ಟಿನಲ್ಲಿ ಪರ್ಯಾಯ ಭೂಮಿ ನೀಡಲು ಒಪ್ಪಲಾಗಿತ್ತು. ಅದರಂತೆ ಘಟಕದ ಹಿಂಬದಿಯಲ್ಲಿ ಜಮೀನು ಹಂಚಿಕೆ ಮಾಡಲಾಗಿ ಅಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಎಂಟು ಕುಟುಂಬಕ್ಕೆ ಭೂಮಿ ನೀಡದೆ ತಮ್ಮ ಪ್ರಭಾವ ಬೀರಿದ್ದಾರೆ” ಎಂದು ತಿಳಿಸಿದರು.
“ಐವತ್ತು ದಲಿತ ಕುಟುಂಬಗಳ ಪೈಕಿ ಎಂಟು ಕುಟುಂಬಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಈಗಾಗಲೇ ಸಾಕಷ್ಟು ದೂರು ಅರ್ಜಿ ಸಲ್ಲಿಸಲಾಗಿದೆ. ನ್ಯಾಯ ಕೋರಿ ಮುಖ್ಯಮಂತ್ರಿಗಳ ಜನತಾ ದರ್ಶನ, ಜನ ಸ್ಪಂದನ, ಜನ ಸಂಪರ್ಕ, ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಅರ್ಜಿ ಸಲ್ಲಿಸಿದರೂ ವಿಳಂಬ ಮಾಡಿದ್ದಾರೆ. ಓರ್ವ ಕದರಯ್ಯನೆಂಬ ವ್ಯಕ್ತಿಯಿಂದ ಎಂಟು ದಲಿತ ಕುಟುಂಬಕ್ಕೆ ಅನ್ಯಾಯ ಆಗುತ್ತಿದೆ ಎಂದು ದೂರಿದ ಅವರು ಜಿಲ್ಲಾಧಿಕಾರಿ ಆದೇಶಕ್ಕೆ ತಾಲೂಕು ಆಡಳಿತ ಕಾಯುತ್ತಿದೆ. ದೇಶದ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿದ ದಲಿತ ಕುಟುಂಬಕ್ಕೆ ಪರ್ಯಾಯ ಭೂಮಿ ನೀಡುವ ಭರವಸೆಯನ್ನು ನೀಡಿತ್ತು. ಹಾಗಾಗಿ ಸರ್ಕಾರ ಕೂಡಲೇ ದಲಿತರಿಗೆ ಭೂಮಿಯನ್ನು ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮೈಕ್ರೋ ಫೈನಾನ್ಸ್ ಕಿರುಕುಳ; ಲೈಸೆನ್ಸ್ ರದ್ದುಗೊಳಿಸುವಂತೆ ದಸಂಸ ಆಗ್ರಹ
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಸೌಭಾಗ್ಯಮ್ಮ, ತಾಲೂಕು ಸಂಚಾಲಕಿ ಶಿವಮ್ಮ, ಹರಿವೇಸಂದ್ರ ಕೃಷ್ಣಪ್ಪ, ರಾಜಣ್ಣ, ಮಧು, ಚೇತನ್, ದೊಡ್ಡಮ್ಮ ಸೇರಿದಂತೆ ಇತರರು ಇದ್ದರು.
