ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆ ಅರಿವೇಸಂದ್ರ ಗ್ರಾಮದಲ್ಲಿ ನಡೆದ ಅಪ್ರಾಪ್ತೆಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮರೆ ಮಾಚಲು ಪ್ರಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಒತ್ತಾಯಿಸಿದರು.
ತುಮಕೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೆ ಅರಿವೇಸಂದ್ರ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಇಪ್ಪತ್ತು ದಿನಗಳ ಹಿಂದೆಯೇ ಲೈಂಗಿಕ ಕಿರುಕುಳದ ಘಟನೆ ನಡೆದಿದ್ದು, ಬಲಾಢ್ಯರ ಕುತಂತ್ರಗಳಿಂದ ಮರೆಮಾಚಲು ಯತ್ನಿಸಿದ್ದರು. ಸಂತ್ರಸ್ತ ಬಾಲಕಿಯ ಹೇಳಿಕೆಯಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೂರು ದಾಖಲಾದರೂ ಈವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಘಟನೆಯನ್ನು ಮುಚ್ಚುವ ಕೆಲಸ ಮಾಡಿದ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಇಡೀ ರಾಜ್ಯದಲ್ಲಿ 28,000 ಮಂದಿ ಬಾಲ ಗರ್ಭಿಣಿಯರು ಇದ್ದಾರೆ. ಆದರೆ ಇಂತಹ ಪ್ರಕರಣ ತಡೆ ಹಿಡಿಯುವ ಅಧಿಕಾರಿಗಳು 53,000 000 ಮಂದಿ ಇದ್ದಾರೆ. ಆದರೂ ಕೆ ಅರಿವೇಸಂದ್ರ ಗ್ರಾಮದಲ್ಲಿ ನಡೆದ ಸಣ್ಣ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಬೇಕಾದ ಅಧಿಕಾರಿಗಳು ಇಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಕರಣದಲ್ಲಿ ಅಧಿಕಾರಿಗಳೇ ಶಾಮೀಲು ಆಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ” ಎಂದು ಆರೋಪಿಸಿದರು.
“ಜವಾಬ್ದಾರಿಯುತ ಅಧಿಕಾರಿಗಳ ಕರ್ತವ್ಯ ಲೋಪದ ಜತೆಗೆ ತಮ್ಮ ಸಮಾಜಮುಖಿ ಕರ್ತವ್ಯ ಮರೆತ ಕೆಲ ಪತ್ರಕರ್ತರು ಇಡೀ ಪ್ರಕರಣ ಬೆಳಕಿಗೆ ತರುವಲ್ಲಿ ಮುಂದಾಗದೆ ನೈಜತೆ ತಿಳಿಯದೆ ಆರೋಪಿ ಪರ ನಿಂತಿದ್ದು, ಪ್ರಕರಣ ಮುಚ್ಚುವ ಕಾರ್ಯಕ್ಕೆ ಕೈ ಜೋಡಿಸಿರುವುದು ಶೋಚನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೇಲಾಧಿಕಾರಿ ಕಿರುಕುಳ; ಆ್ಯಸಿಡ್ ಕುಡಿದು ಡಿ ದರ್ಜೆ ನೌಕರ ಆತ್ಮಹತ್ಯೆ
“ಮಕ್ಕಳ ಹಕ್ಕು ಆಯೋಗ ಬರೆದ ಪತ್ರದಿಂದ ಬೆಳಕಿಗೆ ಬಂದ ಈ ಪ್ರಕರಣದಲ್ಲಿ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಮೇಲಾಧಿಕಾರಿಗಳು ಅವಲೋಕಿಸಬೇಕಿದೆ. ಘಟನೆ ನಡೆದ ಮರು ದಿನವೇ ಸಂತ್ರಸ್ತ ತಾಯಿ ಮಗು ಹೇಳಿಕೆ ನೀಡಿದ್ದರು ಎನ್ನುವ ಮಾಹಿತಿ ಇದ್ದು, ಈ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳು ತನಿಖೆಗೆ ಒಳಪಡಿಸಬೇಕು. ಪ್ರಕರಣ ಮರೆ ಮಾಚಲು ಯತ್ನಿಸಿದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.