ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌಡಗೆರೆ ಸರ್ವೆ ನಂಬರ್ 20-ಪಿ1’ನಲ್ಲಿ ನಿವೇಶನ ಹಂಚಿಕೆಯಾಗಿರುವ ಅಲೆಮಾರಿಗಳು, ವರ್ಷಾನುವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ತಮ್ಮ ಮೂಲಭೂತ ಹಕ್ಕು-ಸೌಕರ್ಯಗಳನ್ನು ಶೀಘ್ರವೇ ಒದಗಿಸಿಕೊಡುವಂತೆ ಮನವಿ ಮಾಡುವ ಸಲುವಾಗಿ, ಬುಧವಾರದಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿದರು.
ಅಲೆಮಾರಿ ಹಕ್ಕುಗಳ ಹೋರಾಟಗಾರ ಮತ್ತು ಅಲೆಮಾರಿ ಬುಡಕಟ್ಟು ಮಹಾಸಭಾ ಮುಖಂಡ ಹಂದಿಜೋಗರ ರಾಜಪ್ಪನವರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿದ ಅಲೆಮಾರಿ ಮಹಿಳೆಯರು, ಅಲೆಮಾರಿಗಳ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬ ಧೋರಣೆ ಮತ್ತು ಮಂದಗತಿಯ ಕೆಲಸಕಾರ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅವರ ಮೂಲಭೂತ ಸೌಕರ್ಯಗಳನ್ನು ಶೀಘ್ರ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. ತಾವು ಕಚೇರಿಯಲ್ಲಿಲ್ಲದ ಕಾರಣ ಅಲೆಮಾರಿ ಮಹಿಳೆಯರ ಮನವಿಯನ್ನು ತಮ್ಮ ಆಪ್ತ ಕಾರ್ಯದರ್ಶಿಯವರ ಮುಖೇನ ಸ್ವೀಕರಿಸಿರುವ ಜಿಲ್ಲಾ ಪಂಚಾಯತಿ ಸಿಇಒ ಜಿ ಪ್ರಭುರವರು, ಫೋನ್ ಮೂಲಕ ಈದಿನ ಡಾಟ್ ಕಾಮ್ ಜೊತೆ ಮಾತನಾಡಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಲೆಮಾರಿಗಳ ಅಭಿವೃದ್ಧಿ ಕಾರ್ಯಗಳಲ್ಲಿ ತ್ವರಿತ ಪ್ರಗತಿ ತರಲು ಸೂಕ್ತ ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದಾರೆ.

ನಂತರ, ಮಧ್ಯಾಹ್ನ ನಾಲ್ಕು ಗಂಟೆಯ ಆಸುಪಾಸಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್’ರವರನ್ನು ಭೇಟಿಮಾಡಿದ ತಾಲ್ಲೂಕಿನ ಅಲೆಮಾರಿ ಮಹಿಳೆಯರು, ಅವರ ಬಳಿ ತಮ್ಮ ಸಂಕಟಗಳನ್ನು ತೋಡಿಕೊಂಡು, ಶೀಘ್ರ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಮುಂದಿನ ವಾರಗಳಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಲೆಮಾರಿಗಳ ಕುಂದು-ಕೊರತೆಗಳನ್ನು ಪರಿಹರಿಸಲು ತಾಲ್ಲೂಕಿನ ಅಲೆಮಾರಿ ವಸತಿ ಪ್ರದೇಶಗಳಿಗೇ ಭೇಟಿ ನೀಡುವ ಭರವಸೆಯನ್ನು ಅಲೆಮಾರಿ ಮಹಿಳೆಯರಿಗೆ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಅಲೆಮಾರಿ ನಾಗಮ್ಮ ಅವರು ಈದಿನ ಡಾಟ್ ಕಾಮ್ ಗೆ ತಿಳಿಸಿದ್ದಾರೆ.
ಸಂಚಲನ
ಚಿಕ್ಕನಾಯಕನ ಸೀಮೆಯಿಂದ