ಬಗರ್ ಹುಕ್ಕುಂ ಸಾಗುವಳಿದಾರರು ನವೆಂಬರ್ 10ರಂದು ನಮ್ಮ ಭೂಮಿ ನಮಗೆ ಕೊಡಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಚಳವಳಿ ಹಮ್ಮಿಕೊಂಡಿದ್ದೇವೆಂದು, ಬಗರ್ ಹುಕ್ಕಂ ಸಾಗುವಳಿದಾರರ ವೇದಿಕೆಯ ಅಧ್ಯಕ್ಷ ಆರ್.ಎಸ್. ಚನ್ನಬಸಣ್ಣ ತಿಳಿಸಿದರು.
ನಗರದ ಜನಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ, ಕೊರಟಗೆರೆ, ಕುಣಿಗಲ್ ತಾಲೂಕುಗಳಲ್ಲಿ ಬಗರ್ ಹುಕ್ಕಂ ಸಾಗುವಳಿದಾರರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಕಿರುಕುಳ ವಿರೋಧಿಸಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಪ್ರದೇಶಕ್ಕೆ ಒತ್ತಾಯಿಸಿ, ಜಿಲ್ಲೆಯ ಬಗರ್ ಹುಕ್ಕುಂ ಸಾಗುವಳಿದಾರರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಚಳುವಳಿ ನಡೆಸಲು ನಿರ್ಧರಿಸಿದೆ.
ನಗರದ ಭೀಮಸಂದ್ರ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ವೇದಿಕೆಯ ಮುಖಂಡರು ಮಾಹಿತಿ ನೀಡಿದರು.
ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಗಂಗಯ್ಯನಪಾಳ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಅರಣ್ಯ ಇಲಾಖೆಯವರು ಮಹಾರಾಜರ ಕಾಲದ ಆದೇಶವೊಂದನ್ನು ಇಟ್ಟುಕೊಂಡು ಹತ್ತಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಬಗರ್ ಹುಕ್ಕಂ ಸಾಗುವಳಿ ಮಾಡುತ್ತಾ, ಫಾರಂ ನಂ. 50-53 ಮತ್ತು 57 ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾಯುತ್ತಿರುವ ಮತ್ತು ಈಗಾಗಲೇ ಸಾಗುವಳಿ ಪತ್ರ ಪಡೆದಿರುವ ಸಾವಿರಾರು ರೈತರಿಗೆ ಅರಣ್ಯ ಇಲಾಖೆ ಕಿರುಕುಳ ನೀಡಿ, ಪೊಲೀಸರ ಮೂಲಕ ದೌರ್ಜನ್ಯ ನಡೆಸಿ ಒಕ್ಕಲೆಬ್ಬಿಸಲು ಮುಂದಾಗಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ರೈತರು, ಅರಣ್ಯ ಇಲಾಖೆ ಮತ್ತು ಕಂದಾಯ ಅಧಿಕಾರಿಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು ಕೂಡ ಸಭೆ ಕರೆಯದೆ, ಜಿಲ್ಲಾಡಳಿತ ಪರೋಕ್ಷವಾಗಿ ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಲು ಸಹಕಾರಿಯಾಗಿದೆ. ಮುಂದೆ ಏನಾದರೂ ದೊಡ್ಡ ಆನಾಹುತವಾದರೆ ಜಿಲ್ಲಾಡಳಿತವೇ ನೇರ ಹೊಣೆ ಎಂದರು.
ಕೆಪಿಆರ್‌ಎಸ್‌ನ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಗುಬ್ಬಿ ತಾಲೂಕಿನ ಗಂಗಯ್ಯನಪಾಳ್ಯ ವಿಚಾರವಾಗಿ 2020ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಮತ್ತು ಕಾನೂನು ಮಂತ್ರಿಯಾಗಿದ್ದ ಜೆ.ಸಿ. ಮಾಧುಸ್ವಾಮಿ ಅವರು, ಪ್ರತಿಭಟನೆ ನಡೆಸುತ್ತಿದ್ದ ರೈತರು, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ತ್ರಿಪಕ್ಷೀಯ ಸಭೆ ನಡೆಸಿ, ರೈತರು ಮತ್ತು ಅರಣ್ಯ ಇಲಾಖೆ ತಿಕ್ಕಾಟ ಆಗದಂತೆ ಜಂಟಿ ಸರ್ವೆ ನಡೆಸಲು ಆದೇಶ ನೀಡಿದ್ದರು. ಆದರೆ, ಇದುವರೆಗೂ ಸರ್ವೆ ಕಾರ್ಯ ನಡೆದಿಲ್ಲ. ಏಳು ಸಾವಿರ ಎಕರೆಗೂ ಹೆಚ್ಚು ಪ್ರದೇಶದ ಒಂದು ಭಾಗದಲ್ಲಿ ಕಂದಾಯ ಇಲಾಖೆ ಸರ್ವೆ ನಡೆಸಿ ಅದನ್ನೇ ಇಡೀ ಗ್ರಾಮಕ್ಕೆ ಅನ್ವಯ ಮಾಡಲು ಹೊರಟಿದೆ. ಈ ಕುರಿತು 2023ರ ಆಗಸ್ಟ್ 15ರಂದು ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದರು.
ಅಕ್ಟೋಬರ್ 19ರಿಂದ ಅರಣ್ಯ ಇಲಾಖೆಯವರು ಪೊಲೀಸ್ ಸರ್ಪಗಾವಲಿನಲ್ಲಿ ನಾಕಾಬಂದಿ ನಿರ್ಮಿಸಿ, ರೈತರು ಈಗಾಗಲೇ ಸಾಗುವಳಿ ಮಾಡುತ್ತಾ ಬೆಳೆದಿರುವ ಅಡಿಕೆ,ತೆಂಗು,ಮಾವು ಇನ್ನಿತರ ಬೆಳೆಗಳನ್ನು ಕಿತ್ತುಹಾಕಿ ಅರಣ್ಯ ಇಲಾಖೆ ಬೆಳೆಸಿರುವ ಸಸಿಗಳನ್ನು ನಡೆಲಾಗುತ್ತಿದೆ. ಇದನ್ನು ವಿರೋಧಿಸಿ ಕಳೆದ 20 ದಿನಗಳಿಂದ ರೈತರು ಸ್ಥಳದಲ್ಲಿಯೇ ಅಹೋರಾತ್ರಿ ಧರಣಿ ನಡೆಸುತ್ತಿದ್ದರು, ಒಬ್ಬರು ತಿರುಗಿ ನೋಡಿಲ್ಲ. ಪ್ರತಿಭಟನಾ ನಿರತ ರೈತರ ಮೇಲೆ ಕೇಸುಗಳನ್ನು ಹಾಕಿ ಬೇದರಿಸುವ ತಂತ್ರಗಾರಿಕೆ ಅನುಸರಿಸಲಾಗಿದೆ ಎಂದು ಆರೋಪಿಸಿದರು.
ಬಗರ್ ಹುಕ್ಕಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದನ್ನು ಕೈಬಿಡಬೇಕು. ಖಾತೆ, ಪಹಣಿ ಇದ್ದರೂ ಬಲವಂತದಿಂದ ಅರಣ್ಯ ಇಲಾಖೆ ಕಿತ್ತುಕೊಂಡಿರುವ ಭೂಮಿಯನ್ನು ರೈತರಲ್ಲಿಯೇ ಉಳಿಸಬೇಕು. ಈಗಾಗಲೇ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು. ಸಾಗುವಳಿ ಪತ್ರ ಪಡೆದಿರುವ ರೈತರಿಗೆ ದುರಸ್ತಿ ಮಾಡಿ, ಪೋಡ್ ಮಾಡಿ ಪಹಣಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ವೇದಿಕೆ ಒತ್ತಾಯಿಸಿತು. ಈ ವೇಳೆ ದೊಡ್ಡನಂಜಪ್ಪ, ಎನ್.ಕೆ.ಸುಬ್ರಹ್ಮಣ್ಯ, ಬಸವರಾಜು, ಬೋಜರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.