ಮಕ್ಕಳಿಗೆ ಚೈತನ್ಯ ತುಂಬಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ಲೇಖಕಿ ಹಾಗೂ ಸಹ ಪ್ರಾಧ್ಯಾಪಕಿ ಡಾ.ಗೀತಾ ವಸಂತ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯ ಸಹಕಾರದೊಂದಿಗೆ ಆಯೋಜಿಸಿದ್ದ ಕುಣಿಯೋಣ ಬಾರಾ, ಕಲಿಯೋಣ ಬಾರ ಎಂಬ 40 ದಿವಸಗಳ ಮಕ್ಕಳ ಬೇಸಿಗೆ ರಂಗ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
40 ದಿವಸಗಳ ಕಾಲ ನಡೆಯುವ ಈ ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದ ಅವರು ಬರೀ ಪಠ್ಯದ ಜ್ಞಾನವನ್ನು ಮಾತ್ರ ನೀಡದೆ ಸಂಗೀತ, ನೃತ್ಯ, ನಾಟಕದಂತಹ ಕಲೆಗಳ ಪರಿಚಯವನ್ನು ಇಂತಹ ಬೇಸಿಗೆ ಶಿಬಿರಗಳು ಮಾಡುತ್ತದೆ ಎಂದರು.
ಪರೀಕ್ಷೆ ಬಳಿಕ ಪೋಷಕರು ರಜೆಯ ದಿವಸದಲ್ಲಿ ತಮ್ಮ ಮಕ್ಕಳ ಚಟುವಟಿಕೆಗಳ ಕುತೂಹಲ ಹೊಂದಿರುತ್ತಾರೆ ಎಂದ ಗೀತಾ ವಸಂತ್ ಬೇಸಿಗೆ ಶಿಬಿರಗಳು ಅತ್ಯಂತ ಸುಂದರ ಕ್ಷಣಗಳನ್ನು ಕಳೆಯುವ ಸ್ಥಳವಾಗಿದೆ ಎಂದರು.
ವರ್ಷಪೂರ್ತಿ ಓದಿದ್ದಕ್ಕಿಂತ ಬೇರೆಯದೇ ಪಾಠವನ್ನು ಇಲ್ಲಿ ಕಲಿಯಲು ಅವಕಾಶವಿದೆ ಎಂದರು.
ಶಿಬಿರದ ನಿರ್ದೇಶಕ ಮಾರುತೇಶ್ ಕಸಾಪುರ ಸಂಶೋಧನಾ ವಿದ್ಯಾರ್ಥಿಯಾಗಿ, ಬರೆಹಗಾರನಾಗಿ ಹಾಗೂ ರಂಗಭೂಮಿ ಮೂಲಕ ಹೊಸತನಕ್ಕಾಗಿ ತುಡಿಯುತ್ತಿದ್ದಾರೆ. ಅವರಿಗೂ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲಾ ಮಕ್ಕಳಿಗೂ ಒಳಿತಾಗಲಿ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹ ಮಾತನಾಡಿ ತುಮಕೂರು ಜಿಲ್ಲೆ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾದದ್ದು. ಪೌರಾಣಿಕ ರಂಗಭೂಮಿಯಲ್ಲಿ ತುಮಕೂರು ಸದ ಕ್ರಿಯಾಶೀಲವಾಗಿ ತೊಡಗಿಕೊಂಡಿರುತ್ತದೆ. ಪ್ರತಿ ಭಾನುವಾರ ತುಮಕೂರಿನ ರಂಗಮಂದಿರ ಬೇರೆ ಕರ‍್ಯಕ್ರಮಗಳಿಗೆ ಸಿಗದಷ್ಟು ಪೌರಾಣಿಕ ನಾಟಕಕ್ಕೆ ಮೀಸಲಾಗಿರುತ್ತದೆ ಎಂದರು.
ಬಹು ಆಯಾಮದ ಕಲಾ ಪ್ರಕಾರಗಳನ್ನು ಹೊಂದಿರುವ ತುಮಕೂರಿನಲ್ಲಿ ಹಲವಾರು ರಂಗ ತಂಡಗಳು ಸಕ್ರಿಯವಾಗಿದ್ದು ಹೊಸತೊಂದು ಪ್ರಯೋಗಗಳನ್ನು ಕಾಣಿಸುತ್ತಿದೆ. ಮಾರುತೇಶ್ ಕಸಾಪುರ ಸೃಜನಶೀಲ ಯುವಕ. ಸುಮಾರು 40 ದಿವಸಗಳ ಕಾಲ ಶಿಬಿರದಲ್ಲಿ ಭಾಗವಹಿಸಿರುವ ಪ್ರತಿಯೊಂದು ಮಕ್ಕಳು ಹೊಸ ವ್ಯಕ್ತಿತ್ವಗಳಾಗಿ ಹೊರಹೊಮ್ಮಲಿದೆ. 40 ದಿವಸಗಳ ಬಳಿ ಸಮಾರೋಪ ಸಮಾರಂಭಕ್ಕೆ ಖುದ್ದಾಗಿ ಬಂದು ಮಕ್ಕಳಲ್ಲಿ ಆಗಿರುವ ವಿಕಾಸವನ್ನು ನೋಡಲು ಕಾತುರನಾಗಿರುವುದಾಗಿ ತಿಳಿಸಿದರು
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ಆಧುನಿಕ ರಂಗಭೂಮಿ ಅಥವಾ ಪರ್ಯಾಯ ರಂಗಭೂಮಿಗೆ ಚಾಲನೆ ಸಿಕ್ದಿದ್ದೇ ಗುಬ್ಬಿ ಕಂಪನಿಯಿAದ ಎಂದ ಅವರು ಕೆ.ವಿ. ಅಕ್ಷರ ಅವರ ಮಾವಿನಮರದಲ್ಲಿ ಬಾಳೆಹಣ್ಣು ಎಂಬ ಕೃತಿಯನ್ನು ಉಲ್ಲೇಖಿಸಿದರು.
ಭಾರತೀಯ ರಂಗಭೂಮಿಯನ್ನು ಅವಲೋಕನ ಮಾಡಿದರೆ ಕರ್ನಾಟಕದ ಕೊಡುಗೆ ಅದ್ವಿತೀಯ ಎಂದರು. ಹೊಸ ಕಾಲದ ನಿರ್ದೇಶಕರು ಹೊಸ ಹೊಸ ಒಳನೋಟಗಳಿಂದ ನಾಟಕಗಳನ್ನು ಕಟ್ಟುತ್ತಿದ್ದಾರೆ ಎಂದರು. ಕರ್ನಾಟಕ ನಾಟಕ ಅಕಾಡೆಮಿ ಕೂಡ ಯುವಕರಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಮೂಡಿಸಲು ಈಗಾಗಲೇ ನಾಟಕ ರಚನಾ ಶಿಬಿರಗಳನ್ನು ಆಯೋಜಿಸಿದೆ. ಅಲ್ಲದೇ ಹೊಸ ಕಾಲದ ನಿರ್ದೇಶಕರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಶಿಬಿರದ ನಿರ್ದೇಶಕ ಮಾರುತೇಶ್ ಕಸಾಪುರ ಮಾತನಾಡಿ ಮೂಲತಃ ನಾನು ರಂಗಾಯಣದಲ್ಲಿ ರಂಗ ಶಿಕ್ಷಣ ಕಲಿತು ಬಂದವನು. ತುಮಕೂರು ವಿವಿ ಸಹಯೋಗದಲ್ಲಿ ನಡೆಯುತ್ತಿರುವ ಈ ಶಿಬಿರಕ್ಕೆ ನಮ್ಮ ಅಧ್ಯಾಪಕರು ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಸಾಕಷ್ಟು ಮಂದಿ ಈ ಶಿಬಿರಕ್ಕೆ ಜೊತೆಯಾಗಿದ್ದು ಹೊಸ ಹೊಸ ಸಾಧ್ಯತೆಗಳನ್ನು ಮಕ್ಕಳಲ್ಲಿ ಕಾಣಿಸುವ ಇರಾದೆ ಹೊಂದಿರುವುದಾಗಿ ತಿಳಿಸಿದರು. ಬೇಸಿಗೆ ಶಿಬಿರಕ್ಕೂ ಮುಂಚೆ ಮಕ್ಕಳಿಗೆ ಬಣ್ಣ ಹಚ್ಚುವುದರ ಮೂಲಕ ಸ್ವಾಗತಿಸಲಾಯಿತು.