ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಸಂದ ಈ ಸುವರ್ಣ ಸಂದರ್ಭದಲ್ಲಿ ಕನ್ನಡಭಾಷೆ ಉಳಿಸಿ ಬೆಳೆಸುವ ಅನಿವಾರ್ಯವಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ ಕಳವಳ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಪರಿಷ್ಕರಣೆ ಹಾಗೂ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕನ್ನಡಭಾಷೆ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾದ ನಮ್ಮ ಶಿಕ್ಷಣ ಕ್ಷೇತ್ರ ಸೇವೆ ಮರೆತು ಉದ್ಯಮವಾಗಿದೆ. ಮಕ್ಕಳು ಓದುವ ಅಭ್ಯಾಸ ಬೆಳೆಸಿಕೊಂಡು ಶಿಕ್ಷಣ ನಡೆಸಿ ಬದುಕು ಕಟ್ಟಿಕೊಳ್ಳಬೇಕು. ಮಾತೃಭಾಷೆ ಕನ್ನಡ ಶಿಕ್ಷಣದ ಜತೆಗೆ ಸಾಹಿತ್ಯ ಜ್ಞಾನಾರ್ಜನೆ ಹೆಚ್ಚಿಸುತ್ತದೆ. ಹೀಗೆ ಕನ್ನಡಭಾಷೆ ಉನ್ನತಿಗೊಳಿಸಿ ಮುಂದಿನ ಪೀಳಿಗೆಗೆ ಕನ್ನಡ ಹಾಗೂ ಕರ್ನಾಟಕ ಉಳಿಸಿ “ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ಧಲಿಂಗಪ್ಪ ಮನವಿ ಮಾಡಿದರು.
“ಸಾಹಿತ್ಯ ಪರಿಷತ್ತಿನ ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಹುಡುಕುವ ಪ್ರವೃತ್ತಿ ಬೇಡ ಎಂದು ಮತದಾರರ ಪರಿಷ್ಕರಣೆ ಪ್ರತಿ ತಾಲೂಕಿನಲ್ಲಿ ನಡೆದಿದೆ. ಜಿಲ್ಲೆಯಲ್ಲಿ ತುಮಕೂರು ಮತ್ತು ಗುಬ್ಬಿ ತಾಲೂಕಿನಲ್ಲಿ ಅತಿ ಹೆಚ್ಚು ಮತಗಳಿವೆ. ಈ ನಿಟ್ಟಿನಲ್ಲಿ ಮೃತಪಟ್ಟ ಸದಸ್ಯರ ಖಚಿತ ಮಾಹಿತಿ ನೀಡಿ ಸಹಕರಿಸಿ” ಎಂದು ಮನವಿ ಮಾಡಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ ಡಿ ಎನ್ ಯೋಗೀಶ್ವರಪ್ಪ ಮಾತನಾಡಿ, “ಎರಡನೇ ಸಾಹಿತ್ಯ ಚಳವಳಿಗೆ ಗುಬ್ಬಿ ನಾಂದಿ ಹಾಡಿತ್ತು. 12ನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಆರಂಭಿಸಿದ್ದೂ ಕೂಡಾ ಗುಬ್ಬಿ ಕ್ಷೇತ್ರದಲ್ಲಿ ಎಂಬ ಮಾಹಿತಿ ಇದೆ. ಕನ್ನಡದಲ್ಲಿ ವಚನ ರಚಿಸಿದ ಈ ನೆಲದಲ್ಲಿ ಮಹನೀಯರ ಕಾಲ್ಗುಣವಿದೆ. ಹೊಸಳ್ಳಿ ಹಾಗೂ ಹಾಗಲವಾಡಿ ಆಳ್ವಿಕೆಗೆ ಒಳಪಟ್ಟ ಗುಬ್ಬಿ ಇತಿಹಾಸ ಸಾಕಷ್ಟಿದೆ. ಇಂತಹ ವಾತಾವರಣದಲ್ಲಿ ಕನ್ನಡ ಸಾಹಿತ್ಯ ಕೃಷಿ ಚಟುವಟಿಕೆ ನಡೆಯಬೇಕಿದೆ. ಇದನ್ನು ಪರಿಷತ್ತಿನ ಸದಸ್ಯರು ನಡೆಸಬೇಕು” ಎಂದು ಕರೆ ನೀಡಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ ಕೆ ಸಣ್ಣ ಹೊನ್ನಯ್ಯ ಕಂಟಲಗೆರೆ ಮಾತನಾಡಿ, “ನಾಟಕಕಾರರು, ಜನಪದ ಸಾಹಿತ್ಯದಲ್ಲಿ ಗುಬ್ಬಿ ಬಹಳಷ್ಟು ಹೆಸರು ಮಾಡಿದೆ. ಈ ಸಾಹಿತ್ಯ ಕ್ಷೇತ್ರದಲ್ಲಿ ಪರಿಷತ್ತಿನ ಕೆಲಸ ಪರಿಷ್ಕರಣೆ ನಂತರದಲ್ಲಿ ನಿರಂತರ ನಡೆಯಲಿ ಎಂದ ಅವರು ಸನ್ಮಾನ ಸ್ವೀಕರಿಸಿದ ಮಕ್ಕಳು ನೂರಕ್ಕೆ ನೂರು ಅಂಕವನ್ನು ಬದುಕಿನಲ್ಲಿಯೂ ಕೂಡಾ ಪಡೆಯಿರಿ” ಎಂದು ಆಶಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಯತೀಶ್ ಮಾತನಾಡಿ, “ಕಾರ್ಯಕಾರಿಣಿ ಸಭೆ ನಡೆಸಿ ತಾಲೂಕು ಸಮ್ಮೇಳನ ನಡೆಸುವುದು ಹಾಗೂ ಕನ್ನಡಭವನ ನಿರ್ಮಾಣದ ಬಗ್ಗೆ ಚರ್ಚಿಸಲಾಗುವುದು. ಚೇಳೂರು ಹೋಬಳಿ ಕೇಂದ್ರದಲ್ಲಿ ನಡೆದಿದ್ದ ಯಶಸ್ವಿ ಸಮ್ಮೇಳನ ಗುಬ್ಬಿಯಲ್ಲಿ ನಡೆಸಲಾಗುವುದು. ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ಪಿಯುಸಿ ಹಾಗೂ 125 ಅಂಕ ಪಡೆದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹ ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಿವಶರಣ ಹಡಪದ ಅಪ್ಪಣ್ಣನವರ ತತ್ವ ಆದರ್ಶಗಳು ಅನನ್ಯ: ದುರುಗಣ್ಣ
ಈ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಮಾತನಾಡಿ ಗುರು ಪೂರ್ಣಿಮಾ ಹಿನ್ನಲೆ ಎಲ್ಲಾ ಗುರುವೃಂದಕ್ಕೆ ಗೌರವ ಸಮರ್ಪಿಸಿದರು.
ವೇದಿಕೆಯಲ್ಲಿ ನಿವೃತ್ತ ಡಿಡಿಪಿಐ ಎಚ್ ಕೆ ನರಸಿಂಹಮೂರ್ತಿ, ಕಸಾಪ ಕಾರ್ಯದರ್ಶಿಗಳಾದ ಎಂ ಬಿ ಕುಮಾರಸ್ವಾಮಿ, ಜಯಣ್ಣ, ಕಸಬ ಹೋಬಳಿ ಅಧ್ಯಕ್ಷ ರವೀಶ್, ಚೇಳೂರು ಹೋಬಳಿ ಅಧ್ಯಕ್ಷ ಹರೀಶ್, ಸಂಘಟನಾ ಕಾರ್ಯದರ್ಶಿ ದಯಾನಂದ ಸರಸ್ವತಿ, ಬಿ ಎನ್ ದಯಾನಂದ್, ಜಗದೀಶ್, ಸುರೇಶಯ್ಯ ಸೇರಿದಂತೆ ಇತರರು ಇದ್ದರು.