ಸರ್ವ ಧರ್ಮದವರೂ ಜೀವನ ಮಾಡುವ ನಮ್ಮ ದೇಶದಲ್ಲಿ ಸಮಬಾಳು ಸಮಪಾಲು ಒದಗಿಸಿ ಸಮಾನತೆ ಸಾಧಿಸುವುದೇ ಸಂವಿಧಾನದ ಆಶೋತ್ತರವಾಗಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
“ಶೋಷಿತ ವರ್ಗಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಚನೆಯಾದ ಅಧಿಕಾರಯುತ ಸಂವಿಧಾನ ಭಗವದ್ಗೀತೆ ಗ್ರಂಥದಂತೆ ಪವಿತ್ರ ಎನಿಸಿದೆ” ಎಂದರು.
“ನಮ್ಮ ಸಮಾಜದಲ್ಲಿ ಮೇಲು-ಕೀಳು ಎಂಬ ಅಸಮಾನತೆ ಧೋರಣೆ ದೂರ ಮಾಡಿದ ಸಂವಿಧಾನ ಇನ್ನೂ ಸಹಬಾಳ್ವೆ ನೀಡುವಲ್ಲಿ ಯಶಸ್ವಿಯಾಗಬೇಕಿದೆ. ರೈತ ದೇಶದ ಬೆನ್ನೆಲುಬು ಎನ್ನಲಾಗಿದೆ. ಆದರೆ ರೈತ ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತನ ಕೊಬ್ಬರಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ಟೊಮೆಟೊ ಬೆಳೆಯನ್ನು ₹2 ಇದ್ದಾಗಲೂ ಬೆಳೆಯುತ್ತಾನೆ. ಒಮ್ಮೆ ₹200 ಬಂದಾಗ ಮಾತ್ರ ಲಾಭ ನೋಡುತ್ತಾನೆ. ಈ ತಾರತಮ್ಯ ಹೋಗಿ ರೈತನೇ ಬೆಳೆಗೆ ಬೆಲೆ ನಿಗದಿ ಮಾಡುವ ಕಾಲ ತರಲು ಈ ಸಂವಿಧಾನ ಸಹಕಾರಿಯಾಗಲಿದೆ” ಎಂದರು.
ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ತಹಶೀಲ್ದಾರ್ ಬಿ ಆರತಿ ಮಾತನಾಡಿ, “ಸಂವಿಧಾನ ರಚನೆಯಾಗಿ ಅಸ್ಥಿತ್ವಕ್ಕೆ ಬಂದ ನಂತರದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಇಡೀ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅನೇಕ ಗಣ್ಯರ ಬಲಿದಾನದ ಸ್ವಾತಂತ್ರ್ಯಕ್ಕೆ ಅರ್ಥ ತಂದ ಪ್ರಜಾಪ್ರಭುತ್ವ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಅವರ ಕನಸಿನಂತೆ ಸಮಾನತೆ ಸಾಧಿಸುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕು” ಎಂದರು.
ಉಪನ್ಯಾಸಕ ಕಾಳಪ್ಪ ಬಡಿಗೇರ್ ವಿಶೇಷ ಉಪನ್ಯಾಸ ನೀಡಿ ದೇಶದ ಗಣರಾಜ್ಯೋತ್ಸವ ಆಚರಣೆ ಬಗ್ಗೆ ವಿವರಣೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಪೊಲೀಸರು, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು. ನಂತರ ದೆಹಲಿಯಲ್ಲಿ ಶೌರ್ಯ ಚಕ್ರ ಪಡೆದಿರುವ ಕ್ಯಾಪ್ಟನ್ ರಾಕೇಶ್ ಅವರ ತಂದೆ ತಾಯಿ ಅವರಿಗೆ ವಿಶೇಷ ಗೌರವದಿಂದ ಸನ್ಮಾನಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ವೇದಿಕೆ ಕಾರ್ಯಕ್ರಮ ಅಂತಿಮಗೊಂಡಿತು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಏಕ ಉಪಯೋಗಿ ಪ್ಲಾಸ್ಟಿಕ್ ಬಳಕೆಗೆ ಎಚ್‌ಡಿಎಂಸಿ ಕಡಿವಾಣ
ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಪಂ ಇಒ ವಿ ಪರಮೇಶ್ ಕುಮಾರ್, ಬಿಇಓ ಪಾಲಾಕ್ಷ್ಯಯ್ಯ, ಪ್ರಾಚಾರ್ಯ ಡಾ.ಪ್ರಸನ್ನಕುಮಾರ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ತಾಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ಸೇರಿದಂತೆ ಪಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.