ಕರ್ನಾಟಕ ರಾಜ್ಯ ರೈತ ಸಂಘ,ತುಮಕೂರು ತಾಲೂಕು ಶಾಖೆ ವತಿಯಿಂದ ಹೆಬ್ಬೂರಿನ ದಿ.ಪುಟ್ಟಣ್ಣಯ್ಯ ರೈತ ಭವನದಲ್ಲಿ 45ನೇ ರೈತ ಹುತಾತ್ಮ ದಿನವನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ರೈತ ಸಂಘದ ಹುಟ್ಟಿಗೆ ಕಾರಣರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎಂ.ಡಿ.ಸುಂದರೇಶನ್,ದಿ.ಪುಟ್ಟಣ್ಣಯ್ಯ ಸೇರಿದಂತೆ ಹಿರಿಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,1980ರಲ್ಲಿ ಮಲಪ್ರಭ ಅಚ್ಚುಕಟ್ಟು ಪ್ರದೇಶದ ಜನರಿಗೆ ಅಂದಿನ ಗುಂಡೂರಾವ್ ನೇತೃತ್ವದ ಸರಕಾರ ನೀರು ನೀಡದೆ,ನೀರಿನ ತೆರಿಗೆ ವಿಧಿಸಿದ್ದರ ವಿರುದ್ದವಾಗಿ ನವಲಗುಂದದಲ್ಲಿ 92 ದಿನಗಳ ಕಾಲ ನಡೆದ ಹೋರಾಟ ನಡೆದಿತ್ತು.ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ರೈತ ಮುಖಂಡರಿಗೆ ಅವಕಾಶ ನೀಡದೆ ಇರುವುದನ್ನು ಖಂಡಿಸಿ 1981 ರ ಜುಲೈ 21ರಂದು ನಡೆದ ಪ್ರತಿಭಟನೆಯ ವೇಳೆ ನಡೆದ ಲಾಠಿ ಚಾರ್ಜ್, ಗೋಲಿಬಾರ್‌ನಿಂದ ಇಬ್ಬರು ರೈತರು ಹುತಾತ್ಮರಾದರೆ, ಓರ್ವ ಸಬ್‌ಇನ್ಸ್ಪೆಕ್ಟರ್ ಸಹ ಸಾವನ್ನಪ್ಪುತ್ತಾರೆ. ಗುಂಡಿಗೆ ಬಲಿಯಾದ ರೈತರ ನೆನಪಿಗಾಗಿ ಅಂದಿನಿಂದ ಪ್ರತಿವರ್ಷದ ಜುಲೈ 21ನೇ ದಿನಾಂಕವನ್ನು ರೈತ ಹುತಾತ್ಮ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

1980ರಲ್ಲಿ ರೈತ ಸಂಘದ ಮುಖಂಡರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎಂ.ಡಿ.ಸುಂದರೇಶನ್, ರುದ್ರಪ್ಪ ಇವರುಗಳು ನರಗುಂದ, ನವಲಗುಂದ ಭಾಗದಲ್ಲಿ ಪ್ರವಾಸ ಮಾಡಿ, ರೈತರನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ರೈತ ಸಂಘವನ್ನು ಹುಟ್ಟು ಹಾಕಿ, ಗುಂಡೂರಾವ್ ಸರಕಾರದ ವಿರುದ್ದ ಹೋರಾಟವನ್ನು ರೂಪಿಸುತ್ತಾರೆ. ಸರಕಾರ ರೈತರ ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ ಲಾಠಿ ಚಾರ್ಜ್, ಗೋಲಿಬಾರ್ ಮುಂದುವರೆಸುತ್ತದೆ. ಇದರ ಭಾಗವಾಗಿ ಮಂಡ್ಯ, ಮೈಸೂರು, ಗೆಜ್ಜಲಗೆರೆ, ರೋಣ,ದುದ್ದ, ನಿಪ್ಪಾಣಿ ಮತ್ತಿತರರ ಕಡೆಗಳಲ್ಲಿ ನಡೆದ ಹೋರಾಟದಲ್ಲಿ 130 ಜನರ ರೈತರ ಸರಕಾರದ ಗುಂಡಿಗೆ ಬಲಿಯಾಗುತ್ತಾರೆ. ಇವರ ನೆನಪಿಗಾಗಿ ರೈತ ಹುತಾತ್ಮ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.ಅಂದು ಹೋರಾಟದ ಮಂಚೂಣಿಯಲ್ಲಿದ್ದ ಅನೇಕರು ಇಂದು ನಮ್ಮೊಂದಿಗೆ ಇಲ್ಲ.ಅವರೆಲ್ಲರಿಗೂ ಕರ್ನಾಟಕ ರೈತ ಸಂಘ ಹಸಿರು ನಮನಗಳನ್ನು ಸಲ್ಲಿಸುತ್ತದೆ ಎಂದು ಎ.ಗೋವಿಂದರಾಜು ನುಡಿದರು.
ದೇವನಹಳ್ಳಿ ಚನ್ನರಾಯಪಟ್ಟಣದ ಸುತ್ತಮುತ್ತಲ 17 ಹಳ್ಳಿಗಳ 1787 ಎಕರೆ ಫಲವತ್ತಾದ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಮುಂದಾಗಿ, ನೋಟಿಪಿಕೇಷನ್ ಹೊರಡಿಸಿದ್ದ ಸರಕಾರದ ನಡೆಯನ್ನು ಖಂಡಿಸಿ ಸುಮಾರು 3 ವರ್ಷಗಳಿಗೂ ಹೆಚ್ಚು ಕಾಲ ನಡೆದ ಹೋರಾಟಕ್ಕೆ ಮಣಿದ ಸರಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದೆ.ಈ ಹೋರಾಟದ ಯಶಸ್ಸನ್ನು ಮಡಿದ ಎಲ್ಲಾ ರೈತಮುಖಂಡರಿಗೆ ಅರ್ಪಿಸುತ್ತೇವೆ. ರೈತರ ಮುಂದೆ ಸಾಕಷ್ಟು ಸಮಸ್ಯೆಗಳಿವೆ, ವೈಜ್ಞಾನಿಕ ಬೆಂಬಲ ಬೆಲೆ, ವಿದ್ಯುತ್ ಖಾಸಗೀಕರಣ, ಫಲವತ್ತಾ ಭೂಮಿ ಸ್ವಾಧೀನ ವಿರೋಧಿಸಿ, ರೈತ ಸಂಘ ಹೋರಾಟ ನಡೆಸುತ್ತಿದೆ. ಬಂಡವಾಳಗಾರರ ಎಜೆಂಟ್‌ರಂತೆ ಕೆಲಸ ಮಾಡುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸುತ್ತೇವೆ ಎಂದು ಎ.ಗೋವಿಂದರಾಜು ನುಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ವೆಂಕಟೇಗೌಡರು, ತಿಮ್ಮೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರೇಹಳ್ಳಿ ಮಂಜುನಾಥ್, ಮುಖಂಡರಾದ ರಾಜಣ್ಣ, ಬಸವರಾಜು, ಜಿ.ಟಿ.ಕೃಷ್ಣಪ್ಪ, ಶಬ್ಬೀರ ಪಾಷ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.